Saturday, November 26, 2011

ರಜೆ ಮುಗಿಸಿ ಹೊರಟೆಯಾ ಓ ಸೈನಿಕ

ರಜೆ ಮುಗಿಸಿ ಹೊರಟೆಯಾ ಓ ಸೈನಿಕ
ಬರೆದಾಯ್ತು ನೋಡಿಲ್ಲಿ ಒಂದು ಕಡತ
ಉಣ್ಣೆ ಕೋಟನು ಕೇಳಿ ಒಬ್ಬ ಅಣ್ಣ
ಮಣಿಸರವ ತಾ ಎಂದು ಒಬ್ಬ ತಂಗಿ
ಎಂದು ಬಾರದ ದೊಡ್ಡಪ್ಪನೇ ಬಂದಿಹನು
ಶಂಖ ತಾ ನನಗೊಂದು ನೇಪಾಳದಿಂದೆಂದು|೧|


ನೆರೆಬೀದಿ ಅಕ್ಕಂದಿರೆಲ್ಲಾ ಒಗ್ಗಟ್ಟು
ರಾಜಸ್ಥಾನದ ಸೀರೆ ಬೇಕಂತೆ
ಸೈನ್ಯ ಸೇರಿದ ಸಮಯ
ಆಡಿ ನಕ್ಕವರೆಲ್ಲಾ ಇಂದು ಸೇರಿಹರಲ್ಲೊ
ಮನೆ ಬಾಗಿಲಿಗೆ ಬಂದು |೨|

ಮೂಲೆಯಲಿ ಕುಳಿತಿದ್ದ ನಿನ್ನೊಬ್ಬ ಮುದುಕಮ್ಮ
ಕಣ್ಣೀರು ಒರೆಸುತಾ ಅವಳ ಬಳಿ ಸಾರಿ
ನಿನಗೇನು ಬೇಕಮ್ಮಾ ಬರೆಯಲೇ ಇಲ್ಲ
ಓ ಬರೆಯಲೇ ತಿಳಿಯೊಲ್ಲ, ಬಾಯಲೇ ಹೇಳಮ್ಮ
ಹಾದಿ ಬೀದಿಗೆ ಎಲ್ಲ ತರುವ ಕರ್ಮವು ನನಗೆ
ನಿನ್ನ ಮರೆಯಲಿ ಹೇಗೆ ನೀನೆ ಹೇಳಮ್ಮ|೩|

ಮಗನ ಬಳಿ ಕೇಳಲಿ ಹೇಗೆಂಬ ಚಿಂತೆಯೇ?
ಕೇಜಿ ಕೇಸರಿ ತರಲೆ ಕಾಶ್ಮೀರದಿಂದ?
ತಂದು ಕೊಡಲೇ ಒಂದು ಜಯಪುರದ ಸೀರೆ?
ವಾರಣಾಸಿಗೆ ಹೋಗಿ ಒಂದು ಜಪ ಮಣಿಯ
ಅದೂ ಬೇಡವೆ ಹೋಗಲಿ ನೀನೆ ಹೇಳಮ್ಮ|೪|

ಎಷ್ಟು ನಿಸ್ವಾರ್ಥಿಯೋ ನನ್ನ ಮಗನೇ
ಪರೀಕ್ಷೆ ಕಟ್ಟಿದ್ದೆ ಅಣ್ಣನಾ ನಂಬಿ
ಹಾಲ್ಟಿಕೇಟ್ ಕಳಿಸಿದ್ದು ಹಿಂದಿನಾ ದಿನವಾತ
ಹೇಗೂ ರಜೆ ಪಡೆದು ಬಂದು ಬರೆದೆಯ ಕಂದ
ಪರೀಕ್ಷೆ ಪುಸ್ತಕವ ಕಳಿಸಲೇ ಮರೆತೋಯ್ತು
ಇದ್ದೊಬ್ಬ ತಂಗಿಗೆ ಊರೆಲ್ಲ ಹರಟೆ
ಅಲ್ಲೂ ಓದುವ ನಿನ್ನ ಆಸೆಗೆ ತಣ್ಣೀರು
ಎರಚುವ ಇಂಥ ಜನಕೇಕೆ ವ್ಯಥೆ ನಿನಗೆ?|೫|

ಸದಾ ಆಡಿದ ಜನರು ಬಂದು ನಿಂತಿಹರಿಂದು
ಸಭ್ಯತೆಯ ಸೋಗಿನಲಿ ದೋಚೊ ದುರ್ಭಾವದಲಿ
ನನಗೇನೂ ಬೇಕಿಲ್ಲ ಓ ನನ್ನ ಕಂದ
ಅನುಕ್ಷಣವು ನೆನಪಾಗುವಂತೆ ಗಡಿಯಾರ
ನಿನ್ನ ನೆನಪೇ ತರುವುದೆನಗೆ ಆನಂದ
ಎಲ್ಲಿ ಹೋದರೂ ನೀನು ಚೆನ್ನಾಗಿರೋ ಕಂದ
ನಿನ್ನಂತೆ ಎಲ್ಲ ಸೈನಿಕರು ಮಕ್ಕಳೆ ನನಗೆ
ಅವರ ಮಾತಲು ನಿನ್ನೇ ಕಾಣುವೆನು ನಾನು
ತಾಯಿ ಭಾರತಿ ಕರೆಯು ಹೊರಡಿನ್ನು ಕಂದ
ಬಿಡುವಾಗೆ ಕರೆಮಾಡು, ಮರೆಯದಿರು ಮಗನೆ|೬|

(ಚಿತ್ರ ಕೃಪೆ: ವಿಕಿಪೀಡಿಯ)

No comments:

Post a Comment