Wednesday, August 17, 2011

ನೀ ಸಾಕಿದ ನಾಯೆ ನಿನ್ನ ಕಚ್ಚೋ ದಿನ

ನೀ ಸಾಕಿದ ನಾಯೆ ನಿನ್ನ ಕಚ್ಚೋ ದಿನ
ಫಲ ಬಿಟ್ಟ ತಾಂಬೂಲ ತಲೆ ಮೇಲೆ ಬಿದ್ದು
ಮನದ ಮಲ್ಲಿಗೆ ಬಳ್ಳಿಗರಿಯದಾವುದೊ ಹುಳ
ಮುಂಜಾನೆ ನೇಸರನು ಬೇಸರವ ತರುವಂತೆ
ಚಂದ್ರಮನ ಬೆಳಕೂ ಅಣಕಿಸುವ ನಗುವಂತೆ
ಜೀವದ ಗೆಳೆಯರೇ ನೀನ್ಯಾರು ಅನುವಂತೆ
ನೀನವನಲ್ಲ, ನೀನವನಲ್ಲ, ನೀನವನಲ್ಲ
ಬದಲಾದೆ ನೀನು,ಹೋಗಾಚೆ ಎನುವಂತೆ


ಬರುವುದಿಂತಾ ದಿನ ಕೆಲವರಿಗೆ ಪ್ರತಿದಿನ
ಕೆಲವರಿಗೆ ಒಮ್ಮೊಮ್ಮೆ ಸಾಗರದಿ ಅಲೆಯಂತೆ
ಅಲೆಯಲ್ಲ ಸುನಾಮಿ, ದಡದಲ್ಲಿ ಇದ್ದ ಮನೆ
ಮನಗಳನು ಕೊಚ್ಚುವುದು. ನಿನ್ನಲ್ಲೆ ನೆನಪಾಗಿ
ಅನುದಿನವು ಚುಚ್ಚುವುದು. ಇದು ಅಲ್ಲ ವೇದಾಂತ
ಸುಖವೆಲ್ಲಾ ಬರಿ ಭ್ರಾಂತ, ಎಲ್ಲ ಒಂದೇ ಎಂಬ ಸಿದ್ದನಾಗು
ಹಂಚಿದಷ್ಟೂ ಬೆಳೆವ ಬೆಳಕದುವೆ ಸಂತೋಷ
ಇಲ್ಲದವರಿಗೆ ನೀಡಿ ತೃಪ್ತನಾಗು
ಕಡಲಾಳದ ಮೀನೆ ನಿನ್ನಯ ಜೀವಾಳ
ದಿನಗೆಲಸಕೆ ಮತ್ತೆ ಸಿದ್ದನಾಗು

No comments:

Post a Comment