Wednesday, August 21, 2013

ಹೀಗೊಂದು ರಾತ್ರಿ

ಹೀಗೇ ಒಂದು ರಾತ್ರಿ. ಬೆಂಕಿಪಟ್ಟಣದಂತಹ ಬಾಡಿಗೆ ರೂಮಿನಲ್ಲೂ ಸುಖನಿದ್ರೆಯಲ್ಲಿದ್ದ ಬ್ಯಾಚುಲರ್ ಗುಂಡನಿಗೆ ಯಾರೋ ಬಾಗಿಲು ಕೆರೆದಂತಾಗಿ ದಡಕ್ಕನೆ ಎಚ್ಚರವಾಯಿತು. ಪಕ್ಕನೆ ಪಕ್ಕಕ್ಕಿದ್ದ ಲೈಟು ಹಾಕಿದರೂ ಅದು ಹತ್ತಲಿಲ್ಲ.  ಎಷ್ಟೆಷ್ಟೊತ್ತಿಗೋ ಕರೆಂಟು ತೆಗಿಯೋ ಕೆಯಿಬಿಯವರಿಗೆ ಬಯ್ಯುತ್ತಾ ಯಾರು ಅಂದ. ಶಬ್ದವಿಲ್ಲ. ಯಾರಿರಬಹುದು ಈ ನಡು ರಾತ್ರಿಯಲ್ಲಿ ಅಂದುಕೊಂಡ. ನಡುರಾತ್ರಿಯೇ ? ಗೊತ್ತಿಲ್ಲ. ಕಾಲೇಜಿಂದ ಸಂಜೆ ಸುಸ್ತಾಗಿ ಬಂದವನಿಗೆ ಹಾಗೇ ಜೊಂಪು ಹತ್ತಿತ್ತು. ಮೈಮರೆತು ಹಾಗೆಯೇ ಎಷ್ಟೊತ್ತು ಮಲಗಿದ್ದನೋ ಗೊತ್ತಿಲ್ಲ. ಈ ಬಾಗಿಲು ಕೆರೆಯೋ ಶಬ್ದದಿಂದಲೇ ದಡಕ್ಕನೆ ಎಚ್ಚರವಾಗಿ ಒಮ್ಮೆ ಗಾಬರಿಯೂ ಆಯಿತು…


ನಡುರಾತ್ರಿಯಾಗಿರದಿದ್ದರೂ ಮುಸ್ಸಂಜೆಯಲ್ಲವೆಂದು ಕಿಟಕಿಯಿಂದ ಕಾಣುತ್ತಿದ್ದ ಕಗ್ಗತ್ತಲೆಯೇ ಹೇಳುತ್ತಿತ್ತು. ಎಲ್ಲಿ ನೋಡಿದರೂ ಕಪ್ಪು. ಅಲ್ಲಲ್ಲಿ ಒಂದೊಂದು ನಕ್ಷತ್ರಗಳಂತೆ ದೀಪಗಳು. ಜೋರಾಗಿ ಬೀಳುತ್ತಿದ್ದ ಮಳೆಗೆ ಬೀದಿಯಲ್ಲೆಲ್ಲಾ ಕರೆಂಟು ಹೋಗಿರಬೇಕು. ಕಿಟಕಿಯಿಂದ ದೂರವಿದ್ದ ಮಂಚದಲ್ಲಿ ಮಲಗಿದವನಿಗೆ ಕಿಟಕಿಯಿಂದ ಮಳೆ ನೀರು ಒಳನುಗ್ಗಿ ನೆಲದ ಮೇಲೆಲ್ಲಾ ನಿಂತಿರುವುದೂ ಗೊತ್ತಾಗಿರಲಿಲ್ಲ. ಕಿಟಕಿ ಮುಚ್ಚಲು ಹೋದಾಗಲೇ ಎಲ್ಲಿಂದಲೂ ಒಮ್ಮೆ ಹೊಳೆದ ಮಿಂಚು… ತನಗೇ ಮಿಂಚು ಹೊಡೆಯಿತೇನೋ ಎಂಬ ಗಾಬರಿಯಿಂದ ಸಟ್ಟನೆ ಕೈ ಹಿಂತೆಗೆದ. ಹಾಕಲೆಂದು ಎಳೆಯುತ್ತಿದ್ದ ಕಿಟಕಿ ಇವನ ಕೈ ಹಿಂತೆಗೆಯೋ ರಭಸಕ್ಕೆ ಪಟಾರೆಂದು ಹೊಡೆದುಕೊಂಡಿತು. ಈತನದೋ, ಈತನಿಗೆ ಬಾಡಿಗೆ ಕೊಟ್ಟವರ ಪುಣ್ಯವೋ ಗೊತ್ತಿಲ್ಲ, ಒಟ್ಟಿನಲ್ಲಿ ಕಿಟಕಿಯಂತೂ ಒಡೆಯಲಿಲ್ಲ. ಅದರ ಹಿಂದೆಯೇ ತುಪಾಕಿಯ ಸದ್ದಿನಂತೆ ಗುಡುಗು. ಇವನ ಕಣ್ಣು, ಕಿವಿಗಳು ಚೇತರಿಸಿಕೊಳ್ಳುವ ವೇಳೆಗೆ ಮತ್ತೆ ಬಾಗಿಲು ಕೆರೆಯುವ ಸದ್ದು. ಬಾಗಿಲು ತೆಗೆಯಲು ಹೋದಾಗಲೇ ಧಡಕ್ಕನೆ ಕಣ್ಣು ಕೋರೈಸುವಂತಹ ಮಿಂಚು ಕಿಟಕಿಗಳಿಂದ ಇವನತ್ತಲೇ ನುಗ್ಗುತ್ತಿದೆಯೇನೋ ಎಂಬಂತೆ ಕಂಡಿತು. ಬೆನ್ನಲ್ಲೇ ಕಿವಿ ಕೆಪ್ಪಾಗಿಸುವಂತಹ ಗುಡುಗು. ಬಾಗಿಲು ತೆಗೆಯಲು ಹೋದವ ಹಾಗೇ ಒಂದು ಕ್ಷಣ ಬೆಪ್ಪಾಗಿ ನಿಂತುಕೊಂಡ.


ಏನೋ ಕಂಡ  ನಾಯಿಯೊಂದು ಊಳಿಡಹತ್ತಿತ್ತು. ಅದರ ಬೆನ್ನಲ್ಲೇ ಉಳಿದ ನಾಯಿಗಳ ಸಾಥ್ ಶುರುವಾಯ್ತು. ಗಾನಕ್ಕೆ ತಾಳ, ತಾಳಕ್ಕೆ ಮೇಳದಂತೆ ಮಧ್ಯ ಮಧ್ಯ ಬೌ ಬೌ, ಊಂಗಳು ಸಾಗಿದವು. ಅದರಲ್ಲಿ ಮುಖ್ಯಗಾಯಕ/ಗಾಯಕಿ ಯಾರೆಂಬ ಕುತೂಹಲ ಗುಂಡನಿಗೆ ಬಹಳವೇ ಮೂಡಿದರೂ ಬಾಗಿಲು ತೆರೆದು ಮಳೆಯಲ್ಲಿ ಹೊರಗೆ ಕಾಲಿಡೋ ಮನಸ್ಸು ಬರಲಿಲ್ಲ. ನಾಯಿ ಊಳಿಟ್ಟರೆ ಅದು ಯಾರನ್ನೋ ಕಂಡು ಊಳಿಡತ್ತೆ ಅಂತ ಗೆಳೆಯ ಹೇಳಿದ ಮಾತು ನೆನಪಾಯ್ತು. ಈ ಮಳೆ ರಾತ್ರೇಲಿ ಮನುಷ್ಯರು ಯಾರಪ್ಪಾ ಓಡಾಡ್ತಾರೆ ? ಅದರಲ್ಲೂ ಮನುಷ್ಯರನ್ನ ಕಂಡು ನಾಯಿ ಯಾಕೆ ಊಳಿಡುತ್ತೆ ಅನ್ನೋ ಪ್ರಶ್ನೆಗಳು ಮೂಡಿದವು.. ಅಂದರೆ ? ಊಹಿಸಿಯೇ ಭಯವಾಯ್ತು ಗುಂಡನಿಗೆ. ಕೇಳಿದ ಮೋಹಿನಿ, ಯಕ್ಷಿಣಿ, ಜಕ್ಕಿಣಿಗಳ ಕತೆಗಳೆಲ್ಲಾ ನೆನಪಾದವು. ಎಲ್ಲಾ ನಾಯಿಗಳು ಸೇರಿ ಕೂಗ್ತಿರೋದನ್ನ ನೋಡಿದ್ರೆ ಈ ಮಹಿಳಾ ಸಂಘ, ಮಕ್ಕಳ ಕ್ಲಬ್ಬುಗಳು ಇದ್ದಂಗೆ  ಯುಕ್ಷಿಣಿಗಳ ಸಂಘವೇ ಇದ್ದು ಆ ಸಂಘಕ್ಕೆ ಸಂಘವೇ ನಮ್ಮನೆಗೆ ಬಂದಿದೆಯೇನೋ ಎನಿಸಿತು .


ಅಷ್ಟಕ್ಕೂ ನಾನೇನು ಮಾಡಿದೆ ಅವಕ್ಕೆ ? ಹಿಂದಿನ ವಾರ ರಸ್ತೆ ಬದಿ ಕೂತಿದ್ದ ಜ್ಯೋತಿಷಿಯಿಂದ ಭವಿಷ್ಯ ಕೇಳಿ ದುಡ್ಡು ಕೊಡದೇ ಎಸ್ಕೇಪಾಗುವಾಗ ಆತ ಇನ್ನೊಂದು ವಾರದಲ್ಲಿ ನಿನ್ನ ಗ್ರಹಚಾರ ಹಾಳಾಗೋಗ್ಲಿ, ಭೂತ ಮೆತ್ಕಳ್ಲಿ ಎಂದಿದ್ದು ನೆನಪಾಯ್ತು. ಬೇಡ ಬೇಡವೆಂದರೂ ಮಧ್ಯರಾತ್ರಿ ಭೂತದ ಸಿನಿಮಾಕ್ಕೆ ಹೋಗಿ ಅಲ್ಲಿ ಭೂತಗಳೆಲ್ಲಾ ಕಾಮಿಡಿ ಅಂತ ಸಹ ಪ್ರೇಕ್ಷಕರು ಬಯ್ಯುವಷ್ಟು ಕಾಮಿಡಿ ಮಾಡಿ ನಕ್ಕಿದ್ದು ನೆನಪಾಯ್ತು.  ಆ ಭೂತಗಳೆಲ್ಲಾ ತಮಗಾದ ಅವಮಾನದ ಸೇಡು ತೀರಿಸಿಕೊಳ್ಳಲೇ ಬಂದಿದೆಯೇನೋ ಎನಿಸತೊಡಗಿತು.. ಬೆಳಕಿಗಾಗಿ ಮೊಬೈಲು ಹುಡುಕಿದರೆ ಮೊಬೈಲೂ ಸಿಕ್ಕಲಿಲ್ಲ. ಸಂಜೆ ಬಂದವನು ಎಲ್ಲಿ ಒಗೆದಿದ್ದನೋ ಗೊತ್ತಿಲ್ಲ… ಮೊದಲೇ ಕತ್ತಲು, ಮಳೆ ಬೇರೆ. ಏನಾದರಾಗಲಿ ಬಾಗಿಲು ತೆರೆಯಲೇ ಬಾರದು ಎಂದು ಮತ್ತೆ ಬಂದು ಹಾಸಿಗೆಗೆ ಒರಗಿದ. ಬಾಗಿಲು ಕೆರೆಯೋದು ಕಮ್ಮಿಯಾಗೋ ತರಾನೆ ಕಾಣ್ತಿರಲಿಲ್ಲ. ಇದ್ದಕ್ಕಿದ್ದಂಗೆ ಆ ಸದ್ದೂ ನಿಂತು ಹೋಯ್ತು. ಆದರೆ ಗೋಡೆಯಲ್ಲಿ ಎಲ್ಲೋ ಇದ್ದ ಹಲ್ಲಿ ಲೊಚಗುಟ್ಟತೊಡಗಿತು. ತಗಾ, ಆ ಸಂಘದವರೆಲ್ಲಾ ಹಲ್ಲಿಯಾಗಿ ಒಳನುಗ್ಗೇಬಿಟ್ಟರು ಎಂದುಕೊಂಡ. ಆ ಸಂಘದಿಂದ ಮುಂದೆ ತನಗಾಗಬಹುದಾದ ಘೋರಾತಿಘೋರ ಶಿಕ್ಷೆಗಳ ನೆನೆಯುತ್ತಲೇ ಎಷ್ಟೋ ಹೊತ್ತು ನಿದ್ದೆಬಾರದೇ ಎದ್ದು ಕುಳಿತಿದ್ದ. ಹೀಗೆ ಎಷ್ಟೋ ಸಮಯವಾಯಿತು. ಕಣ್ಣುಗಳನ್ನು ಯಾರೋ ಹಗ್ಗ ಹಾಕಿ ಎಳೆದಂತಾಗತೊಡಗಿತು… ಹಾಗೇ ಆ ಕಣ್ಣುಗಳು ಮುಚ್ಚಿಕೊಂಡವು.
****
ಮತ್ಯಾರೋ ಬಾಗಿಲು ಬಡಿದ ಶಬ್ದ. ಕಣ್ಣು ಹೊರಳಿಸಿ ನೋಡಿದರೆ ಬೆಳಗಾಗಿ ಹೋಗಿದೆ. ಬೆಳಗಾಯ್ತು ಅಂದರೆ ಬಾಗಿಲು ಬಡಿಯುತ್ತಿರೋದು ಮೋಹಿನಿ ಸಂಘಟನೆಯಂತೂ ಅಲ್ಲವೇ ಅಲ್ಲ ಎಂಬ ಧೈರ್ಯ ಬಂದರೂ ಯಾಕೋ ಅಳುಕು. ಅಷ್ಟರಲ್ಲಿ ಏ ಗುಂಡು…ಬಾಗಿಲು ತೆರೀರಿ. ನಾನು ಪಕ್ಕದ ಮನೆ ಸುಬ್ಬಮ್ಮ. ನಿನ್ನೆ ತಲೆನೋವು ಅಂತ ನಮ್ಮನೆಯಿಂದ ತಂದ ಝಂಡೂಬಾಂಬ್ ವಾಪಸ್ ಕೊಡೋ ಆಲೋಚನೆ ಇದ್ಯೋ ಇಲ್ವೋ ಅಂತ ಬಯ್ತಿದ್ದ ಹೆಣ್ಣಿನ ಧ್ವನಿ ಕೇಳಿದಾಗ ಹೋದ ಜೀವ ಬಂದ ಹಾಗಾಯ್ತು. ನಡುಗುವ ಕೈಯಿಂದಲೇ ಬಾಗಿಲು ತೆರೆದ. ಅದು ಅದು, ರಾತ್ರಿ … ಬಾಗಿಲು ಎಂದು ತೊದಲತೊಡಗಿದ. ಬಾಗಿಲತ್ತ, ಸುತ್ತಮುತ್ತ ನೋಡಿದ ಸುಬ್ಬಮ್ಮನವರು ಒಮ್ಮೆ ಬೇಜಾರಿನಿಂದ ತಲೆ ಅಲ್ಲಾಡಿಸಿದರು. ತೋ, ನಿನ್ನೆ ನಮ್ಮ ನಾಯಿ ಪಾಂಡು ಇಲ್ಲಿಗೆ ಬಂದಿದ್ದನಾ ? ಮಳೆಗೆ ಚಳಿಯಾಗಿ ಒಳಬರೋಕೆ ಅಂತ ಬಾಗಿಲು ಕೆರೆದಿದ್ದಲ್ಲದೇ ಹೊರಗೆ ಹೊಲಸೂ ಮಾಡಿ ಹೋಗಿದ್ದಾನಾ? ಕರ್ಮ , ಕ್ಲೀನು ಮಾಡ್ತೀನಿ ತಡಿ ಅಂತ ನೀರು ತರೋಕೆ ಇವನ ರೂಮೊಳಗೆ ನುಗ್ಗಿದ್ರು. ಬಾಗಿಲಲ್ಲೇ ಹಿಂದಿನ ರಾತ್ರೆ ನಡೆದಿರಬಹುದಾದ್ದನ್ನೂ, ತಾನು ಊಹಿಸಿದ್ದನ್ನೂ ನೆನೆಸಿ ನಾಚುತ್ತಾ ನಿಂತ ಗುಂಡ ಬಾಗಿಲಿಗೊರಗಿ ಹಾಗೇ ನಿಂತಿದ್ದ…
ಈ ಲೇಖನ "ಪಂಜು"ವಿನಲ್ಲಿ ಪ್ರಕಟವಾಗಿದೆ :-) 

6 comments:

  1. ಯಪ್ಪ ಹಿಂಗಾ ಭಯಪಡಿಸೋದು ಗೆಳೆಯ?

    ReplyDelete
  2. ಹೆ ಹೆ.. ಹೂಂ ಮತ್ತೆ ಭದ್ರಿ ಭಾಯ್ :-) ;-)

    ReplyDelete
  3. Ha ha ha :)ಚೊಲೊ ಇದ್ದು :)

    ReplyDelete
  4. finally ufff !!

    now its hard to control my ha ha here :)

    ReplyDelete