Friday, August 5, 2011

ಹಳ್ಳೀಗ್ಬಂದ ಗುಂಡಣ್ಣ ಮತ್ತು ಆನ್ಲೈನ್ ಕೋರ್ಸು

ಪಟ್ಣದಿಂದ ಜಗ್ಗಣ್ಣನ ಮಗ ಗುಂಡಣ್ಣ ಬತ್ತವ್ನಂತೆ. ಅದೆಂತದೋ ಕಾಂಪೂಟ್ರಂತ ಡಬ್ಬ ತತ್ತವ್ನಂತೆ ಅನ್ನೋ ಸುದ್ದೀನ ಊರೆಲ್ಲಾ ಟಾಂ ಟಾಂ ಮಾಡ್ತಿದ್ದ ಜಮೀನ್ದಾರ ಜಗ್ಗಣ್ಣನ ಮನೆ ಕೆಲ್ಸದ ಕಿಟ್ಟಪ್ಪ. ಊರಿಗೆ ಬರೋ ಮಗೀನ ತತ್ತಾರಲಾ ಅಂತ ಧಣೀರೆ ಕಿಟ್ಟಪ್ಪಂಗೆ ಗಾಡಿ ಕಟ್ಕಂಡು ಹೋಗಕ್ಕೆ ಹೇಳಿದ್ರು. ಕಿಟ್ಟಪ್ಪ ರಾಜ್ಕುಮಾರ್ನ ಅಣ್ಣತಂಗಿ ಸಿನೀಮಾದಾಗೆ ನೋಡಿದ್ನಂತೆ. ಅದ್ರಲ್ಲಿ ಪಟ್ಣದ ಹೀರೋ ತನ್ನಳ್ಳಿಗೆ ಬಂದಾಗ ಅವನ ಕೋಟು ಬೂಟೇನು ,ಅವಂಗೆ ಹಾರ ತುರಾಹಿ ಹಾಕೋದೇನೂ.. ಅಬ್ಬಬ್ಬಾ ಅಂದ್ಕಂಡಿದ್ದ. ಅದೇ ತರ ಚಿಕ್ಕೆಜಮಾನ್ರೂ ಬತ್ತಾರೆ ಅಂತ ಕನ್ಸು ಕಾಣ್ತಾ ಇದ್ದ. ಮುಖ, ಮೈಮೇಲೆಲ್ಲಾ ಯಾರೋ ನೀರು ಹುಯ್ದಂಗಾಗಿ ಕಣ್ಬಿಟ್ಟ. ಯಾವನ್ಲೇ ಅವ ಕೆಸ್ರು ಹಾರಿಸಿದವ.. ಅಂತ ಬಾಯ್ತುದೀವರ್ಗೂ ಬಂದಿತ್ತು.ನೋಡಿದ್ರೆ ಪಟ್ಣದ ಬಸ್ಸು ಹಾರ್ನು ಹೊಡಿತಾ ಐತೆ. ಯಾವುದೋ ಪಟ್ಣದ ಹುಡ್ಗಿ ಇಳಿತಾ ಐತೆ.
ಅದೆಂತದೋ ಪ್ಯಾಂಟು, ಶರ್ಟು, ಕನ್ನಡಕ ಹಾಕ್ಕೊಂಡು. ಒಂದ್ಕಿವಿಗೆ ರಿಂಗು ಬೇರೆ. ಈಗಿನ ಹುಡ್ಗೀರು ಹಿಂಗೆ ಇರ್ಬೇಕು, ಆದ್ರೂ ಕೂದಲು ಬಿಟ್ಕಂಡು , ಕಿವಿಗೆ ರಿಂಗೆಲ್ಲಾ ಹಾಕ್ಕಂವ್ಳಲ್ಲಾ ಅಂತ ಸಮಾಧಾನ ಮಾಡ್ಕಂಡ. ಅಷ್ಟರಲ್ಲೇ ಆ ಹುಡ್ಗಿ ಇವ್ನ ಹತ್ರವೇ ಬಂದು ಜಮೀನ್ದಾರ ಜಗ್ಗಣ್ಣ ಅವ್ರ ಮನೇ ಇಂದ ನನ್ನ ಕರ್ಕೊಂಡೋಗಕ್ಕೆ ಯಾರೋ ಬರ್ತಾರೆ ಅಂದಿದ್ರು. ನೀವ್ಯಾರ್ನೂ ನೋಡಿದ್ರಾ ಅಂದ್ಳು.

ಕಿಟ್ಟಪ್ಪಂಗೆ ಶಾನೆ ಗಾಬ್ರಿ ಆತು. ಕೊನೆಗೆ ಪಟ್ಣದಿಂದ ಗುಂಡಣ್ಣ ಇವತ್ತು ಬರಾಕಿಲ್ಲೇನೋ, ಇವ್ಳ್ನೇ ಕರ್ಕಂಬಾ ಅಂತ ಹೇಳೋಕೆ ಧಣೀರು ಮರ್ತಿರ್ಬೇಕು ಅಂದ್ಕಂಡ. ನೋಡೋಕೆ ಹುಡ್ಗಿ ಹಂಗಿದ್ರೂ ಧ್ವನಿ ಹುಡ್ಗನಂಗೈತಲಾ ಅಂತ ಆಶ್ಚರ್ಯ ಆತು. ಆದ್ರೂ ಅದೆಲ್ಲಾ ಕೇಳೋದು ಸರಿಗಿರಾಕಿಲ್ಲ ಅನುಸ್ತು. ಸರಿ ತಂಗಿ ಅವ ನಾನೇಯ. ಹತ್ತು ಗಾಡಿ ಅಂದ. ಆ ಹುಡ್ಗಿ ಸುತ್ತ ಎಲ್ಲಾ ನೋಡಿ ತನ್ನೇ ಕರೀತಿರದು ಅಂತ ಗೊತ್ತಾದ ಮೇಲೆ ನಾ ಯಾರು ಅಂತ ಗೊತ್ತಾಗ್ಲಿಲ್ವಾ? ಕಿಟ್ಟಪ್ಪನೋರೇ ಅಂತು. ಕಿಟ್ಟಪ್ಪಂಗೆ ಕೊನೆಗೂ ಜ್ನಪ್ತಿಗೆ ಬರಲೇ ಇಲ್ಲ. ಅದು ಕಿಟ್ಟಪ್ಪಾ ನಾನು ಗುಂಡು ಅನ್ನೋದೆ? ಕಿಟ್ಟಪ್ಪ ತಲೇ ತಿರುಗಿ ಬೀಳೋದೊಂದು ಬಾಕಿ. ಎಂಥಾ ಕಾಲ ಬಂತು ದೊರೆ. ಏನೀ ವೇಷ ಅಂದ. ಇದು ಫ್ಯಾಷನ್ ಕಿಟ್ಟಪ್ಪ ನಿಂಗೆದೆಲ್ಲಾ ತಿಳ್ಯಕಿಲ್ಲಾ, ನಡೀ ಮನಿಗೆ ಅಂದ.


ಮನೇಲಿ ಮಗ ಬತ್ತಾನೆ ಅಂತ ಈರವ್ವ ಆರ್ತಿ ತಟ್ಟೆ ಹಿಡ್ಕಂಡು ಕಾದಿದ್ಲು. ಕಿಟ್ಟಪ್ಪ ನೋಡಿದ್ರೆ ಯಾರೋ ಗೌರೀನ ಕರ್ಕಂಬತ್ತವ್ನೆ. ಅಯ್ಯೋ ಅದರ ವ್ಯಾಷನಾ? ಇಶ್ಶೀ.. ಬರ್ಲಿ ಸರೀ ಮಂಗಳಾರತಿ ಮಾಡ್ಬೇಕು ಅಂತ ಕಾಯ್ತಾ ಇದ್ರು. ಬಂದವ್ನೇ ಹಾಯ್ ಮಮ್ ನಾನು ನಿನ್ಗುಂಡು ಅಂತ ನಮಸ್ಕಾರ ಮಾಡದೇ ಅದು. ಬಾಯ್ಬಿಟ್ಕಳ ಕತೆ ಈಗ ಈರಮ್ಮಂದು. ಮಗೀನ ನೋಡ್ದೇ ೨ ವರ್ಶ ಆತು. ಅಂದೆಂಥದೋ ಕಂಪ್ನಿ , ಅದ್ಕೆಂತದೋ ತಯಾರಿ ಹೇಳಿ ಅವ ಮನೆ ಕಡೀಗಿ ಬರ್ಲಿಲ್ಲ. ಈಗಿದ್ಯಾವ್ದೋ ಮೂದೇವಿ ಮಮ್ಮಂತಾಳಲ್ಲಾ ಅಂತ್ಕಳ ಹೊತ್ಗೆ ಜಗ್ಗಣ್ಣ ಬಂದ್ರು. ಅವ್ರು ೨ ತಿಂಗ್ಳಿಂದೇ ಮಗೀನ ನೋಡ್ಕಂಬಂದಿದ್ರು. ಹಂಗಾಗಿ ಇವ್ನೇ ಕಣೇ ನಂ ಗುಂಡ ಅಂದ್ರು ಈರವ್ವಂಗೆ. ಎಷ್ಟು ಓದ್ತೀಯೋ ಮಗ್ನೇ, ಕ್ಷೌರ ಮಾಡ್ಸಕ್ಕೂ ಟೇಮಿಲ್ಲನೋ ನನ್ನ ರಾಜಾ ಅಂತೇಳಿ ನಾಯಿ ಕಣ್ಣು, ನರೀ ಕಣ್ಣಿಂದೆಲ್ಲಾ ದಿರುಷ್ಟಿ ತೆಗೆದ್ಳು.

ಬಂದವ್ನೇ ಸ್ನಾನನೂ ಮಾಡ್ಲಿಲ್ಲ. ತಿಂಡೀನೂ ತಿನ್ಲಿಲ್ಲ. ಅದೆಂಥದೋ ಡಬ್ಬಿ ತೆಗದ್ನಪ್ಪಾ ಮಗರಾಯ. ಎಲ್ಲಾ ಬಿಚ್ತಾ ಇದೇ ಕಿಟ್ಟಪ್ಪಾ ಕಂಪ್ಯೂಟ್ರು ಅಂದ. ಕಿಟ್ಟಪ್ಪಂಗೇನು ತಿಳೀತದೇ? ಬಾಯ್ಬಿಟ್ಕಂಡು ನೋಡ್ದ. ಅಷ್ಟರಲ್ಲಿ ಈರವ್ವ ಬಂದು ಮಗನ ಕಿವೀ ಹಿಡ್ಕಂಡು ಒಳಕ್ ಕರ್ಕಂಡೋದ್ರು. ನೀ ಊರಿಗೇ ಇಂಜೆನೇರು ಆದ್ರೂ ನಂಗೆ ಮಗಾನೆ. ತಿಂಡಿ ತಿಂದು ಅಮೇಲೆ ಎಂತಾರು ಮಾಡ್ಕ ಹೋಗು ಅಂದ್ಳು. ಮಗ ಬತ್ತಾನೆ , ಇಷ್ಟ ಅಂತ ರೊಟ್ಟಿ, ಗುರೆಳ್ಳು ಚಟ್ನಿ ಮಾಡಿದ್ಳು. ಮಧ್ಯಾಹ್ನಕೆ ಕೋಳಿ ಕಜ್ಜಾಯ ಮಾಡ್ತೀನಿ ಅಂತ ಅವ್ಳು ಹೇಳಿದ ಮಾತ್ನೂ ಕಿವಿಗಾಕ್ಕಳ್ದೇ ಗಡಿಬಿಡೀಲೆ ತಿಂಡಿ ತಿಂದ ಮಗರಾಯ. ಅದೆಂತದೋ ವೈರುಗಳನ್ನೆಲ್ಲಾ ಜೋಡ್ಸಿ. ಒಂದು ವೈರುನ ಕರೆಂಟು ತಾವ ಕೊಟ್ನಪ. ಅದೆಂತದೋ ಗುಂಡಿನೆಲ್ಲಾ ಅದ್ಮಿದ್ಮೇಲೆ ಯಾವುದೋ ಗುಡ್ಡದ ಚಿತ್ರ ಬಂತು. ಮಗ ಟೀ.ವೀಲಿ ಕಾಣ್ತೈತಲ್ಲಾ ಅದು ಯಾವ ಗುಡ್ಡನೋ ಅಂದ ಜಗ್ಗಣ್ಣ. ಅಪ್ಪೋ ಅದು ನನ್ನ ಮಾನಿಟರು, ಟೀವಿ ಅಲ್ಲ. ನೀ ನೋಡ್ತಿರದು ವಾಲ್ ಪೇಪರು ಗುಡ್ಡ ಅಲ್ಲ ಅಂದ. ಜಗ್ಗಣ್ಣಂತೆ ತಾನು ಇಸ್ಕೂಲ್ ನಾಗೆ ಮಾನಿಟರ್ ಆಗಿದ್ದು ಜ್ನಪ್ತಿಗೆ ಬಂತು. ಅದು ಇದೇನಾ ಅಂತ ಹೆಂಡ್ತೀ ಎದ್ರಿಗೆ ಕೇಳೋಕಾತದಾ? ನೀ ಒಳ್ಗೆ ನಡಿಯಬೇ. ನಾ ಮಗೀನತ್ರ ಮಾತಾಡ್ಬೇಕು ಅಂತ ಬೈದು ಒಳೀಕೆ ಕಳ್ಸಿದ. ವರ್ಷಗಟ್ಲೇ ಆದ್ಮೇಲೆ ಮನೀಗೆ ಬಂದ ಮಗಿ ಜೊತಿಗೆ ಮಾತಾಡೋಕೂ ಬಿಡಂಗಿಲ್ಲ ಇವ್ರು ಅಂತ ಶಾಪ ಹಾಕ್ತ ಒಳಗೋದ್ಳು ಈರವ್ವ.
ಜಗ್ಗಣ್ಣಂಗೆ ನ್ಯೂಸು ಪೇಪರು ಗೊತ್ತಿತ್ತೇ ಹೋರ್ತು ಇದೆಂತದೋ ಒಲೇ ಪೇಪರು ಅಂತ ಅರ್ಥ ಆಗ್ಲಿಲ್ಲ.

ರಾತ್ರೆ ಆತು. ಬೋರ‍ೊ ಬೋರು ಅಂತಾನೆ ಗುಂಡಣ್ಣ. ಒನ್ನೊಂತಪಾ ನಾ ನಾಳೇನೆ ವಾಪಸ್ ಹೊಂಟೆ ಅಂತಾನೆ. ಈರವ್ವಂಗೆ ಯಾವ್ದೋ ಶನಿ ಮೆಟ್ಕಂಡೈತೆ ಅಂತ ಹೆದ್ರಿಕೆ ಶುರು ಆತು. ಯಾವ್ದೋ ಮೋಹಿನಿ ಇರ್ಬೇಕು ಅಂತ್ಲೂ ಅನಿಸ್ತು. ನಾಳೇನೆ ಪೂಜಾರ್ತಾವ ಹೋಗಿ ತಾಯಿತ ಮಾಡ್ಸತೀನಿ. ಅಲ್ಲೀತಂಕ ಕಾಪಾಡೇ ಕಾಳಮ್ಮ ಅಂತ ಕೈಮುಗ್ದಲು. ಕೊನೆಗೇ ಗುಂಡಣ್ಣ ಅಪ್ಪಂತಾವ ಹೇಳ್ದ. ಅಪ್ಪ ಇಲ್ಲಿ ಇಂಟರ್ನೆಟ್ಟು ಇಲ್ಲ. ಹಂಗಾಗಿ ನಂಗೆ ಬೋರಾಗತ್ತೆ. ನಾಳೆ ಬ್ರಾಡುಬ್ಯಾಂಡು ಹಾಕ್ಸಣ ಅಂದ. ಜಗ್ಗಣ್ಣಂಗೆ ಮದ್ವೆ ಬ್ಯಾಂಡು ಗೊತ್ತಿತ್ತೇ ಹೊರ್ತು ಮಗ ಹೇಳೋ ಬ್ಯಾಂಡು ಯಾವ್ದೂ ತಲಿಗೋಗ್ಲಿಲ್ಲ. ಆದ್ರೂ ಸರಿ ಮಗ ಅಂದ. ಗುಂಡಣ್ಣ ಸ್ವಲ್ಪ ಸಮಾಧಾನ ಆದಂಗೆ ಕಾಣ್ತು. ಈರವ್ವ ಮತ್ತೆ ಎಲ್ಲಮ್ಮಂಗೆ ಕೈ ಮುಗುದ್ಲು.


ಬೆಳಗಾತು. ನಿಮ್ಕಡೇ ಬ್ರಾಡ್ಬಬ್ಯಾಂಡ್ ಕೊಡಕೇ ಬರಾಕಿಲ್ಲ. ನಿಮ್ಮೊಬ್ರಿಗೇ ಪಟ್ಣದಿಂದ ಲಾಯಿನು ತರ್ಸಾಕೆ ಆಗಕಿಲ್ಲ ಅಂದ ಫೋನೆಕ್ಸಚೇಂಜ್ ಎಂಕ್ಟೇಶ. ಗುಂಡಣ್ಣಂಗೆ ತನ್ಮೊಬೈಲು ನೆನ್ಪಾತು. ಅರೇ ಇಸ್ಕಿ, ಇದಲ್ಲೇ ಮಾಡ್ಬೋದಲ್ಲಾ. ನೀನು ನೆಟ್ಟು ಕೊಡ್ದಿದ್ರೆ ಕುದ್ರೆ ಜುಟ್ಟು, ಕತ್ತೆ ಬಾಲ ಅಂತ ಎಂಕ್ಟೇಶಂಗೆ ಶಾಪ ಹಾಕಿ ಮನೆಗೆ ಬಂದ. ಮನೇ ಹತ್ರನೇ ಟವರ್ ಆಗಿ ನೆಟ್ವರ್ಕು ಚೆನ್ನಾಗಿ ಸಿಕ್ತಿತ್ತು. ಮೊನ್ನೆ ಅಷ್ಟೇ ಹಾಕ್ಸಿದ್ದ ದುಡ್ಡಿತ್ತು. ಸರಿ ಅಂತ ಮೊಬೈಲಲ್ಲೇ ನೆಟ್ಟು ಹಾಕ್ಸಿ ಅದ್ರಿಂದ ಒಂದು ವೈರು ಕಂಪ್ಯೂಟ್ರಗೆ ಕೊಟ್ಟ. ಅವತ್ತು ಮುಗ್ದೇ ಹೋತು.೨-೩ ದಿನ ಆತು. ಸರಿಯಾಗಿ ಊಟಕ್ಕೂ ಬರಾಕಿಲ್ಲ, ತಿಂಡೀನೂ ತಿನ್ನಾಕಿಲ್ಲ. ಆ ಪೆಟ್ಗೆ ಎದ್ರು ಕೂತ್ಕಂಡು ಏನ್ಮಾಡ್ತಾನೆ ಅಂತ ಈರವ್ವ, ಜಗ್ಗಣ್ಣ ಇಬ್ರಿಗೂ ದಿಗಿಲಾತು. ಕೇಳಿದ್ರೆ ಗೆಳೆಯರ ಜೊತೆಗೆ ಮಾತಾಡ್ತೀವ್ನಿ ಅಂತಿದ್ದ. ಅದೆಂತದೋ ಚಿತ್ರಗಳು. ಅದ್ನೇ ನೋಡಿ ನಗ್ತಿರಿದ್ದ. ತಲೆ ಮೇಲೆ ಕೈಹೊತ್ಕತಿದ್ದ. ಈರವ್ವಂಗೆ ತಾಯಿತದ ನೆನಪಾತು. ತಕ್ಷಣ ಹೋಗಿ ತಾಯಿತ ತಂದು ಮಗನ ಕೈಗೆ ಕಟ್ಟಿದ್ಲು. ಆದ್ರೂ ಸರಿ ಆಗ್ಲಿಲ್ಲ. ಮನೀಗಿರ ಜನ್ರ ಜತೆ ಮಾತಾಡದು ಬಿಟ್ಟು ಮಗ ಹಿಂಗಾ ಮಾಡದು ಅಂತ ಈರವ್ವಂಗೆ ಶಾನೆ ಕ್ವಾಪ ಬಂತು.

.
ಮಾರ್ನೇ ದಿನ ಬೆಳಗ್ಗೆ ಗುಂಡಣ್ಣ, ಅಪ್ಪಂತವ ಹೇಳ್ದ. ನಾ ಆನ್ ಲೈನು ಕೋರ್ಸು ಮಾಡ್ತೀನಿ ಅಂತ. ಜಗ್ಗಣ್ಣಂಗೆ ಕರೆಂಟು ಲೈನು, ತಾ ಹೊಡ್ದಿದ್ದ ಲೈನು ಜ್ನಪ್ತಿಗೆ ಬಂತು. ಕಿಟ್ಟಪ್ಪ ಅಲ್ಲೇ ನಿತ್ಕಂಡು ಕಿಸೀತಿದ್ದ ಏನೋ ನೆನ್ಕಂಡಗೆ. ಜಗ್ಗಂಣ್ಣಂಗೆ ಕಣ್ಣಿಗೆ ಖಾರದ ಪುಡಿ ಹಾಕ್ದಂಗಾತು. ಕಿಟ್ಟಪ್ಪಂಗೆ ಬೈದು ಹೊಲತ್ತಾವ ಬೇಲಿ ಸರಿ ಮಾಡಕ್ಕೆ ಕಳ್ಸಿದ. ಅದೆಂತದಾ ಮಗಾ ಅಂತ ಧ್ಯೈರ್ಯ ಮಾಡಿ ಕೇಳೇ ಬಿಟ್ಟ. ಮಂಗತಾವ ಎಂಥಾ ಮರ್ವಾದೆ. ಅಲ್ವರಾ? ಅದು ಒಂಥರಾ ವಿದ್ಯೆ ಅಪ್ಪಯ್ಯಾ. ಮನೇಲಿ ಕೋತ್ಕಂಡೇ ಕಲಿಬೋದಂತೆ , ಅದ್ನೆಲ್ಲಾ ಮಾಡಿದ್ರೆ ಕಂಪ್ನೀ ಅವ್ರು ಕರ್ದು ಕೆಲ್ಸ ಕೊಡ್ತಾರಂತೆ ಅಂತ ತನ್ನ ಗೆಣಿಕಾರ ಈರೇಶಿ ನಿನ್ನೇ ಅಷ್ಟೇ ಹೇಳಿದ್ನ ಹಂಗೇ ಹೇಳ್ದ. ಈಗಾಗ್ಲೇ ಯಾವ್ದೋ ಕೆಲ್ಸ ಸಿಕ್ಕೈತೆ ಅಂದಿದ್ಯಲ್ಲಾ ಮಗ್ನೇ. ಅವ್ರು ಕರಿಯ ತಾವ ಎರ್ಡು ತಿಂಗ್ಳು ಆರಾಮಾಕೆ ಮನೀಲಿರ್ಬಾದ್ರಾ ಮಗಾ ಅಂದ್ಲು ಕಾಪಿ ಕೊಡೋಕೆ ಬಂದಿದ್ದ ಈರವ್ವ. ಅವ್ಳಿಗೆ ಮಗಾ ಮತ್ತೆ ನಾಳೇನೆ ಪಟ್ಣಕ್ಕೆ ಹೊತ್ತಾನೆನೋ ಅಂತ ಹೆದ್ರಿಕೆ. ಸುಮ್ನಿರಬೇ, ಮಗಾ ಏನೋ ಕಲೀಬೇಕು ಅಂತಾನೆ. ಇದ್ಯಾ , ಬುದ್ದಿ ಎಲ್ಲಾ ನಿನ್ನಂತಾ ಹೆಬ್ಬೆಟ್ಗೆಲ್ಲಿ ಗೊತ್ತಾಗ್ಬೇಕು ಅಂತ ಜೋರು ಮಾಡದ ಜಗ್ಗಣ. ದಿನಾ ನನ್ನ ಅಳಿಸದೇ ಆತು ನಿಂಕೆಲ್ಸ. ಭೂಮಿಗೆ ಭಾರ ಕೂಳಿಗೆ ದಂಡ ಆಗಿ ನಾ ಯಾಕೆ ಉಳೀಬೇಕು. ಸಾಲಿಗೆ ಹೋಗೇ ಅಂತ ನನ್ನಪ್ಪಯ್ಯ ಮನೇ ಇಣ್ದ ಹೊಡ್ದು ಬಡ್ದು ಕಳ್ಸಿದ್ರೂ ಕಲೀಲಿಲ್ಲ. ನಂಗೆ ಹಿಂಗೆ ಆಗಾಕಾದ್ದೆ ಅಂತ ಗೊಳೋ ಅಂತ ಅಳಕಿಡ್ದು ಈರವ್ವ. ನಾನು ಮನೇ ಬಿಟ್ಟು ಈಗ್ಲೇ ಹೋಗಾಕಿಲ್ಲವ್ವ ಅಂತ ಸಮಾಧಾನ ಮಾಡೋ ಹೊತ್ಗೆ ಗುಂಡಂಗೆ ಸಾಕಾತು

ರಾತ್ರೆ ಎಲ್ಲ ಹುಡುಕ್ದ ಗುಂಡ. ಅದೆಂಥದೋ ಹಾಟ್ ಕ್ವೀನ್ ನೆಟ್ವರ್ಕು, ಬರಾಕಿಲ್ಲ ಕೂಸುಬೇಸು, ಮತ್ತೆಂದದೋ ಬಂಡಿ ಜಟಕಾ.. ಅಲ್ಲಲ್ಲಾ ಇನ್ಪಾಕುಟಕ, ಸಪ್ಪೇ ಲೋಬೊ ಹೇಳೊ ಇಚಿತ್ರದ ಹೆಸ್ರಲೆಲ್ಲಾ ಹುಡುಕ್ದ ಖರ್ಚು ಎಷ್ಟು ಅಂತ. ಹಾಟ್ ಕ್ವೀನ್ ನೆಟ್ವರ್ಕಲ್ಲಿ ಹದಿನೈದು ದಿನದ ಕೋರ್ಸ್ ಗೆ ೨೦೦ ಡಾಲರ್ ಅಂತ ಇತ್ತು. ಅಂದ್ರೆ ಹತ್ತತ್ರ ಹತ್ಸಾವ್ರ. ಅಪ್ಪಯ್ಯ ದುಡ್ಡಿಂದು ಯೋಚ್ನೆ ಮಾಡ್ಬೇಡ ಮಗಾ. ನಾನಂತೂ ಹೆಚ್ಗೆ ಓದಿಲ್ಲ. ನೀ ಎಷ್ಟು ಓದ್ತೀಯೋ ಓದು. ಜಮೀನು ಹೊಲ ಮಾರಾದ್ರೂ ಓದಿಸ್ತಿನಿ ಅಂದಿದ್ದ. ಆದ್ರೂ ಗುಂಡಣ್ಣಂಗೆ ಇದು ಭಾರೀ ಸುಲಗೆ ಅನಿಸ್ತು. ಬರಾಕಿಲ್ಲ ಕೆ ಹೋದ. ಅಲ್ಲಿ ಯಾವ್ದೋ ಪರೀಕ್ಷೆಗೆ ಎಷ್ಟು ದುಡ್ಡು ಅಂತ ಕೊಟ್ಟಿರ್ಲಿಲ್ಲ. ಒಂದೂವರೆ ಘಂಟೆ ಪರೀಕ್ಷೆ ಅಂತ ಮಾತ್ರ ಇತ್ತು.ಆದ್ರೆ ನೀವು ಪರೀಕ್ಷೆ ಬರ್ಯದಾದ್ರೆ ಅದ್ಕೆ ವೋಚರ್ ತಗಂಬೇಕು ಅಂತಿತ್ತು. ಅಲ್ಲಿ ಕೊಟ್ಟಿದ್ದ ಕೊಂಡಿ ಕುಕ್ಕಿದ. ಅದು ಕೇವಲ ೨೦೦ ಡಾಲರ್ ಅಂತು.

ಅವ ಅಯ್ಯೋ ಶಿವನೇ, ನಾವ ಭಾರತದಾಗಿದೀವ ಇಲ್ಲಾ ಫಾರಿನಲ್ಲಾ ಅಂತಂಕಡ. ಆಮೇಲೆ ಬಂಡಿ ಜಟಕಾ ಅಲ್ಲಲ್ಲಾ ಇನ್ಫಾಕುಟಕಕ್ಕೆ ಹೋದ. ಅದ್ರಲ್ಲಿ ಪರೀಕ್ಷೆಗೆ ೨೦೦ ಡಾಲರ್. ಆ ಸಾಪ್ಟವೇರ್ ಕಲ್ಸ ಜಬಾದಾರಿ ನಂದಲ್ಲಾ ಅಂತ ಇತ್ತು. ಹಂಗಾರೆ ಅದ್ನ ಪಟ್ಣಕ್ಕೆ ಹೋಗೇ ಮಾಡದು ಸರಿ ಅಂತ ಅಂದ್ಕಂಡ. ಬೆಳ್ಗಿಂದ ಕಂಪೂಟ್ರ ಮುಂದೆ ಕೂತು ಕೂತು ಕಣ್ಣೆಲ್ಲಾ ಉರೀತಿತ್ತು. ಹನ್ನೆರ್ಡೂ ವರೆ ಆಗಿತ್ತು. ಮಗೀಗೆ ಬೇಜಾರಾತ್ತದೆ ಅಂತ ಈರವ್ವ ಏನೂ ಹೇಳ್ದೆ ಮನೀಕಂಡಿದ್ಲು. ತಾನಾಗಿದ್ರೆ ಕರೆಂಟು ಬಿಲ್ಲು ಹೆಚ್ಗೆ ಬತ್ತದೆ ಅಂತ ಒಂಭತ್ಗಂಟೆಗೇ ಲೈಟಾರ್ಸೋ ಗಂಡ್ನೇ ಏನೋ ಯೋಳಿಲ್ಲ ನಾ ಏನೇಳ್ಲಿ ಅಂತ ಅಂದ್ಕಂಡ್ಲು. ಊರೆಲ್ಲಾ ಲೈಟಾಪು ಆಗಿದ್ರು ಜಗ್ಗಣ್ಣನ ಮನೆ ಲೈಟು ಆನಾಗಿದ್ದು ನೋಡಿ ಸುಮಾರು ನಾಯ್ಗಳು ಅಲ್ಲೇ ನೋಡ್ತಾ ಕುಯ್ಯೋ ಅಂತಿದ್ವು.

ಈ ಸಂಗೀತ ಕಚೇರಿಗೆ ಪಕ್ಕದ ಮನೇವ್ರೆಲ್ಲಾ ಏಳ್ತಿದ್ರು. ಪಟ್ಣದಲ್ಲಿ ಮಧ್ಯರಾತ್ರಿ ಅಂದೆ ಸಾಯ್ಕಾಲ ಅಂತೆ ಅಂತ ಕಿಟ್ಟಪ್ಪ ಹೇಳಿದ್ನ ಕೇಳ್ದವ್ರು ಗುಂಡಣ್ಣಂಗೆ ಒಳಗೊಳಗೇ ಶಾಪ ಹಾಕಿ ಹಾಳು ಕುನ್ನಿಗೊಂದು ಬಿಟ್ಟು ಮತ್ತೆ ಮಲಗ್ತಿದ್ರು. ಸ್ವಲ್ಪ ಹೊತ್ತಾದ ಮೇಲೇ ಇದೇ ಸಂಗೀತ ಮತ್ತೆ ಶುರು ಆಗೋದು. ಕೊನೀಗೆ ಲೋಬೋ ಗೆ ಹೋದ. ಅಲ್ಲಿ ದುಡ್ಡು ಕಾಸಿನ ಇವ್ರ ಇರ್ಲಿಲ್ಲ. ನಿಮ್ಮಾ ಈಮೇಲು ವಿಳಾಸ ಕೊಡಿ. ನಾವೇ ಹೇಳ್ತೀವಿ ಅಂದ್ರು. ಸರಿ ಅಂತ ಅಲ್ಲಿ ಈಮೇಲು, ಫೋನು ನಂಬರ್ರು, ರೆಸೂಮಂತೆ ಎಂಥ್ದೋ ಅದನ್ನೂ ಕೊಟ್ಟು ಮಲೀಕಂಡ. ರಾತ್ರೆ ಕನ್ಸಲ್ಲೂ ತಾ ಕೋರ್ಸ್ ಮಾಡ್ದಂಗೆ , ದೊಡ್ಡ ಕಂಪ್ನೀ ಅವ್ರೆಲ್ಲಾ ತನ್ನ ಹಳ್ಳಿಗೇ ಹುಡ್ಕಂಬಂದಗೆಲ್ಲಾ ಕನ್ಸು ಬಿತ್ತು

ಮಾರ್ನೇ ದಿನ ಅಪ್ಪಯ್ಯ , ಅವ್ವ ಹೊಲದ್ ತಾವ ಹೋಗಿದ್ರು. ಗುಂಡಣ್ಣನ ಫೋನು "ಟಚ್ ಮಿ ಟಚ್ ಮಿ ಟಚ್ ಮಿ" ಅಂತ ವಿಕಾರವಾಗಿ ಕೂಕ್ಕಂಡ್ತು. ಎತ್ತಿದ್ರೆ ಯಾವ್ದೋ ಹುಡ್ಗಿ ಧ್ವನಿ.ನಾನು ಮಿಸ್ ಹಾಲಾಹಲ ..ಅಲ್ಲಲ್ಲ ಕೋಮಲ ಲೋಬೋ ಇಂದ. ಮಿ. ಗುಂಡ್ ಅವ್ರ ಹತ್ರ ಮಾತಾಡ್ಬೋದ ಅಂತ ಇಂಗ್ಲೀಷಲ್ಲಿ ಕೇಳಿದ್ಳು. ನಾನೇಯ ಗುಂಡ ಅಂದ. ನಿಮ್ಮ ರೆಸ್ಯೂಮ್ ತುಂಬಾ ಚೆನ್ನಾಗಿದೆ. ಪರ್ಸಂಟೇಜಂತೂ ಮಾತಾಡೋ ಹಾಗೇ ಇಲ್ಲ ಅಂತ ಸ್ವಲ್ಪ ಜಾಸ್ತೀನೇ ಏರ್ಸಿದ್ಳು. ನಿಮಗೆ ಯಾವ್ದೂ ಕಂಪ್ನೀಲಿ ಕೆಲ್ಸ ಮಾಡಿದ ಅನುಭವ ಇಲ್ವಲ್ಲಾ ಅಂತ ರಾಗ ತೆಗೆದು ನೀವು ನಮ್ಮ ಆಬಾಡ್ಸಿಸ್ ಕೋರ್ಸ್ ಮಾಡ್ತೀರಾ ಅಂದ್ಳು. ಅದ್ಕೆ ಖರ್ಚು ಎಷ್ಟಾಗತ್ತೆ ಅಂದ ಗುಂಡ. ಆ ಕೋರ್ಸ್ ಅಲ್ಲಿ ಏನೇನೆಲ್ಲಾ ಇರ್ತದೆ ಅಂತ ಒಂದೆರಡು ನಿಮಿಷ್ ಅ ಮಾತಾಡಿದ ಮೇಲೆ ಟ್ರೈನಿಂಗ್ ಖರ್ಚು ೨೫,೦೦೦ ಅಂದ್ಳು

ನನ್ನ ಇಂಜಿನೀರ ಒಂದು ವರ್ಷದ ಫೀಸ್ ಕೇಳ್ತಾವ್ಳಲ್ಲಪಾ ಅಂದ್ಕಂಡ. ಅವ ಸುಧಾರ್ಸಕೋದ್ರೊಳ್ಗೆ ಸರ್ಟಿಫಿಕೇಟ್, ಎಕ್ಸ ಫೋಸರೋ ಎಂಥದೋ ಪೋರ್ಜರಿ ಎಲ್ಲಾ ಸೇರಿ ೩ ಲಕ್ಷ ಆಗ್ತದೆ, ೨೫ ದಿನ ದ ಕೋರ್ಸ್ ಅಂದ್ಳು. ಗುಂಡಣ್ಣಂಗೆ ಒಂದ್ಸಲ ಉಸ್ರು ಸಿಕ್ಕಾಕಂಡಂಗೆ ಆತು. ನಾನು ಜೀವಮಾನದಲ್ಲಿ ಇಲ್ಲೀವರ್ಗೆ ಓದಿರದೂ ಸೇರಿದ್ರೂ ಅಷ್ಟಾಗಕಿಲ್ಲ. ೨೫ ದಿನಕ್ಕೇ ಅಷ್ಟಾ ಅನುಸ್ತು. ಯಾವಾಗ ಸೇರ್ತೀರ ಅಂದ್ಳು. ಸರಿ ನೀವು ಎಲ್ಲಾ ಮಾಹಿತಿ ನನ್ನ ಈ ಮೇಲ್ ಗೆ ಕಳಿಸಿ, ನಾನೇ ಆಮೇಲೆ ಹೇಳ್ತೇನೆ ಅಂದ. ಸರಿ ಅಂತ ಖುಷಿಯಾಗೇ ಫೋನಿಟ್ಳು. ಹೋದ ಜೀವ ಬಂದಗಾತು ಗುಂಡಣ್ಣಂಗೆ. ಗೊತ್ತಿಲ್ದೇ ಇರಾ ನಂಬರಿಂದಾ ಯಾವ್ದೇ ಫೋನ್ ಬಂದ್ರೂ ಎತ್ಬಾರ್ದು ಇನ್ಮೇಲೆ ಅಂತ ಅಂದ್ಕಂಡ. ಅವಳ ಈಮೇಲ್ ಕಡೆ ತಲೆ ನೂ ಹಾಕ್ಲಿಲ್ಲ.

ಮಧ್ಯಾಹ್ನ ಮನೆಗೆ ಬಂದ ಜಗ್ಗಣ್ಣ. ಅದೇನೋ ಮಾಡ್ತೀನಿ ಅಂತಿದ್ಯಲ್ಲಾ ಮಗಾ. ಎಷ್ಟು ದುಡ್ಡು ಬೇಕೋ ಮಗಾ? ಒಂದ್ನಾಕು ಅಡ್ಕೆ ಮೂಟೆ ವ್ಯಾಪಾರಕ್ಕೆ ಹಾಕಕ್ಕೆ ಹೇಳ್ತೀನಿ ಅಂದ. ಅದೆಲ್ಲಾ ಬ್ಯಾಡ ಅಪ್ಪಯ್ಯಾ. ಓದಿ ಓದಿ ಬ್ಯಾಸರ ಆತ್ತದೆ. ನಾ ಸುಮ್ನೇ ಮನೇಕಿದ್ರೆ ನಿಂಗೆತಾರೂ ಬ್ಯಾಸರ್ವಾ ಹೇಳು ಅಂದ. ಅಂತ ಮಾತೆಲ್ಲಾ ಆಡ್ಬೇಡ ಬಂಗಾರ. ಏಟು ದಿನಾ ಬೇಕಾರು ನೀ ಇಲ್ಲೇ ಇರು. ಆರಾಮಾಗಿರು ಅಂತ ಬಂದು ಮಗೀನ ತಪ್ಕಂಡ್ಲು. ಜಗ್ಗಣ್ಣಂಗೆ ತಾನೇ ಏನೋ ಆಡಬಾರ್ದು ಆಡಿದ್ನೇನೋ, ಅಮ್ಮ ಮಗೀನ ಬೇರೆ ಮಾಡ ತರ ಆದ್ನಾ ಅಂತ ಬೇಜಾರಾತು. ಮಾರ್ನೇ ದಿನದಿಂದ ಮಗ ಹೊತ್ತಿಗೆ ಸರ್ಯಾಗಿ ಆರಾಮಾಗಿ ತಿಂದ್ಕಂಡು ತಿರುಗಾಡ್ತಾನೆ, ಮಲ್ಗತಾನೆ. ಈರವ್ವ, ಜಗ್ಗಣ್ಣಂಗೆ ಆಶ್ಚರ್ಯನೋ ಆಶ್ಚರ್ಯ. ಒಳಗೊಳಗೇ ಖುಸಿ. ಇದಾದ್ಮೇಲಿಂದ ಹಿಂಗೇ ಯಾವಾಗ್ಲೂ ಕಾಯವ್ವ , ನಮ್ಮಮ್ಮ ಅಂತ ದಿನಾನೂ ಈರವ್ವಂಗೆ ಮೂರೊತ್ತೂ ಕಾಳವ್ವನ ನೆನ್ಯೋದೆ ಕೆಲ್ಸ. ಜಗ್ಗಣ್ಣನೂ ಆರಾಮೂ. ಗುಂಡಣ್ಣ ಮನೆಹಾಳು ಐಡಿಯಾ ಕೊಟ್ಟ ತಿಪ್ಪೇಶಿಗೆ ಮನ್ಸಲ್ಲೇ ಬಯ್ತಾ ಅಪ್ಪ, ಅವ್ವಂತವ ಆರಾಮಾಗವ್ನೆ.

ಚಿತ್ರ ಕೃಪೆ: Google

No comments:

Post a Comment