Thursday, December 25, 2014

ಒಂದು ಕಾಗದದ ಕತೆ

ನಮಸ್ಕಾರ. ನಾನ್ಯಾರು ಅಂದ್ರಾ ? ಚಿಗುರಾಗಿ, ಮರವಾಗಿ , ಬೊಡ್ಡೆಯಾಗಿ, ಕಾರ್ಖಾನೆಯ ಅಸಂಖ್ಯ ರಾಸಾಯನಿಕಗಳ ಸಾಗರದಿ ಈಜಾಡಿ ಕೊನೆಗೂ ಪೇಪರ್ರೆಂಬ ಹೆಸರು ಪಡೆದ ಜೀವ ನಾನು. ಹೊರಜಗತ್ತ ಕಾಣೋ ನನ್ನ ಕನಸ ದಿನ ಕೊನೆಗೂ ನನಸಾಗಲಿದೆ. ನನ್ನಂತೇ ಇರೋ ಅದೆಷ್ಟೋ ಜನರನ್ನು ಒಂದು ಕಟ್ಟು ಹಾಕಿ ಚೆಂದದ ಹೊದಿಕೆ ಹೊದಿಸಿ ಇಟ್ಟಿದ್ದಾರೆ. ಹೊರಜಗತ್ತಿನ ಕತೆ ಕೇಳುತ್ತಲೇ ಬದುಕ ಹಲಹಂತ ದಾಟಿದ ನಮ್ಮ ಮುಂದಿನ  ಗಮ್ಯವೆಲ್ಲಿಗೋ ಗೊತ್ತಿಲ್ಲ. ಕಾಗದವೆಂದ್ರೆ ಸರಸ್ವತಿಯ ರೂಪವೆಂದು ಪೂಜಿಸುತ್ತಿದ್ದ ದಿನಗಳಿದ್ದವಂತೆ. ಬರಹವೆಂದರೆ ಪಾಠಿ-ಬಳಪ, ಕಾಗದವೆಂದರೆ ಶಾಲಾ ಪುಸ್ತಕದ ಸರಸ್ವತಿಯೆಂದು ನಂಬುತ್ತಿದ್ದ ಕಾಲವದು. ಇನ್ನೂ ಹಿಂದೆ ಮರಳ ಮೇಲೆ ವಿದ್ಯಾಭ್ಯಾಸ ಮಾಡಿಸುತ್ತಿದ್ದ ಕಾಲದಲ್ಲಿ ಕಾಗದ ಕಂಡವ ಅಂದ್ರೆ , ಅದರಲ್ಲಿದ್ದುದ ಓದಲು ಕಲಿತವ ಅಂದ್ರೆ ದೊಡ್ಡ ವಿದ್ಯಾವಂತನೆಂದೇ ಭಾವಿಸುತ್ತಿದ್ದ ಕಾಲವೂ ಇತ್ತಂತೆ. ತಿರುಗೋ ಚಕ್ರದಂತೆ ಕಳೆಯೋ ಕಾಲದಲ್ಲಿ ಅದೆಲ್ಲಾ ಮರೆಯಾಗಿ ಮಕ್ಕಳ ಗೀಚೋಣಕ್ಕೂ, ಪೆನ್ಸಿಲ ಅಕ್ಷರಕ್ಕೂ ಸಾಥಿಯಾಗಿರೋದು ಯಾರ್ಗೊತ್ತಾ ? ನಾವು ಪೇಪರ್ರೇ ಅಂತ ಅಣ್ಣಂದಿರು ಹೇಳೋ ಕಾಲವೂ ಬಂದಿತ್ತು.ಇನ್ನೂ ಹೊರಜಗತ್ತ ಕಾಣದ ನನಗೆ ಈ ಜಗದ ಸುದ್ದಿಯೆಲ್ಲಾ ತಿಳಿದಿದ್ದಾದ್ರೂ ಹೇಗೆ ಅಂದ್ರಾ ? ಕೂತಲ್ಲೇ ಇದ್ದರೂ ನಮ್ಮ ಜಾಗಕ್ಕೆ ಬರುತ್ತಿದ್ದ ಅದೇನೋ ಮರುಬಳಕೆ ಅಂತ ಹೊಸ ರೂಪಪಡೆಯುತ್ತಿದ್ದ ಅಣ್ಣಂದಿರ ಬಾಯೇ ನಮ್ಮ ಕಿವಿಯಾದಾಗ ಕೇಳಿದ ಮಾತುಗಳಿವು. ಕಾಗದಕ್ಕೂ ಮನಸುಂಟಾ ಅನ್ನುವವರಿಗೆ ಅಚ್ಚರಿಪಡಿಸೋ ದನಿಗಳಿವು.

ಕಟ್ಟುಗಳ ನಡುವೆ ಬಂಧಿಯಾದವನಿಗೆ ಹೊರಜಗತ್ತೇ ಕಾಣದಂತೆ ಕಟ್ಟುಗಳ ರಾಶಿಯಲ್ಲಿ ಮುಚ್ಚಿಬಿಟ್ಟಿದ್ದಾರೆ. ಆಗಾಗ ಕೇಳಿಸ್ತಿರೋ ಜನರ ಮಾತುಗಳಿಂದ ಅದೊಂದು ಪುಸ್ತಕದ ಅಂಗಡಿಯಿರಬೇಕು ಅಂತ ಅನಿಸ್ತಾ ಇದೆ. ಆದ್ರೆ ಪುಸ್ತಕದ ಅಂಗಡಿಯೆಂದ್ರೆ ಅದೊಂದು ಸಾಹಿತ್ಯ ಭಂಡಾರ, ಕಳೆದುಹೋಗೋ ಕಾಲವ ತಮ್ಮ ಪದಗಳಿಂದ ಕಟ್ಟಿಹಾಕೋ ಮಾಂತ್ರಿಕರ ಆಸ್ಥಾನ ಅಂತೆಲ್ಲಾ ಕೇಳಿದ್ದ ಮಾತುಗಳು ಸುಳ್ಳೇ ? ನಾ ಕೇಳಿದ ಭೈರಪ್ಪ, ಗಣೇಶಯ್ಯ, ಜೋಗಿ, ಅನಂತಮೂರ್ತಿ, ಲಂಕೇಶ್, ಗೋಪಾಲ ಕೃಷ್ಣ ಅಡಿಗ.. ಹೀಗೆ ನಾ ಕೇಳಿದ ಯಾವ ಹೆಸ್ರುಗಳೂ ಕೇಳ್ತಿಲ್ಲ. ಮಾತುಗಳೇನೋ ಕನ್ನಡಿಗರ ಹಾಗೆ ಕೇಳ್ತಾ ಇವೆ. ಆದ್ರೆ ಇವ್ರೆಲ್ಲಾ ಇಂಗ್ಲೀಷ್ ಕೃತಿಗಳ ಓದುಗರಾಗಿರಬಹುದಾ ? ಆದ್ರೆ ಚೇತನ ಭಗತ್, ಸಲ್ಮಾನ್ ರಷ್ದಿ, ಡ್ಯಾನ್ ಬ್ರೌನ್, ಅರವಿಂದ ಅಡಿಗರ ಹೆಸ್ರುಗಳೂ ಕೇಳ್ತಿಲ್ಲ.  ಆದ್ರೆ ಶಾಲೆ ಬುಕ್ಕು, ಸಿಂಗಲ್ ಲೈನ್ ಕಾಪಿ, ಡಬಲ್ ಲೈನ್ ಕಾಪಿ, ನಾಲ್ಕು ಸಾಲಿಂದು, ರೂಲ್ಡು, ಅನರೂಲ್ಡು ಅಂತೇನೋ ಹೊಸ ಹೊಸ ಮಾತುಗಳು..ಅರೆ ಮರೆತೇ ಹೋಗಿದ್ದೆ. ಮೈತುಂಬಾ ಹುಲಿಪಟ್ಟೆಯಂತೆ ಲೈನು ಬರೆಸಿಕೊಂಡ ಕಾಗದ ನಾನು. ಮಕ್ಕಳ ಬರಹಕ್ಕೋ , ದೊಡ್ಡವರ ಬರಹಕ್ಕೋ ವೇದಿಕೆಯಾಗಬಹುದಾದ ಪುಸ್ತಕಗಳು, ಪೆನ್ನು, ಪೆನ್ಸಿಲ್ಲು ಮತ್ತಿನ್ನೇನೇನೋ ಸಿಗುತ್ತಂತಲ್ಲ ಅಂಗಡಿ,ಅದೆ  ಅದೇನೋ ಹೇಳ್ತಿದ್ರಲ ಡಿಪಾರ್ಟುಮೆಂಟಲ್ ಸ್ಟೋರು ಅಂತ ಅದಾ ಇದು ? ಇರಬಹುದೇನೋ ಅಂತ ಆಲೋಚಿಸೋ ಹೊತ್ತಿಗೆ ನನ್ನ ಪಕ್ಕದಲ್ಲಿದ್ದ ಕಟ್ಟನ್ನು ಯಾರೋ ಎತ್ತಿಕೊಂಡ್ರು. ಯಾರಾಗಿರಬಹುದು ಅನ್ನೋ ಕುತೂಹಲದಲ್ಲಿದ್ದಾಗಲೇ ನನ್ನನ್ನೂ ಯಾರೋ ಎತ್ತಿಕೊಂಡ್ರು. ಕಟ್ಟುಗಳ ನಡುವಿಂದ ಕಷ್ಟಪಟ್ಟು ಕಣ್ಣುಹಾಯಿಸಿದ್ರೆ ಯಾವುದೋ ಮಗುವಿನ ಮುಖ ಕಾಣ್ತಾ ಇತ್ತು. ಅಮ್ಮ ಅಮ್ಮ. ಈ ಕಾಪಿ ತಗಳ್ಳನ್ವಾ ಇದ್ರ ಬೈಂಡಿಗಲ್ಲಿರೋ ಹೂವು ಚೆನ್ನಾಗಿದೆ ಅಂತಾ ಇದ್ದ ಪುಟ್ಟ ಬಾಲನೊಬ್ಬ. ಮೊದಲು ತಗಂಡಿದ್ದ ಕಟ್ಟನ್ನೂ.. ಅಲ್ಲಲ್ಲ ಕಾಪಿಯನ್ನು ಮತ್ತು ನನ್ನನ್ನು ಅಲ್ಲಲ್ಲ ಹೂವ ಬೈಂಡಿಗಿನ ಕಾಪಿಯನ್ನು ತಗೊಂಡ ನನ್ನ ಮೊದಲ ಒಡೆಯನ ಜೊತೆ ಹೊಸ ಪಯಣಕ್ಕೆ ಸಿದ್ದನಾದೆ.

ಅಂದು ರಾತ್ರಿಯೇ ನನ್ನ ಕಟ್ಟಿಗೊಂದು ಹೊದಿಕೆ ಸಿಗ್ತು. ಮಾರನೇ ದಿನ ಅ ಹುಡುಗನ ಬ್ಯಾಗಲ್ಲಿ ಭದ್ರವಾಗಿ ಅವನೊಂದಿಗೆ ಹೊರಡಲು ಸಿದ್ದನಾದೆ. ಅದೆಷ್ಟು ಬುಕ್ಕುಗಳಪ್ಪ ಆ ಪುಟ್ಟ ಪೋರನ ಬ್ಯಾಗಲ್ಲಿ. ಒಂದನೇ ಕ್ಲಾಸು ಅಲ್ಲಲ್ಲ ಫಸ್ಟ್ ಸ್ಟಾಂಡರ್ಡಿನ ಆ ಹುಡುಗನ ಬ್ಯಾಗಲ್ಲಿ ಒಂದೋ ಎರಡೋ ಪುಸ್ತಕ ಇರಬಹುದೇನೋ ಅಂತೆಣಿಸಿದ್ದ ನನಗೆ ರಾಶಿ ರಾಶಿ ಪುಸ್ತಕ ಕಂಡು ದಿಗಿಲು ! ಆ ಎಳೆಯನ ತೂಕಕ್ಕಿಂತಲೂ ಹೆಚ್ಚು ಭಾರದ ಪುಸ್ತಕ ಹೇರೋ ಈ ಖೂಳರಿಂದ ಅವನ ಬೆನ್ನೆಲ್ಲಿ ಬಾಗಿಬಿಟ್ಟೀತೋ ಎಂಬ ಅಳುಕು. ಆದರೆ ಅದೆಲ್ಲಾ ಸಾಮಾನ್ಯವೆಂಬಂತೆ ಬ್ಯಾಗೆಂಬ ಮೂಟೆಯ ಹೊತ್ತ ಆ ಪೋರ ಬೆಳಬೆಳಗ್ಗೆ ಶಾಲೆಗೆ ಹೊರಟ. ಬ್ಯಾಗಲ್ಲಿ ಭದ್ರವಾಗಿದ್ರೂ ನನ್ನೊಡೆಯನ ಮಾತುಗಳಿಂದ ನಾನೆಲ್ಲಿ ಸಾಗುತ್ತಿದ್ದೇನೆಂಬ ಅರಿವಾಗುತ್ತಿತ್ತು. ಕೆಲ ಹೊತ್ತಿನಲ್ಲೇ ಎಲ್ಲೋ ನಿಂತ ಭಾವ. ಅವನ, ಅವನಮ್ಮನ ದನಿಯ ಜೊತೆಗೆ ಇನ್ನೊಂದಿಷ್ಟು ಮಹಿಳೆಯರ, ಅವರ ಮಕ್ಕಳ ದನಿಗಳು ಕೇಳತೊಡಗಿದ್ವು. ಯಾರಪ್ಪ ಅವ್ರು ಅಂದ್ರಾ ? ಅವ್ರೆಲ್ಲ ತಮ್ಮ ಮಕ್ಕಳ ಶಾಲೆ ಬಸ್ಸಿಗೆ ಹತ್ತಿಸೋಕೆ ಅಲ್ಲಿಗೆ ಬರ್ತಿದ್ದ ಜನಗಳು ಅಂತ ಸ್ವಲ್ಪ ದಿನಗಳ ನಂತರ ತಿಳಿಯಿತು ಬಿಡಿ. ಅ ವಿಷ್ಯ ಒತ್ತಟ್ಟಿಗಿರ್ಲಿ. ಏನಪ್ಪ ರಾಹುಲ್ ಫುಲ್ ಸ್ಮಾರ್ಟಾಗಿದೀಯ ? ಏನು ಮಿಸೆಸ್ ಶೇಖರ್ ಪ್ರಿಯಾಂಕ ಒಬ್ಳೇ ಬಂದಿದಾಳೆ ಇವತ್ತು, ಪ್ರಮೋದ್ ಎಲ್ಲಿ ಕಾಣ್ತಾ ಇಲ್ಲ ಇತ್ಯಾದಿ ಇಂಗ್ಲೀಷ್ ಮಾತುಗಳಲ್ಲಿ ಅಮ್ಮಂದಿರಿದ್ರೆ ಹುಡುಗರ ದನಿ ಕೊಂಚ ಕಮ್ಮಿಯಾಗಿತ್ತು. ಸಡನ್ನಾಗಿ ನಾನಿದ್ದ ಬ್ಯಾಗು ಎಲ್ಲೋ ಬಿದ್ದ ಹಾಗೆ ಭಾಸವಾಯ್ತು. ಓ, ಬಿದ್ಬುಟ್ಯಾ ನನ್ನೊಡೆಯ ಅಂತ ಕೇಳೋ ಮನಸ್ಸಾಯ್ತು. ಆದ್ರೆ ನನ್ನ ಮಾತು ಅವನಿಗೆ ಅರ್ಥವಾಗೋದಾದ್ರೂ ಹೇಗೆ ? ಛೇ. ಮರ್ತೇ ಹೋಗ್ಬುಡತ್ತಪ ಇದು ಅಂತ್ಕೊಳೋ ಹೊತ್ತಿಗೆ ಅವನಮ್ಮನ ದನಿ ಕೇಳ್ತು. ಈ ಬ್ಯಾಗ್ ಹಾಕ್ಕೊಂಡು ಓಡ್ಬೇಡ ಅಂತ ಎಷ್ಟು ಸಲ ಹೇಳೋದು ನಿಂಗೆ ರಾಹುಲ್ ? ಆಡೋದಿದ್ರೆ ಬ್ಯಾಗ್ ತೆಗ್ದಿಟ್ಟು ಆಡು. ಇಲ್ಲೇ ಆಡ್ಬೇಕ ನಿಂಗೆ ? ಶಾಲೇಲಿ ಗ್ರೌಂಡಿರಲ್ವಾ ಅಂತ ಬಯ್ಯೋಕೆ ಶುರು ಮಾಡಿದ್ರು ರಾಹುಲನಮ್ಮ. ಅಯ್ಯೋ ಆಡ್ಕೊಳ್ಲಿ ಬಿಡಿ ಮಿಸೆಸ್ ಶರ್ಮ. ಶಾಲೇಲಿ ಪೀಟಿ ಸರ್ ರಜಾ ಅಂತ ಪೀಟಿ ಪೀರಿಯಡ್ಡಿಗೆ ಬಿಡ್ತಿಲ್ವಂತೆ ಕಳೆದ ಮೂರು ದಿನದಿಂದ. ಸಂಜೆ ಮನೆಗೆ ಬರ್ತಿದ್ದಂಗೆ ಟ್ಯೂಷನ್ನು ಅಂತ ಹೋಗ್ತಾವೆ. ಅಲ್ಲಿಂದ ಬರೋ ಹೊತ್ತಿಗೆ ಸುಸ್ತಾಗಿ ಮಲಗೋ ಹಾಗೆ ಆಗಿರ್ತಾವೆ. ಶಾಲೆ ಬಸ್ಸು ಬರೋವರೆಗಿನ ಒಂದೈದು ನಿಮಿಷನೇ ಫುಲ್ ಖುಷಿ ಖುಷಿಯಾಗಿ ಕಳಕಳಿಯಿಂದ ಇರೋದು ಇವು. ಆಡ್ಕೊಳ್ಳಿ ಬಿಡ್ಲಿ ಅಂದ್ರು ಮತ್ತೊಬ್ಬ ಮಹಿಳೆ. ನೀವು ಯಾವಾಗ್ಲೂ ಇವನ ಬೆಂಬಲಕ್ಕೆ ನಿಲ್ತೀರ ಅಂತ್ಲೇ ಇವ ಇಲ್ಲಿ ಇಷ್ಟು ಹಾರಾಡೋದು ಮಿಸೆಸ್ ಶರ್ಮ . ನೋಡಿ ಎಷ್ಟು ಆರಾಮಾಗಿ ಆ ಬ್ಯಾಗು ಇಟ್ಟು ಮತ್ತೆ ಆ ಮಕ್ಳ ಜೊತೆ ರೈಲಿನ ತರ ಸುತ್ತುತಾ ಇದಾನೆ. ದಿನಾ ಹಿಂಗೆ ಬಿದ್ದು ಇವನ ಸೂಟು , ಶೂಸು ಕೊಳೆ ಮಾಡ್ಕೊಂಡ್ರೆ ಮಾರ್ನೇ ದಿನಕ್ಕೆ ಹೆಂಗೆ ತಯಾರು ಮಾಡೋದು ? ಐದು ಜೊತೆ ಸೂಟಿಡ್ಬೇಕು ಅಷ್ಟೆ ನಾನು ಅಂತಿದ್ರು ರಾಹುಲನಮ್ಮ. ಅರೆ, ಇದು ಬಿರು ಬೇಸಿಗೆಯಲ್ವಾ ? ಈಗ್ಯಾಕೆ ಮಕ್ಕಳಿಗೆ ಸೂಟು ? ಈ ಸೂಟು ಬೂಟುಗಳೆಲ್ಲಾ ಚಳಿ ಭಯಂಕರ ಇರೋ ವಿದೇಶಗಳ ಹವೆಗೆ  ಹೊಂದೋದೇ ಹೊರತು ನಮ್ಮ ದೇಶಕ್ಕಲ್ಲವಂತ ಎಲ್ಲೋ ಕೇಳಿದ ಹಾಗಿತ್ತಲ್ಲ. ಒಂದನೇ ಕ್ಲಾಸ ಮಕ್ಕಳಿಗೆ ಬೇಸಿಗೆಯಲ್ಲೂ ಯಾಕಪ್ಪಾ ಈ ಹಿಂಸೆ ಅಂತ ಯೋಚ್ನೆ ಮಾಡ್ತಾ ಇರೋ ಹೊತ್ತಿಗೆ ರಾಹುಲನ ಶಾಲೆಯ ಬಸ್ಸು ಬಂದ ಶಬ್ದವಾಯ್ತು.

ಅಮ್ಮಂದಿರ, ಅಪ್ಪಂದಿರ ಟಾಟಾ ಬಾಯ್ಗಳ ಸದ್ದು ನಿಲ್ಲುತ್ತಿದ್ದಂತೆಯೇ ಬಸ್ಸು ಮುಂಚೆ ಹೊರಟ ಸದ್ದಾಯ್ತು. ಮುಂಚೆ ಇದ್ದದ್ದಕ್ಕಿಂತಲೂ ಹೆಚ್ಚಿನ ಮಕ್ಕಳ ಕಲರವ, ಮದ್ಯೆ ಮದ್ಯೆ ಅವರನ್ನು ಸುಮ್ಮನಾಗಿಸುತ್ತಿದ್ದ ಒಂದು ಹೆಣ್ಣುಮಗಳ ದನಿ ಕೇಳ್ತಾ ಇತ್ತು. ಹೇ, ನಿನ್ನೆ ಮಿಸ್ ಹೊಸ ಎರಡು ಲೈನಿನ ಕಾಪಿ ತರೋಕೆ ಹೇಳಿದ್ರಲ. ಅದಕ್ಕೆ ಒಂದು ಹೊಸ ಹೂವಿನ ಬೈಂಡಿಗಿನ ಬುಕ್ ತಗೊಂಡೆ ಕಣೋ ಅಂತ ನನ್ನೇ ಹೊರತೆಗೆಯಬೇಕೇ ? ಹೊರಗಿನ ಹೊದಿಕೆ ಬಿಚ್ಚಿ ಅದರ ಒಳಗಿದ್ದ ಹೂವ ಬಗ್ಗೆ ಮೆಚ್ಚುಗೆಯ ಮಾತುಗಳಾಡೋ ಹೊತ್ತಿಗೆ ಪಕ್ಕದಲ್ಲಿದ್ದವ ಅದ್ಯಾವುದೋ ಕಾರಿನ ಹೊದಿಕೆಯಿದ್ದುದ ತೆಗೆದಿದ್ದ. ಏ. ಮಿಸ್ಸು ಬೈತಾರೆ ಅಂತ ಮತ್ತೆ ಬೈಂಡನ್ನು ಯಥಾಪ್ರಕಾರ ಹಾಕಿದ ಕೈಗಳು ನನ್ನ ಮತ್ತೆ ಒಳಗಿಟ್ಟು ಬಿಟ್ವು. ಏ ತಡೀರೋ. ನಿಮ್ಮ ಬಸ್ಸು ಹೆಂಗಿದೆ. ನಿಮ್ಮನ್ನೆಲ್ಲ ಹತ್ತಿಸಿಕೊಂಡ ಮಹಿಳೆ ಹೆಂಗಿದಾಳೆ ? ಮಕ್ಕಳ ಜಗತ್ತು ಹೆಂಗಿದೆ ಅಂತ ಇನ್ನೂ ಸ್ವಲ್ಪ ಹೊತ್ತು ನೋಡಬೇಕು ಅಂತ ಕೂಗೋಣವೆನ್ನಿಸಿತು. ಊಹೂಂ. ನನ್ನ ದನಿ ಅರ್ಥವಾಗದ ಅವರನ್ನೇನು ಕೇಳಿ ಏನು ಪ್ರಯೋಜನ ? ಕಿಟಕಿ ಪಕ್ಕದಲ್ಲಿ ನಿಂತು ಪಕ್ಕದಲ್ಲಿ ಬರ್ತಿರೋ ಮತ್ತೊಂದು ಬಸ್ಸಲ್ಲಿದ್ದವರನ್ನು ನೋಡ್ತಿದ್ದವರು, ಹೊರಗೆ ಬರ್ತಿದ್ದ ಕಾರು, ಬಸ್ಸು, ಬೈಕುಗಳನ್ನೇ ತಮ್ಮ ಹೊರಪ್ರಪಂಚವೆಂಬಂತೆ ಬೆರಗುಗಣ್ಣಿಂದ ನೋಡ್ತಿದ್ದವರು, ತನ್ನ ಹುಟ್ಟಿದಬ್ಬ ಅಂತ ಬಸ್ಸಲ್ಲಿದ್ದ ಎಲ್ಲರಿಗೂ ಸಿಹಿ ಹಂಚುತ್ತಿದ್ದ ಮತ್ತೊಬ್ಬ ಹುಡುಗಿ, ಇದೇನು ಟ್ರಾಫಿಕಪ್ಪಾ ಇಲ್ಲಿ. ಬೆಳಬೆಳಗ್ಗೆ ಈ ಶಾಲೆ ಮಕ್ಕಳನ್ನು ಶಾಲೆ ತಲುಪಿಸೋ ಹೊತ್ತಿಗೆ ಸಾಕಾಗಿ ಹೋಗುತ್ತೆ . ಥೋ ಅಂತ ಶಾಪ ಹಾಕುತ್ತಿದ್ದ ಡ್ರೈವರಪ್ಪ..ಇವಿಷ್ಟೇ ಆ ಕ್ಷಣಗಳಲ್ಲಿ ನನಗೆ ದಕ್ಕಿದ ಹೊರಪ್ರಪಂಚ.

ಶಾಲೆಯ ಪ್ರವೇಶವಾಯ್ತು ಕೊಂಚ ಹೊತ್ತಿನಲ್ಲಿ. ನನ್ನ ಒಂದೆಡೆ ಇರಿಸಿ ಎಲ್ಲೋ ತೆರಳಿದ ನನ್ನೊಡೆಯ. ಅದ್ಯಾವ್ದೋ ಗಂಟೆಯ ಶಬ್ದ ಕೇಳ್ತಾ ಇತ್ತು. ಕೊಂಚ ಹೊತ್ತು ನಿಶ್ಯಬ್ದ. ಮತ್ತೆ ಮಕ್ಕಳ ಮಧುರ ಸಾಮೂಹಿಕ ದ್ವನಿ ಕೇಳಿ ಪುಲಕಿತಗೊಂಡೆ ನಾನು.ಅದರಲ್ಲಿ ನನ್ನೊಡೆಯನ ದನಿಯೂ ಕೇಳಬಹುದೇ ಅಂತ ಎಷ್ಟು ಪ್ರಯತ್ನಿಸಿದರೂ ಆಗಲಿಲ್ಲ. ಅದೆಷ್ಟೋ ಸಂಖ್ಯೆಯ ಮಕ್ಕಳು ದಿನಾ ಒಂದಾಗಿ ಹೇಳೋ ಅದಕ್ಕೆ ಬೆಳಗಿನ ಪ್ರಾರ್ಥನೆ ಅನ್ನುತ್ತಾರಂತ ಆಮೇಲೆ ತಿಳಿಯಿತು ಬಿಡಿ. ಕೊಂಚ ಹೊತ್ತಲ್ಲೇ ನನ್ನೊಡೆಯನ ತರಗತಿ ಶುರುವಾಯ್ತು ಅಂತ ನನ್ನನ್ನು ಹೊರತೆಗೆದಾಗ ಗೊತ್ತಾಯ್ತು. ನಾನು ಬರೆದ ಹಾಗೆ ಬರೆಯಿರಿ ಅಂತ ಇಂಗ್ಲೀಷಿನಲ್ಲಿ ಹೇಳುತ್ತಿದ್ದರು ಅವನ ಮೇಡಂ. ಸರಿ ಅಂತ ನನ್ನ ತೆಗೆದು ಬರೆಯಲು ಶುರು ಮಾಡಿದ. ಏನಾಶ್ಚರ್ಯ ? ಒಂದನೇ ತರಗತಿ ಹುಡುಗನ ಕೈಯಲ್ಲಿ ಇಂಗ್ಲೀಷ್ ಪದಗಳ ಬರೆಸುತ್ತಿದ್ದಾರೆ ! ಅದಾದ ಮೇಲೆ ಮತ್ತೆ ಮತ್ತೆ ಪಿರಡುಗಳು. ನನ್ನ ಒಳಗಿಟ್ಟು ಉಳಿದ ಕಟ್ಟುಗಳನ್ನೆತ್ತಿಕೊಳ್ಳುತ್ತಿದ್ದ ಅವನ ಕೈಯಲ್ಲಿ ಇದೇ ತರಹ ಪುನರಾವರ್ತನೆಯಾಗುತ್ತಿರಬಹುದಲ್ವಾ ಅನಿಸಿತು. ಒಂದನೇ ತರಗತಿ ಅಂದಾಗ ಪಾಠಿ-ಬಳಪ, ಅಆಇಈ ಅಂತಿದ್ದ ಕಾಲ ಹೋಗಿ ಬುಕ್ಕು, ಪೆನ್ಸಿಲ್ಲು , ಪೆನ್ನುಗಳು ಬಂದುಬಿಟ್ಟಿದೆ ! ಆಟವಾಡಿಕೊಂಡು ನಲಿಯೋ ಮನಸ್ಸುಗಳಿಗೆ, ಎಳೆ ಕೈಗಳಿಗೆ ಅದೆಷ್ಟು ಹಿಂಸೆಯಾಗುತ್ತಿರಬಹುದು ಅಂತ ನೆನೆದು ನನ್ನ ಕಣ್ಣುಗಳಲ್ಲೊಮ್ಮೆ ನೀರು ಜಿನುಗಿತು. ಓ. ನಾನು ನಿಮ್ಮ ಹಾಗೆ ಮನುಷ್ಯನಲ್ಲವಲ್ಲ. ನನ್ನ ದನಿಯೇ ಕೇಳದ ನಿಮಗೆ ನಾನತ್ತಿದ್ದು ಎಲ್ಲಿ ಗೊತ್ತಾಗಬೇಕು ? !

ಹಿಂಗೇ ದಿನಗಳುರುತ್ತಿದ್ದಂತೆ ಈ ಬ್ಯಾಗ ಹೊತ್ತು ಸ್ಕೂಲು, ಟ್ಯೂಷನ್ನುಗಳಿಗಾಗಿ ಓಡೋ ರಾಹುಲನ ಬಗ್ಗೆ ಮರುಕ ಮೂಡಲಾರಂಭಿಸಿತು. ಯಾವತ್ತು ಈ ಬ್ಯಾಗ ಬಂಧನದಿಂದ ಬಿಡುಗಡೆ ಸಿಕ್ಕಿ, ಬೈಂಡಿನ ಕೋಳದಿಂದ ಮುಕ್ತಿ ಸಿಗುತ್ತೋ ಅಂತ ಕಾಯತೊಡಗಿದೆ. ಕೊನೆಗೂ ಎಣಿಸುತ್ತಿದ್ದ ಆ ಸುದಿನ ಬಂತು. ರಾಹುಲ ಮೊದಲನೇ ತರಗತಿ ಪಾಸಾಗಿ ಎರಡನೇ ತರಗತಿಗೆ ತೇರ್ಗಡೆಯಾಗಿದ್ದ ಸುದಿನ.   ನನ್ನೊಡೆಯ ಪಾಸಾಗಿರೋದಂದ್ರೆ ಅದು ಕಮ್ಮಿ ಖುಷಿಯಾ ? ಹಕ್ಕಿಗಳಂತೆ ರೆಕ್ಕೆಯಿದ್ದಿದ್ರೆ ಒಮ್ಮೆ ಸುತ್ತೆಲ್ಲಾ ಹಾರಿ ಚೀಂ ಚೀಂ ಅಂದು ಗಂಟಲು ನೋಯುವವರೆಗೂ ಕೂಗಿ ಬಂದುಬಿಡುತ್ತಿದ್ದೆನೇನೋ. ಆದ್ರೆ ಹಕ್ಕಿಯಲ್ಲವಲ್ಲ. ಹಾಕಿದ್ದ ಬೈಂಡು ಅರ್ಧರ್ಧ ಹರಿದಿದೆಯಾದ್ರೂ , ಕಟ್ಟಿದ ಕಟ್ಟ ಬಂಧನ ಹಾಗೇ ಇದೆಯಲ್ಲ. ಆದ್ರೆ ನನ್ನಾ ಸಂತಸದ ಕ್ಷಣಗಳು ಕೊನೆಯಾಗೋಕೆ ಹೆಚ್ಚು ಹೊತ್ತು ಬೇಕಾಗಿರಲಿಲ್ಲ. ನನ್ನ, ಮತ್ತು ಮೊದಲನೇ ತರಗತಿಯ ಬುಕ್ಕುಗಳನ್ನೆಲ್ಲಾ ಒಂದೆಡೆ ರಾಶಿ ಮಾಡಿದ ರಾಹುಲನಮ್ಮ , ರೀ ಈ ಬುಕ್ಕುಗಳನ್ನೆಲ್ಲಾ ರದ್ದಿಯಂಗಡಿಗೆ ಹಾಕ್ಬೇಕು. ಮನೇಲಿ ಜಾಗ ಇಲ್ಲ. ಮತ್ತೆ, ಸಂಜೆ ಹೊಸ ಬುಕ್ಕು ತರೋಕೆ ಶ್ರೀರಾಮ ಪ್ರಾವಿಷನ್ ಸ್ಟೋರಿಗೆ ಹೋಗ್ಬೇಕು ಗೊತ್ತಾಯ್ತಾ ? ಅಂದ್ರು. ಏ, ಇನ್ನು ಮುಂದಿನ ವರ್ಷಕ್ಕೆ ತಾನೇ ಬುಕ್ಕುಗಳು ? ನಿಧಾನ ತಂದ್ರಾಯ್ತು ಬಿಡು ಅಂತ ರಾಹುಲನಪ್ಪ ಹೇಳ್ತಾ ಇದ್ರೆ.. ಆ ಮಾತ ಅರ್ಧಕ್ಕೇ ತುಂಡರಿಸಿದ ರಾಹುಲನಮ್ಮ , ಏ ಮರ್ತೋಯ್ತಾ ? ಆ ಸಮ್ಮರ್ ಕ್ಯಾಂಪು ಅಂತ ಇಪ್ಪತ್ತು ದಿನ ಕಳಿಸಿ ಬಿಟ್ರೆ ಅವನ ಜೊತೆಗೆ ನಿಮಗೂ ಶಾಲೆ ಅಂತ ಒಂದಿದೆ ಅಂತ್ಲೇ ಮರೆತುಹೋಗುತ್ತೆ! ಮುಂದಿನ ವರ್ಷದ ಮೊದಲ ದಿನ ಮತ್ತೆ ಪುಸ್ತಕ ಅಂತ ಓಡಬೇಕು. ಅದೆಲ್ಲಾ ಬೇಡ. ಇವತ್ತೇ ಹೋಗೋಣ ಅಂದ್ರು. ಅಬ್ಬಾ ಅಂದ್ಕೊಂಡೆ. ಉಳಿದ ಕಟ್ಟುಗಳ ಜೊತೆಗೆ ರದ್ದಿಯಂಗಡಿ ಸೇರಿದೆ. ಅಲ್ಲಿಂದ ಒಬ್ಬನ ಕೈಸೇರಿ ಕಡ್ಲೆಪುರಿಯಂಗಡಿಯ ಖುಷಿ ಖುಷಿಯಲ್ಲೇ ಸೇರಿದೆ, ಹೊಸ ಕನಸ ಹೊತ್ತು. ಆದ್ರೆ ಕೆಲ ದಿನಗಳಲ್ಲೇ ಸತ್ಯದರ್ಶನ. ಯಾವುದು ಸತ್ಯ ಅನ್ನೋ ವಾದವ ಆಮೇಲೆ ಮಾಡೋಣವಾಗಲಿ, ನನ್ನ ಮಾತುಗಳ ಮುಂದುವರಿಕೆಯಾಗಲಿ.ಅಲ್ಲಿ ಜನ ನನ್ನಂತವರನ್ನು ಕೈಯೊರೆಸಿ ಬಿಸಾಕೋದನ್ನ ನೋಡಿದಾಗ ಕಾಪಿಯಾಗಿದ್ದ ಬದುಕೇ ಎಷ್ಟು ಚೆನ್ನಾಗಿತ್ತಲ್ವಾ ? ಎಷ್ಟು ಗೌರವಯುತವಲ್ವಾ ಅನಿಸ್ತಿದೆ. ಆಗ ಸ್ವಚ್ಛಂದವಾಗಿ ಬದುಕಬೇಕು ಹಾರಬೇಕು ಅಂತೆಲ್ಲಾ ಕನಸ ಕಂಡಿದ್ದವ ನಾನೀಗ ಬೀದಿಯಲ್ಲಿ ಗಾಳಿ ಬಂದಾಗೆಲ್ಲಾ ಹಾರುತ್ತಿದ್ದೇನೆ. ಎಷ್ಟೋ ದಿನಗಳ ಕಾಲ ಬಿಸಿಲು, ಗಾಳಿ ತಿನ್ನುತ್ತಾ ಕುಳಿತಿದ್ದ ನನಗೆ ಕೊನೆಗೂ ಮತ್ತೊಮ್ಮೆ ಮಕ್ಕಳ ದನಿ ಕೇಳಿ ಖುಷಿಯಾಯ್ತು . ಆದರೇನು ಅವರ ಮೈಯಲ್ಲಿ ಸೂಟಿಲ್ಲ. ಸಾಮಾನ್ಯ ಶಾಲಾ ಹುಡುಗರಂತೆ ಅಂಗಿ ಚಡ್ಡಿಗಳೂ ಇಲ್ಲ. ಮಾಸಿದ, ಅದೆಷ್ಟೋ ತೇಪೆ ಕಂಡ ಅಂಗಿ, ಆ ದೊಗಲೆ ಅಂಗಿಯ ಕೆಳಗೆ ಮುಚ್ಚೇ ಹೋಗಿರುವ ಹೇಳಿಕೊಂಡರೆ ಮಾತ್ರ ಹೌದೆನ್ನಬಹುದಾದ ಒಂದು ಹರಕು ಚಡ್ಡಿ. ನನ್ನಂತಹ ಬಿದ್ದ ಪೇಪರ್ರು, ಪ್ಲಾಸ್ಟಿಕ್ಕುಗಳ ಚಿಂದಿಯಾಯುವ ಹುಡುಗರವರು. ಬೇಸಿಗೆಯಲ್ಲೂ ಸೂಟು ಹೊದ್ದು ಶಾಲೆಗೆ ಬೆವರುತ್ತಾ ಹೋಗೋ ಹುಡುಗರ ಭಾರತವೊಂದೆಡೆ. ಚಳಿಗಾಲದಲ್ಲೂ ಬೆಚ್ಚನೆಯ ಹೊದಿಕೆ ಸಿಗದ ತಮ್ಮ ನಸೀಬನ್ನೇ ಹಾಸಿ ಹೊದೆದು ಮಲಗಬೇಕಾದ ಪರಿಸ್ಥಿತಿಯ ಬೀದಿ ಮಕ್ಕಳ ಭಾರತವೊಂದೆಡೆ. ಅರೆ. ಎತ್ತ ಸಾಗುತ್ತಿದೆ ನನ್ನ ವಿಚಾರಧಾರೆ ? ಕಾಲದೊಂದಿಗೆ ಪಕ್ವವಾಗುತ್ತಿದೆಯಾ ? ಕೇಳಿದ ಮಾತುಗಳಿಂದ, ಕಂಡ ಸತ್ಯಗಳಿಂದ ರೋಸತ್ತು ಕ್ರಾಂತಿಯಾಗಬೇಕೆಂಬ ರೊಚ್ಚಿಗೇಳುತ್ತಿದೆಯಾ ? ಗೊತ್ತಿಲ್ಲ. ಸತ್ಯವೆಂಬುದೇನೆಂಬ ಮಾತು ಒತ್ತಟ್ಟಿರಿರಲಿ ಮತ್ತೊಮ್ಮೆ. ಆ ಮಕ್ಕಳಿಂದ ಅದೆಷ್ಟೋ ಕೈ ಬದಲಾಗಿ ಮತ್ತೆ ನನ್ನ ಗಮ್ಯವಾದ ಪುನರ್ಬಳಕೆ ಕೇಂದ್ರವ ಸೇರಿದ್ದೇನೆ. ಆದರೆ ನಾ ಹುಟ್ಟಿಬಂದ ಜಾಗವಲ್ಲವಿದು. ಯಾವುದೋ ಹೊಸ ಜಾಗ. ಹೊಸ ಮುಖಗಳು. ಮತ್ತಿನ್ಯಾವುದೋ ರೂಪ ಪಡೆದು ಹೊಸ ಜನ್ಮ ಪಡೆಯಲು ಸಿದ್ದನಾಗುತ್ತಿದ್ದೇನೆ. ನನ್ನನುಭವಗಳ ನನ್ನಂತೇ ಕಾದು ಕುಳಿತ ಎಳೆಜೀವಗಳೊಡನೆ ಹಂಚಿ, ಜೊತೆಯಾದ ಹಿರಿಜೀವಗಳಿಗೆ ಕಿವಿಯಾಗಿ ಹೊಸತೊಂದು ಬಾಳಲಿ ಮತ್ತಷ್ಟು ಮಾಗಲು ಬದ್ದನಾಗುತ್ತಿದ್ದೇನೆ.

2 comments:

  1. ಕಾಗದದ ಪುರಾಣವನ್ನು ಹರಿಯದಂತೆ ಹರಿಸಿರುವ ಪರಿ ಸೊಗಸಾಗಿದೆ.. ನಿಮ್ಮ ಪ್ರತಿಭೆಗೆ ಶರಣು

    ReplyDelete
    Replies
    1. ಧನ್ಯವಾದಗಳು ಶ್ರೀಕಾಂತಣ್ಣ :-)

      Delete