Friday, June 17, 2011

ನಮಗೆ ದುಡ್ಡಿನ ಬೆಲೆ ಗೊತ್ತಿದ್ಯಾ

ಇಸ್ತ್ರಿಯಂಗಡಿಗೆ ಹೋಗಿದ್ದೆ.. ಅಲ್ಲಿ ಅವ ಹೇಳ್ತಾ ಇದ್ದ. ೧ ಚೀಲ ಇದ್ದಿಲಿಗೆ ೧೫೦೦ ರೂಪಯಿ. ಒಂದು ವರ್ಷನೂ ಬರಲ್ಲ ಈ ಇಸ್ತ್ರಿ ಪೆಟ್ಟಿಗೆ, ಅದ್ಕೆ ೪೦೦೦ ರೂಪಾಯಿ. ಬಟ್ಟೆಗೆ ೩ ರೂ ಕೇಳಿದ್ರೆ ನೀವು ಹಿಂದೆ ಮುಂದೆ ನೋಡ್ತೀರ. ಜೀವನ ಕಷ್ಟಾಪ್ಪ. ಅವನು ಹೇಳೋದು ಕೇಳ್ದಾಗ ಅನುಸ್ತು.. " ನಮಗೆ ದುಡ್ಡಿನ ಬೆಲೆ ಗೊತ್ತಿದ್ಯಾ" ಅಂತ.|1|

ಅಪ್ಪನೋ ಅಮ್ಮನೋ ಬೇಕಾದಾಗ ದುಡ್ಡು ಕೊಟ್ಟಿರ್ತಾರೆ. ಬ್ಯಾಂಕ್ ಸಾಲ ಮಾಡಿ ಓದೋ ಹಲ ಗೆಳೆಯರಿಗೂ A.T.M ಇಂದ ದುಡ್ಡು ಬೇಕಂದಾಗ ಸಿಗುತ್ತೆ ಅನ್ನೋ ಭರವಸೆ ಇರುತ್ತೆ. ಅದ್ರ ಹಿಂದೆ ನಮ್ಮ ತಂದೆ/ತಾಯಿ ಶ್ರಮ ಎಷ್ಟಿರುತ್ತೆ ಅಂತ ಎಂದಾದ್ರು ಯೋಚ್ನೆ ಮಾಡಿರ್ತೀವಾ? ಪ್ರತೀ ಪೈಸೆ ಹಿಂದೆನೂ ಎಷ್ಟು ಶ್ರಮ ಅಡಗಿರುತ್ತೆ ಅಂತ ಯೋಚ್ನೆ ಮಾಡ್ತೀವಾ?
ಖರ್ಚು ಮಾಡೋದು ತಪ್ಪು ಅಂತ ನಾ ಹೇಳ್ತಿಲ್ಲ. ಆದ್ರೆ ನಾವು ಖರ್ಚು ಮಾಡ್ತಿರೋ ಪ್ರತೀ ರೂಪಾಯಿ ಬೆಲೆ ನಮಗೆ ಗೊತ್ತಾ ಅನ್ನೋ ಸಂದೇಹ ಸುಮಾರು ಸಲ ಕಾಡುತ್ತೆ. ದುಡ್ಡು ಕೊಟ್ಟು ತಂಗಡಿರ್ತೀವಿ. ಸ್ವಲ್ಪ ಉಪ್ಪೋ , ಖಾರಾನೋ ಜಾಸ್ತಿ ಆಯ್ತು ಅಂದ್ರೆ ಹಾಗೆ ದಂಡ ಮಾಡ್ತೀವಿ.. ಮನೇನಲ್ಲೂ ಎಷ್ಟೋ ಸಲ ತಿಂಡಿ ತಿನ್ನದೇ ಜಗಳ ಮಾಡ್ಕೊಂಡು ಹೊರಟು ಬಂದಿರ್ತೀವಿ.. ದುಡ್ಡಿರುತ್ತಲ್ಲಾ.. ಕೊಟ್ರೆ ಬೇರೆದು, ಒಳ್ಳೇದು ಸಿಗುತ್ತೆ ಅನ್ನೋ ಭಾವನೆ ಅಲ್ವಾ?. . ಆದ್ರೆ ನಮಗೆ ಬೇಜಾರು ಮಾಡ್ಬಾರ್ದು ಅಂತ ಸುಮ್ಮನಿರೋ ಅಪ್ಪ-ಅಮ್ಮ, ದುಡ್ಡು ಕೊಟ್ಟಿದೀವಿ ಅಂತ ಸುಮ್ಮನಿರೋ ಹೋಟಲಿನವರು.. ಹೀಗೆ ಏನು ಕಾಣ್ತಿದೆಯೋ ಆದರ ಹಿಂದಿನ ವಾಸ್ತವ ಅರಿಯೋಕೆ ಪ್ರಯತ್ನನೇ ಮಾಡಲ್ಲ ಅಲ್ವಾ? ನೀರು ತರ ಖರ್ಚು ಮಾಡ್ತಿರೋ ದುಡ್ಡಿನ ಬೆಲೆ ಬಗ್ಗೆ ಒಂದಿನನಾದ್ರೂ ತಲೆ ಕೆಡ್ಸ್ಕಂಡಿರ್ತೀವಾ? |2|

ಬಸ್ ಅಲ್ಲಿ ಹೋಗ್ತಿರ್ಬೇಕಾದ್ರೆ ಅಜ್ಜಿ ಒಬ್ರು ಸಿಕ್ಕಿದ್ರು. ಅವ್ರತ್ರ ತಮ್ಮೂರಿಗೆ ಹೋಗಲು ಬೇಕಾದಷ್ಟು ಹಣ ಇರಲಿಲ್ಲ.. ಬಸ್ ದರ ಏರಿದ್ದರಿಂದ ದುಡ್ಡು ಕಮ್ಮಿ ಬಿದ್ದಿತ್ತು. ಸಹಾಯಕ್ಕೂ ಯಾರೂ ಇಲ್ಲ. ಬೇಡದ ವಿಷ್ಯಗಳಿಗೆ ದುಡ್ಡು ಖರ್ಚು ಮಾಡ್ಬೇಕಾದ್ರೆ ಸುಮಾರು ಸಲ ಕಂಡಕ್ಟರ್ ಹತ್ರ ಅಜ್ಜಿ ಅಂಗಲಾಚುತ್ತಿದ್ದ ಆ ದೃಶ್ಯ ನೆನಪಾಗಿ ಒಂದು ರೀತಿ ಪಾಪಪ್ರಜ್ನೆ ಕಾಡುತ್ತದೆ.ಇಂಥ ದೃಶ್ಯ ನೀವು ನೋಡಿರಬಹುದು. ಅವರ ಬಡತನಕ್ಕೆ ಖಂಡಿತಾ ನಾವು ಕಾರಣರಲ್ಲದೇ ಇರಬಹುದು. ಆದ್ರೆ ಪ್ರತೀ ರೂಪಾಯಿನೂ ಮತ್ತೆ ಮತ್ತೆ ಎಣಿಸಿ ಎಲ್ಲಾದ್ರೂ ಜಾಸ್ತಿ ದುಡ್ಡಿನ ಲೆಕ್ಕ ಸಿಗತ್ತೇನೋ ಅಂತ ಎಣಿಸ್ತಿದ್ದಿನ್ನ ನೆನೆಸಿಕೊಂಡ್ರೆ, ನೋಟುಗಳನ್ನೇ ಉಡಾಯಿಸೋ , ಒಂದು ನೀಲಿ ನೋಟು ಕಮ್ಮಿ ಕೋಟ್ರು ಅಂತ ಮಾನೇಲಿ ಜಗಳ ಕಾಯೋ ನಮ್ಮನ್ನು ನೆನಸಿಕೊಂಡ್ರೆ.. ಒಂಥರಾ ಅನ್ಸುತ್ತೆ. ಅಗರ್ಭ ಶ್ರೀಮಂತರೇ ಇರಬಹುದು, ಕಡು ಬಡವರೇ ಇರಬಹುದು. ಯಾರೋ ನಮ್ಮನ್ನ ನೋಡ್ತಾ ಇರಬಹುದು, ನೋಡದೇ ಇರಬಹುದು. ಆದರೆ ನಮ್ಮ ಮನಸ್ಸಾಕ್ಷಿ ನಮ್ಮನ್ನ ನೋಡ್ತಾ ಇರತ್ತಲ್ವಾ? ಅದು ಪ್ರತೀ ಸಲ ಕೇಳ್ತಾ ಇರತ್ತೆ. "ನಿಂಗೆ ದುಡ್ಡಿನ ಬೆಲೆ ಗೊತ್ತಾ" ಅಂತ .. ನಂಗಂತೂ ಇಲ್ಲಿವರೆಗೂ ಉತ್ರ ಹೇಳಕ್ಕೆ ಆಗ್ಲಿಲ್ಲ. ನಿಮಗೆ ?|3|

No comments:

Post a Comment