Sunday, February 15, 2015

ಪ್ರೇಮಿಗಳ ದಿನಕ್ಕೆ ಮೂರು ಮತ್ತೊಂದು ಭಾವ

ಮೊನ್ನೆ ವಾಟ್ಪಾಪಿನ ಗ್ರೂಪಲ್ಲೊಂದು ಪೋಸ್ಟು. ಬೈಕಿನ ಮೇಲಿದ್ದ ಒಬ್ಬ ಹುಡ್ಗ. ಅವನ ಪಕ್ಕದಲ್ಲೊಬ್ಬ ಹುಡ್ಗಿ. ಅವಳು ಅನ್ಯಮನಸ್ಕಳಾಗಿ ಎತ್ತಲೋ ನೋಡ್ತಿದ್ದಾಗ ಇನ್ಯಾರೋ ತೆಗೆದ ಪೋಟೋ ಅದು.ಕೆಳಗೊಂದು ಟ್ಯಾಗ್ ಲೈನು. ಬೇರೆ ಗ್ರೂಪುಗಳಿಗೂ ಇದ್ನ ಫಾರ್ವಾರ್ಡ್ ಮಾಡಿ ಅನ್ನೋದದ್ರ ಭಾವಾರ್ಥ. ಬೈಕ್ ಮೇಲೊಬ್ಬ ಹುಡ್ಗ ಅವ್ನ ಪಕ್ಕದಲ್ಲೊಬ್ಳು ಹುಡ್ಗಿ ನಿಂತ್ಕಂಡಿದ್ರೆ ಏನರ್ಥ ? ಅದನ್ಯಾಕೆ ದುನಿಯಾಕ್ಕೆ ಫಾರ್ವಾರ್ಡ್ ಮಾಡ್ಬೇಕು ಅಂತ ಅರ್ಥಾಗ್ಲಿಲ್ಲ. ಯಾವ್ದೋ ಹುಡ್ಗ , ಹುಡ್ಗಿ ಜೊತೆಗೆ ನಿಂತ್ಕಂಡು ಮಾತಾಡ್ತಿದಾರೆ ಅಂದ್ರೆ ಅವ್ರು ಪ್ರೇಮಿಗಳೇ ಆಗ್ಬೇಕಿಲ್ಲ ! ಜೊತೆಗಿದ್ದೋರು ಪ್ರೇಮಿಗಳೇ ಅಂತಿಂಟ್ಕೊಂಡ್ರೂ ಭಾರತೀಯತೆಗೆ, ಇಲ್ಲಿನ ಸಂಸ್ಕೃತಿಗೆ ಧಕ್ಕೆಯಾಗೋ ಅಂತ ಯಾವ ಅಂಶಗಳೂ ಆ ಫೋಟೋದಲ್ಲಿ ಕಾಣ್ತಿರಲಿಲ್ಲ. ತಮ್ಮ ಪಾಡಿಗೆ ತಾವಿರೋ ಇಬ್ರ ಫೋಟೋನ ಜಗತ್ತಿಗೆಲ್ಲಾ ಹಂಚೋಕೆ ಹೊರಡೋ ಇಂತವ್ರಿಗೆ ಮಾಡಕ್ಕೆ ಬೇರೆ ಕೆಲ್ಸ ಇರಲ್ವಾ ಅಂತ ? ಪಾರ್ವರ್ಡ್ ಮಾಡಿದವಗೆ ಅನ್ಸಿದ್ದು ಸುಳ್ಳಲ್ಲ !

ಈ ಘಟನೆ ಇವತ್ತು ನೆನಪಾಗಿದ್ಯಾಕಪಾ ಅಂದ್ರೆ ಬೆಳ ಬೆಳಗ್ಗೆ ಐಟಿಪಿಎಲ್ ರಸ್ತೇಲಿ ಸಾಮಾನ್ಯ ಬಸ್ಸಿಗಾಗಿ ಕಾಯ್ತಾ ಕಾಲ್ಗಂಟೆ ಆಗ್ತಾ ಬಂದ ಸಂದರ್ಭದಲ್ಲಿ ಕಂಡ ದೃಶ್ಯ. ಒಬ್ಬ ಹುಡುಗ. ಅವನ ಪಕ್ಕದಲ್ಲೊಬ್ಳು ಹುಡ್ಗಿ. ಇಬ್ಬರ ಕೈಯಲ್ಲೂ ಒಂದೊಂದು ಫೈಲುಗಳು. ಅಲ್ಲೇ ಯಾವುದೋ ಸಂದರ್ಶನಕ್ಕೆ ಬಂದಿರಬೇಕು ಅಂತ ಹುಡುಗನ ಫಾರ್ಮಲ್ಲು ಮತ್ತು ಹುಡುಗಿಯ ಫೈಲಿಂದ ಇಣುಕುತ್ತಿದ್ದ ಜೀಮೇಲಿನ ಕಾಪಿ ಹೇಳುತ್ತಿತ್ತು. ಕೇಳಿಸಿಕೊಳ್ಳೋ ಉದ್ದೇಶವಿರದಿದ್ರೂ ಕಿವಿಗೆ ಬಿದ್ದ ಮಾತುಗಳೆಲ್ಲಾ ಕೆಲಸದ ಬಗ್ಗೆಯವೇ. ನಂತರ ಬಸ್ಸತ್ತಿ ಹೊರಟವನಿಗೆ ಬಸ್ಸಲ್ಲೂ ಒಂದಿಷ್ಟು ಉದ್ಯೋಗವರಸಿ ಹೊರಟವ್ರು, ಕೆಲಸದಿಂದ ವಾಪಾಸ್ ಬರ್ತಿರೋರು ಸಿಕ್ಕಿದ್ರು. ಯಾರ ಮುಖದಲ್ಲೂ ಇವತ್ತು ಪ್ರೇಮಿಗಳ ದಿನ, ಕೆಲ್ಸ ಗಿಲ್ಸ ಎಲ್ಲಾ ಬಿಟ್ಟು ಮತ್ತಿನ್ನೋನೋ ಮಹತ್ತರವಾದ್ದು ಮಾಡ್ಬೇಕೆನ್ನೋ ಖುಷಿಯಾಗ್ಲಿ , ಗಾಬ್ರಿಯಾಗ್ಲೀ ಕಾಣ್ಲಿಲ್ಲ ! ಮುಖವನ್ನು ಬಿಸಿಲಿಗೆ, ದೂಳಿಗೆ ಹಾಳಾಗದಂಗೆ ಮರೆಮಾಚಿದ ಇನ್ನೊಂದಿಷ್ಟು ಚೂಡಿಧಾರಿಣಿಗಳು, ಫಾರ್ಮಲ್ಲಿಣಿಗಳೂ ಎದುರು ಸಿಕ್ಕಿದ್ರು. ಯಾರ ಹಿಂದೂ ಬೈಕ್ ವಾಲಾಗಳಿರಲಿಲ್ಲ. ಹಿಂದೆ ಮುಂದೆ ಒಂದಿಷ್ಟು ಹುಡುಗರಿದ್ರೂ ಅವರೂ ತಮ್ಮದೇ ಲೋಕದಲ್ಲಿದ್ದಂಗೆ ನಡೆದುಹೋಗ್ತಿದ್ರು. ಹುಟ್ಟೆ ತುಂಬೋದು ಮೊದ್ಲು ಗುರು. ಶೋಕಿ ಪಾಕಿ ಆಮೇಲೆ ಅನ್ಸಿದ್ದು ಸುಳ್ಳಲ್ಲ !

ದೊಮ್ಲೂರಿಗೆ ಹೋದವನಿಗೆ ಅಲ್ಲಿದ್ದ ಹನ್ನೆರಡೇ ಶತಮಾನದ ದೇವಸ್ಥಾನವ ಇವತ್ತಾದ್ರೂ ನೋಡೋಣ ಅನಿಸಿ ಅತ್ತ ಹೋದ್ರೆ ಅದು ಬಾಗ್ಲು. ಆದ್ರೆ ಅಲ್ಲಿಗೆ ನನ್ನಂತೇ ನೋಡಬಂದ ಮೂವರು ವಿದೇಶಿ ಮಹಿಳೆಯರು ಕಂಡ್ರು. ಚೋಳರ ಕಾಲದ ಆ ದೇಗುಲವ ಹೊರಗಿನಿಂದಲೇ ನೋಡಿ, ಅಲ್ಲಿನೊಂದಿಷ್ಟು ಚಿತ್ರ ಕ್ಲಿಕ್ಕಿಸಿ ಹೊರ ಹೊರಡುವುದರಲ್ಲಿದ್ದ ನನ್ನತ್ರ ನಮ್ಮ ಮೂವರದ್ದು ಒಂದು ಪಟ ತೆಕ್ಕೊಡ್ತೀಯೇನಪ್ಪ ಅಂದ್ರು. ಸರಿ ಅಂತ ಮುಚ್ಚಿದ ಪ್ರಧಾನ ಬಾಗ್ಲಿನ ಹತ್ರ ಅವರನ್ನು ನಿಲ್ಲಿಸಿ ಫೋಟೋ ತೆಗೆದ ನಾನು ಇಲ್ಲಿನ ಈ ದಶಾವತಾರಗಳ ಚಿತ್ರ ನೋಡಿದ್ರಾ ? ಇದೇನು ಅಂತ ಗೊತ್ತಾ ಅಂತ ಕೇಳಿದೆ ಸುಮ್ನೇ ಕುತೂಹಲಕ್ಕೆ. ಗೊತ್ತಿಲ್ಲ, ಹೇಳ್ತೀಯ ಅಂದ್ರು. ದಶಾವತಾರಗಳ ಹೆಸ್ರು, ಅವುಗಳ ಇಂಗ್ಲೀಷ್ ಅರ್ಥ, ಒಂಭತ್ತನೇ ಅವತಾರ ಅಂತ ಕೆಲವರು ಬುದ್ದನನ್ನು ಸೇರಿಸಿಕೊಳ್ಳುವ ಬಗ್ಗೆ, ಕೆಲವರು ಅವನ ಬದಲು ಬೇರೆ ದೇವರ ಸೇರಿಸಿಕೊಳ್ಳುವ ಬಗ್ಗೆ, ಕಲಿಯುಗದಲ್ಲಿ ಕಲ್ಕಿ ಬರುವನೆಂಬ ನಂಬಿಕೆಯ ಬಗ್ಗೆ ನನಗೆ ತಿಳಿದಷ್ಟು ಹೇಳಿದೆ. ಕಲ್ಕಿ ಯಾವಾಗ ಬರುತ್ತಾನೆಂಬ ಅವರ ಪ್ರಶ್ನೆಗೆ ಉತ್ತರಿಸಲು ಶಕೆ, ಬ್ರಹ್ಮನ ದಿನ, ಕಲ್ಪದ ಪರಿಕಲ್ಪನೆಗಳ ಅವಶ್ಯಕತೆ ಬರದೇ ಭೂಮಿ ಕೊನೆಗೊಳ್ಳುವ ಸಮಯದಲ್ಲಿ ದುಷ್ಟರ ದಮನಕ್ಕಾಗಿ ಅವನು ಬರುತ್ತಾನೆಂಬ ನಂಬಿಕೆ ಎಂದುತ್ತರಿಸಿದೆ. ಎಲ್ಲಾ ಅವತಾರಗಳ ಫೋಟೋಗಳನ್ನೂ ತೆಗೆದುಕೊಂಡ ಅವರು ಕಲ್ಕಿ ಯಾವತ್ತು ಬರುತ್ತಾನೆಂಬ ದಿನದ ಬಗ್ಗೆ ಸಿಕ್ಕಾಪಟ್ಟೆ ಆಸಕ್ತರಾಗಿದ್ದಂತೆ ಕಂಡುಬಂತು ! ವಾಮನ ತ್ರಿವಿಕ್ರಮನಾದ ಕತೆ, ನರಸಿಂಹ, ಮತ್ಯ, ನರಸಿಂಹನ, ಕೂರ್ಮನ ಪರಿಕಲ್ಪನೆಯಿಂದ ಆಸಕ್ತಿ ಹೊಂದಿದ ಅವರಿಗೆ ಹನ್ನೊಂದು ಹನ್ನೆರಡು ಹದಿಮೂರರ ಸುಮಾರಿಗೆ ಕಟ್ಟಲ್ಪಟ್ಟ ಹೊಯ್ಸಳರ ೯೨ ಕ್ಕಿಂತಲೂ ಹೆಚ್ಚಿನ ದೇಗುಲಗಳ ಬಗ್ಗೆ ಕೇಳಿ ಆಶ್ಚರ್ಯ ಪಟ್ರು. ಹಳೇಬೀಡಿನಲ್ಲಿನ ಶಿಲ್ಪಗಳು ಬ್ರಿಟಿಷ್ ಮ್ಯೂಸಿಯಂ ಸೇರಿದ ಕತೆ ಕೇಳಿ ಅದನ್ಯಾಕೆ ಭಾರತಕ್ಕೆ ತರೋ ಪ್ರಯತ್ನಗಳು ನಡೀತಿಲ್ಲ ಅನ್ನೋ ಪ್ರಶ್ನೆಗೆ ನಾನು ಕೆಲ ಕ್ಷಣ ನಿರುತ್ತರನಾಗಿದ್ದೆ :-( ಟಿಪ್ಪು ಸುಲ್ತಾನನ ಖಡ್ಗವನ್ನು ಭಾರತಕ್ಕೆ ತರಹೋದಾಗ್ಲೇ ಗಲಾಟೆಯಾಗಿದ್ದು ನೆನಪಾಗಿ ದೇಶ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳ ಹಾಳುಗೆಡವಲು ಸರ್ಕಾರಗಳು ಸಿದ್ದರಾಗದ ಕಾರಣದಿಂದ ಹೀಗಾಗಿರಬಹುದು ಅನ್ನೋ ನನ್ನ ಊಹೆಗೆ ಅವ್ರೂ ಬೇಸರದಿಂದ ತಲೆಯಾಡಿಸಿದ್ರು. ನೀನು ಇಲ್ಲಿಯವನೇನಾ, ಬರ್ತಾ ಇರ್ತೀಯ ಯಾವಾಗ್ಲೂ ಅನ್ನೋ ಪ್ರಶ್ನೆಗೆ ನಾನು ಕರ್ನಾಟಕದವ್ನೇ ಆದ್ರೆ ಹುಟ್ಟಿದ್ದು ಬೆಂಗ್ಳೂರಲ್ಲ ಅನ್ನೋ ನನ್ನುತ್ತರಕ್ಕೆ ಮತ್ತೆಲ್ಲಿ ಎಂಬ ಮರುಪ್ರಶ್ನೆ. ನಮ್ಮೂರು ಸಾಗರ, ಭಾರತದ ಅತೀ ಉತ್ತರದ ಜಲಪಾತ ಜೋಗದ ಬಳಿಯವನು ನಾನು ಎಂದಾಗ , ಓಹ್ ಜೋಗ ಜಲಪಾತ. ನಾ ನೋಡಿದ್ದೇನೆ ಅಂದ್ಲು ಆ ಸ್ವೀಡಿಷ್ ಗುಂಪಲ್ಲಿದ್ದ ಒಬ್ಬ ಮಹಿಳೆ. ಸಮಯವಾದ್ರೆ ಹಾಸನದ ಬಳಿಯಿರೋ ಹೊಯ್ಸಳ ದೇಗುಲಗಳಿಗೆ, ಅದರಲ್ಲೂ ಬೇಲೋರು ಹಳೇಬೀಡಿಗೆ ಭೇಟಿಕೊಡಿ ಅಂದಾಗ ಖಂಡಿತಾ ಹೋಗುತ್ತೇವೆಂದು ಅಲ್ಲಿಗೆ ಹೋಗುವ ವಿವರ ಪಡೆದ ಅವರಿಗೆ ನನಗೆ ತಿಳಿದಂತೆ ವಿವರ ಕೊಟ್ಟು ಹೊರಬಂದಾಗ ಇಲ್ಲಿನ ಗರಿಮೆಯ ಬಗ್ಗೆ ಒಂದಿಷ್ಟಾದರೂ ಬೆಳಕು ಚೆಲ್ಲುವಷ್ಟು ತಿಳಿಸಿಕೊಟ್ಟ ಜನಕ್ಕೆ, ಅಷ್ಟೆಲ್ಲಾ ಸಂಪತ್ತಿನ ಗಣಿಯಾದ ದೇಶದ ಬಗ್ಗೆ ಹೆಮ್ಮೆಯೆನಿಸಿ ಮೇರಾ ಭಾರತ್ ಮಹಾನ್ ಎಂದಿನಿಸಿತು.

ಹಂಗೇ ಹೊರಬರ್ತಿದ್ದಾಗ ವರ್ಷಗಳ ನಂತ್ರ ಕಾಲೇಜ್ ಜ್ಯೂನಿಯರೊಬ್ಳು ಸಿಕ್ಕಿದ್ಲು. ಸಿಕ್ಕವರಲ್ಲಿ ನಮ್ಮೂರ ಬಗ್ಗೆ, ಮನೆ ಬಗ್ಗೆ, ಕಾಲೇಜು ಬಗ್ಗೆ, ಕೆಲಸದ ಬಗ್ಗೆ ನಡೆದ ಮಾತುಕತೆಯಲ್ಲಿ ಇವತ್ತು ಪ್ರೇಮಿಗಳ ದಿನ ಅಂತ ಮರ್ತೇ ಹೋಗಿತ್ತು ! ಮತ್ತೆ ಬಸ್ ಹತ್ತಿ ಮನೆಗೆ ಮರಳೋ ಯೊಚನೆಯಲ್ಲಿದ್ರೆ ಹೊಟ್ಟೆ ತಾಳ ಹಾಕ್ತಾ ಇತ್ತು. ದಾರಿಯಲ್ಲಿ ಸಿಕ್ಕ ಮಂಗಳಮುಖಿಯರು, ಬೋಂಡಾ ಅಂಗಡಿ, ಮಾಂಸದಂಗಡಿ, ಟೈಲ್ ಅಂಗಡಿಯ ಕತ್ತರಿಸೋ ಸದ್ದು, ಪಕ್ಕದಲ್ಲೇ ಕಲ್ಲೊಡೆಯೋನ ಸದ್ದು, ಬಿಸಿಲಿಗೆ ತಂಪು ಅಂತ ರಾಶಿ ಕಲ್ಲಂಗಡಿ ಹಾಕಿ ಜನರ ಎದುರು ನೋಡುತ್ತಾ ಬೆವರೊರೆಸುತ್ತಿದ್ದ ಅಂಗಡಿಯವ, ಗಿರಾಕಿಗಳಿಗೆ ಕಾಯುತ್ತಿದ್ದ ಆಟೋವಾಲ...ಎಲ್ಲರ ಮುಖದಲ್ಲೂ ನನಗೆ ಕಂಡ ಕಾಮನ್ ಭಾವ ಹಸಿವು. ಮತ್ತೆ ಅನಿಸಿದ ಅನಿಸಿಕೆ ಮತ್ತೆ ಮೊದಲಿನಂತೇ.
ಹೊಟ್ಟೆಗೊಂದು ದಕ್ಕೋದು ಮುಖ್ಯ ಗುರು. ಶೋಕಿ ಗೀಕಿ ಆಮೇಲೆ ಗುರೂ !!
 

Thursday, February 5, 2015

ಶೀರ್ಷಿಕೆಯಿಲ್ಲದ ಭಾವಗಳು:

ಬರೆಯಬೇಕೆಂಬ ಭಾವ ತುಂಬಾ ಕಾಡತೊಡಗಿದಾಗ ಕಾಲ ತಾನೇ ಲೇಖನಿ,ಶಾಯಿಗಳಾಗಿ ಬರೆಸಿಬಿಡುತ್ತೆ. ಮನದ ಮೂಲೆಯಲ್ಲೆಲ್ಲೋ ಅಡಗಿ ಕೂತ ಭಾವ ಹೀಗೆ ಅನಿರೀಕ್ಷಿತವಾಗಿ ಎಂದೋ ಒಂದಿನ ಅಕ್ಷರರೂಪ ಪಡೆದಾಗ ಅದಕ್ಕೆ ಆಕಾರ ದಕ್ಕಿದ್ದೇ ಖುಷಿಯೇ ಹೊರತು ಮೆಚ್ಚುಗೆಗಳ ನಿರೀಕ್ಷೆಯಿಲ್ಲ, ಚುಚ್ಚುವಿಕೆಗಳ ನಿರಾಸೆಯೂ ಇಲ್ಲ. ನಿರೀಕ್ಷೆಗಳಿಗೆ ಮೂಸೆಯಲ್ಲಿ ಭಾವಗಳ ಎರಕ ಹೊಯ್ಯುವುದಕ್ಕಿಂತಲೂ ಅದನ್ನು ಅದಕ್ಕಿಷ್ಟಪಟ್ಟಂತೆ ಹರಿಯಬಿಡುವುದರಲ್ಲೇ ಏನೋ ಖುಷಿ. ಗೊತ್ತು ಗುರಿಯಿಲ್ಲದೆ, ಲಂಗುಲಗಾಮಿಲ್ಲದೆ ಆ ಕ್ಷಣಕ್ಕೆ ಹೊಳೆದ ಲಯದಲ್ಲಿ ಬರೆಯುತ್ತಾ ಹೋದರೆ ಏನಾದರೂ ಬರೆಯಬಹುದು, ಏನೇನೋ ಬರೆದುಬಿಡಬಹುದಾದ ಅಪಾಯವಿದೆಯಾದರೂ ಹರಿವ ನೀರಂತಿರೋ ಯೋಚನೆಗಳಿಗೆ ಒಂದು ಬಾಟಲಿಯೊಳಗೆ ತುರುಕಿ ಉಸಿರುಗಟ್ಟಿಸಲೆತ್ನಿಸದೇ ಹಾಗೇ ಹರಿಯಬಿಡುವ ಪರಿಯಿದೆಯಲ್ಲಾ, ಅದೇ ಒಂಥರಾ ಖುಷಿ. ಶೀರ್ಷಿಕೆಗಳ ಮೇಲೆ, ವಿಷಯಗಳ ಮೇಲೆ ಬರೆ ಬರೆದು ಬೇಸರಿಸಿದ ಮನಕ್ಯಾಕೋ ಬ್ಲಾಗ ನೆನಪಾಗುತ್ತಿತ್ತು ಇವತ್ತು . ಬ್ಲಾಗಂದ್ರೆ ಏನು ಅಂತ ಅದರರ್ಥ ಹುಡುಕ ಹೊರಟವನಿಗೆ ನಾಲ್ಕೈದು ವರ್ಷದ ಹಿಂದೆ ಬ್ಲಾಗೆಂಬುದು ಒಂತರಾ ಆನ್ಲೈನ್ ಡೈರಿ ಅಂತ ಓದಿದ್ದು ನೆನಪಾಗಿ ಈ ತರ ಶೀರ್ಷಿಕೆ, ವಿಷಯಗಳ ಹಂಗಿಲ್ಲದೆ ಉಳಿದುಬಿಡುವ ಚೂರುಪಾರು ಭಾವಗಳಿಗೆ ಅಲ್ಲಾದ್ರೂ ಜಾಗದಕ್ಕೀತೀನೋ ಎಂದು ಹುಡುಕಹೊರಟಿದ್ದೇನೆ. ಶೈಲಿ, ಪ್ರಾಸ,ವಿಷಯ ಅಂತೇನಿಲ್ಲವಿಲ್ಲಿ. ಈ ಕ್ಷಣಕ್ಕೆ ಮೂಡಿದ ಭಾವಗಳಿಗೆ ಅದೇ ಲಯದಲ್ಲೊಂದಿಷ್ಟು ಜಾಗ ಕೊಡೋ ಪ್ರಯತ್ನವಷ್ಟೆ.

ಮುಗ್ದತೆ ಅಂದ್ರೆ ಮಗುವಿನ ಮನಸ್ಸಂತೆ ಅಂತ ಓದಿದ ನೆನಪು. ಆದ್ರೆ ಓದೋದಕ್ಕೂ ನೋಡೋದಕ್ಕೂ ಎಷ್ಟು ವ್ಯತ್ಯಾಸ ಅಂತ ಹೊರಜಗತ್ತಿಗೆ ಕಾಲಿಟ್ಟು ಅರಿತವನಿಗೆ ಮಗುವಿನ ವಯಸ್ಸ ದಾಟಿ ಎಷ್ಟೋ ಮುಂದೆ ಬಂದ ಜೀವಗಳಲ್ಲಿಯೂ ಮುಗ್ದತೆ ಅಂತ ಕಂಡಿದ್ದು ಮಲೆಮಹದೇಶ್ವರ ಬೆಟ್ಟದಲ್ಲಿ. ಕಂಪೆನಿಯ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಲೆಮಹದೇಶ್ವರ ಬೆಟ್ಟ, ಅಲ್ಲಿ ಕಾಡು ಕುರುಬರು, ಜೇನು ಕುರುಬರು, ಜಾತ್ರೆ ಸೂಪರ್ರು ಅಂತೆಲ್ಲಾ ಹೇಳಿದ್ರೂ ಅಲ್ಲಿಗೆ ಕಾಲಿಟ್ಟಾಗಿನ ಅನುಭವಗಳೇ ಬೇರೆ. ನಾಗಮಲೆಯಲ್ಲಿನ ಮೂರು  ಬೆಟ್ಟಗಳನ್ನು ಹತ್ತಿಳಿದು ದೇಗುಲದ ಮೆಟ್ಟಿಲುಗಳು ಶುರುವಾಗಲ್ಲಿದ್ದ ಅಂಗಡಿಗಳ ಬಳಿ ಚಪ್ಪಲಿ ಬಿಡಬೇಕಾದ ಸಂದರ್ಭ. ಮೆಟ್ಟಿಲು ಕಾಣುತ್ತಿತ್ತು. ಚಪ್ಪಲಿ ಇಲ್ಲಿಯೇ ಬಿಡಿರೆಂಬ ಬೋರ್ಡೂ ಇತ್ತು. ಆದ್ರೆ ಅಲ್ಲಿಂದ ದೇವಸ್ಥಾನ ಎಷ್ಟು ದೂರವಿದೆಯೆಂಬ ಕಲ್ಪನೆ ಅಲ್ಲಿಗೆ ಮೊದಲ ಬಾರಿಗೆ ಹೋಗಿದ್ದ ನಮಗೆ ಖಂಡಿತಾ ಇರಲಿಲ್ಲ. ಚಪ್ಪಲಿ ಹಾಕಿಕೊಂಡು ಹೋಗುವಂತಿಲ್ಲ ಅಂದ ಮೇಲೆ ಎಲ್ಲಾದ್ರೂ ಬಿಡ್ಲೇಬೇಕಲ್ಲ. ಸರಿ, ಅಲ್ಲೇ ಇದ್ದ ಅಂಗಡಿಯ ಬುಡದಲ್ಲಿ ಚಪ್ಪಲಿ ಕಾಯುತ್ತಿದ್ದ ಅಜ್ಜಿಯ ಬಳಿ ಹೋದ್ವಿ. ನಮ್ಮ ಶೂಗಳನ್ನ ಕೊಟ್ಟು ಮೇಲಿನ ದೇಗುಲ ದರ್ಶನಕ್ಕೆ ತೆರಳಿದ ನಾವು ಹೆಡೆಯೆತ್ತಿದ ಹಾವಿನ ಪರಿಯಲ್ಲಿ ನಿಂತಿರುವ ಕಲ್ಲುಬಂಡೆಗಳನ್ನು, ದೇಗುಲವನ್ನು ದರ್ಶಿಸಿ ಕೆಳಬರುವಾಗ ಸುಮಾರು ಒಂದೂಕಾಲು ಘಂಟೆ ಕಳೆದುಹೋಗಿತ್ತು. ಸಂಜೆ ನಾಲ್ಕಾಗುತ್ತಾ ಬಂದಿದ್ರಿಂದ ನಮಗೆ ಬೆಟ್ಟದಿಂದ ಇಳಿಯುತ್ತಿದ್ದವರು ಸಿಕ್ಕಿದ್ರೇ ಹೊರತು ನಮ್ಮ ಹಿಂದೆ ಹತ್ತುತ್ತಾ ಬರುತ್ತಿದ್ದವರು ಯಾರೂ ಕಂಡಿರಲಿಲ್ಲ. ಲೇಟಾಗುತ್ತಿದೆಯಲ್ಲ, ಬೇಗ ಹೊರಡುವ ಎಂಬ ಭಾವದಲ್ಲಿ ಕೆಳಗೆ ಬಂದ್ರೆ ಶೂ ಇಟ್ಟಿದ್ದ ಜಾಗದಲ್ಲಿ ಅಜ್ಜಿಯಿಲ್ಲ !. ಬದಲಿಗೆ ಒಬ್ಬ ಅಜ್ಜ ಕೂತಿದ್ರು. ಸರಿ, ನಮ್ಮ ಶೂ ಇಲ್ಲಿಟ್ಟಿದ್ವಿ ಅಂತೇಳಿ ತಗೊಂಡ್ವಿ. ಅಜ್ಜ, ದುಡ್ಡಿಗಾಗಿ ಒಂದು ಸೊಲ್ಲೆತ್ತಲಿಲ್ಲ. ಕಂಪೆನಿಯವ್ರು ನಡೆದುಹೋಗ್ತಾರೆ ಅಂತ ಗೊತ್ತಾದ್ರೆ ಒಳದಾರಿಗಳ ಮೂಲೆಗಳಲ್ಲಿ, ದೇಗುಲದ ಬಾಗಿಲುಗಳಲ್ಲಿ ಅವನಂತದೇ ಅಜ್ಜಂದಿರು ಕೈಯೊಡ್ಡುತ್ತಾ ಕುಳಿತಿದ್ದನ್ನು ನೋಡಿದ್ದ ನನಗೆ ಪಿಚ್ಚೆನಿನುಸ್ತು. ಅಲ್ಲಿ ಅಂಗಡಿಯವ್ರು ನಮ್ಮೊಂದಿಗೆ ಕನ್ನಡದಲ್ಲೇ ಮಾತಾಡ್ತಿದ್ರೂ ಪಕ್ಕದ ಮನೆಗಳಲ್ಲಿ ಹಾಡ್ತಿದ್ದ ರೇಡಿಯೋಗಳಲ್ಲಿ ತಮಿಳು ಹಾಡುಗಳು , ಮೆಟ್ಟಿಲು ಹತ್ತಿ ಹೋಗಬೇಕಾದ್ರೆ ಸಿಕ್ಕಿದ್ದ ಸ್ವಾಗತ ಕಮಾನಿನಲ್ಲಿ ಪರಭಾಷೆ ರಾರಾಜಿಸುತ್ತಿತ್ತು ! ಇಂಥಾ ದಿವ್ಯ ನಿರ್ಲಕ್ಷ್ಯಗಳಲ್ಲೇ ನಮ್ಮ ಗಡಿನಾಡುಗಳಲ್ಲಿ ಕನ್ನಡ ಕಣ್ಮರೆಯಾಗುತ್ತಿರುವುದಾ ಅನಿಸುತ್ತಿರುವಾಗಲೇ ಬೆಂಗಳೂರ ಮಾರತ್ತಳ್ಳಿಯಲ್ಲೇ ಕನ್ನಡಕ್ಕಿರೋ ಸ್ಥಿತಿ ನೆನಪಾಗಿ ಮಲೆಮಹದೇಶ್ವರದ ಸ್ಥಿತಿಯೇ ಉತ್ತಮವೇ ಅನಿಸಿಬಿಟ್ಟಿತೊಮ್ಮೆ.

ತಮಿಳು ಹಾಡುಗಳ ಅರ್ಥ ಏನಿರಬಹುದು ಅಂತ ಯೋಚಿಸುತ್ತಾ ಹಸಿದ ಹೊಟ್ಟೆಗೆ ಬ್ಯಾಗಲ್ಲೊಂದಿಷ್ಟು ತಿಂಡಿ ಹುಡುಕುತ್ತಿರುವಾಗ ಅಲ್ಲೇ ಪಕ್ಕದ ಗುಡಿಸಿಲಿನ ಮರೆಯಲ್ಲಿ ಅಜ್ಜಿಯ ಮುಖ ಕಾಣಿಸಿ ಮರೆಯಾದಂಗಾಯ್ತೊಮ್ಮೆ. ಟ್ರೆಕ್ಕಿಂಗು ಅಂತ ಹೋದಾಗ ನಾಲ್ಕೈದು ಜನ ಒಟ್ಟಿಗೆ ಮಲಗಲು ಆಗೋವಷ್ಟು ದೊಡ್ಡ ಟೆಂಟುಗಳನ್ನು ಮೂರು ಸೇರ್ಸಿದ್ರೆ ಎಷ್ಟಾಗತ್ತೋ ಸರಿ ಸುಮಾರು ಅದೇ ಸೈಜಿನದಿತ್ತು ಆ ಗುಡಿಸ್ಲು. ಹುಲ್ಲಿನ, ಹಂಚಿನ ಹೊದಿಕೆ. ಅಲ್ಲಲ್ಲಿ ಟಾರ್ಪಾಲು. ಗುಡಿಸಿಲಿನ ಹಿಂದೆ ಮರೆಯಾದ ಅಜ್ಜಿಯ, ಅದರಿಂದ ಕೇಳಿ ಬರುತ್ತಿದ್ದ ಹಾಡ ಧ್ಯಾನದಲ್ಲಿದ್ದಾಗ್ಲೇ  ಒಬ್ಬ ಹುಡುಗಿ ಅದರಿಂದ ಹೊರಬಂದ್ಲು , ಆ ಅಜ್ಜಿಯ ಮೊಮ್ಮಗಳಿರಬೇಕು ಅನಿಸುತ್ತೆ, ನಮ್ಮ ಎದುರು ಕೂತ ಅಜ್ಜನ ಹೆಗಲ ಮೇಲಿದ್ದ ಟವೆಲ್ ಪಡೆದು ಅವನಿಗೊಂದು ಶಾಲು ಹೊದೆಸಿ ಒಳಗೋದ್ಲು. ಎರಡೇ ನಿಮಿಷದಲ್ಲಿ  ಮತ್ತೆ ಹೊರಗೆ ಬಂದ ಅವಳು ಅನ್ನದ ಪಾತ್ರೆಯಲ್ಲಿ ನೀರು ತುಂಬಿಕೊಂಡು ಮತ್ತೆ ಒಳಗೋದ್ಲು. ಅಯ್ಯೋ ಶಾಲೆಗೆ ಹೋಗೋ ಮಕ್ಕಳನ್ನು ಈ ತರ ಮನೆಯಲ್ಲಿ ಇಟ್ಟುಕೊಂಡು ಕೆಲಸ ಮಾಡಿಸುತ್ತಿದ್ದಾರಲ್ಲಾ, ಇವರಿಗೆಲ್ಲಾ ಶಿಕ್ಷಣ ಇಲಾಖೆಯವ್ರು, ಸರ್ಕಾರದವ್ರು ಬುದ್ದಿ ಹೇಳಲ್ವೇ ಅಂತ ಯೋಚಿಸುತ್ತಾ ಅಳಿದುಳಿದ ಬ್ರೆಡ್ ತುಂಡುಗಳ ಬಾಯಿಗೆ ತುರುಕುತ್ತಿದ್ದಾಗ ಮತ್ತೆ ನಾವು ಕೂತಿದ್ದ ಅಂಗಡಿಗೆ ಬಂದು , ಅಣ್ಣಾ, ಸ್ವಲ್ಪ ಬೇಳೆ ಕೊಡು ಅಂತ ಇಸ್ಕೊಂಡು ಹೋದ್ಲು. ಓ, ಇದು ಈ ಮನೆಯವರದೇ ಅಂಗಡಿ, ಈ ಮೂಲೆಯಲ್ಲಿ ಇನ್ಯಾರು ಬಂದು ಅಂಗಡಿ ಇಡುತ್ತಾರೆ ? ಆ ಅಜ್ಜಿ ನಮ್ಮಿಂದ ದುಡ್ಡು ಪಡೆಯದೇ ಹೋದ್ರೆ ಪರ್ವಾಗಿಲ್ಲ. ಈ ಅಂಗಡಿಯಲ್ಲೇ ಏನಾದ್ರೂ ತಗೊಂಡು ಅವರಿಗೆ ಒಂಚೂರು ಲಾಭವಾದ್ರೂ ಮಾಡಿ ಹೋಗೋಣ ಅಂತ ಅಂದ್ಕೊಂಡು ಎರಡು ಬಾಳೆ ಹಣ್ಣು ತಗೊಂಡು ಅದನ್ನರ್ಧ ತಿಂದು ಮುಗಿಸೋ ಹೊತ್ತಿಗೆ ಅಜ್ಜಿಯ ಆಗಮನವಾಯ್ತು.

ನಮ್ಮನ್ನು ನೋಡಿದ ಅಜ್ಜಿ ಮುಗಳ್ನಕ್ಕಳೇ ಹೊರತು ದುಡ್ಡಿಗಾಗಿ ಬೇಡಲಿಲ್ಲ. ಐದು ಕಿ.ಮೀ ಬೆಟ್ಟ ಹತ್ತಿ ಬಂದಿರೋ ಜನರಲ್ಲಿ ಚಪ್ಪಲಿಗೆ ತಲಾ ಹತ್ತು ರೂ ಅಂದ್ರೂ ಕೊಡಬೇಕಾದ ಪರಿಸ್ಥಿತಿಯಲ್ಲೇ ಇರ್ತಾರೆ ಜನ. ವಿಧಿಯಿಲ್ಲವಲ್ಲ. ಪುಣ್ಯಕ್ಷೇತ್ರಗಳು , ಪ್ರವಾಸಿ ತಾಣಗಳು ಅಂತ ಜನರ ಸುಲಿಗೆಯಲ್ಲೇ ನಿರತ ಜನರ ನೆನಪಾಗಿ ಇಲ್ಲಿ ಹದಿನೈದಿಪ್ಪತ್ತು ರೂ ಕೈಬಿಡಬಹುದು ಅಂತನ್ನಿಸಿದ್ರೂ ಇಲ್ಲಿ ಎಷ್ಟು ಕೊಟ್ರೂ ತಪ್ಪೇನಿಲ್ಲವೆನಿಸ್ತು.ಮಹದೇಶ್ವರನ ಹುಂಡಿಗೆ ಹಾಕಿದಂತೆ ಅಂತ ಅಂದ್ಕೊಂಡು ಕಷ್ಟದಲ್ಲಿರೋ ಅಜ್ಜಿಗೆ ಕೊಟ್ರೆ ಅದು ದೇವರಿಗೆ ತಲುಪಿದಂತೇ ಸರಿ ಅಂತ ವಿವೇಕ ಹೊಡೆದುಕೊಳ್ಳೋ ಮುಂಚೆಯೇ ಎಷ್ಟು ಅಜ್ಜಿ ಅಂತ ಕೇಳಿಬಿಟ್ಟಿತು ಬಾಯಿ. ಎರಡು ಶೂಗಳಿಂದ ನಾಲ್ಕು ರುಪಾಯಿ ಕಣಪ್ಪಾ ಅಂದಾಗ ನಮಗೆ ನಮ್ಮ ಕಿವಿಗಳ ಮೇಲೆಯೇ ಮೊದಲು ನಂಬಿಕೆ ಬರಲಿಲ್ಲ !. ಅಲ್ಲಿ ನನ್ನ, ಮತ್ತು ಸ್ನೇಹಿತನ ಶೂಗಳ ಮಾತ್ರ ಇಟ್ಟಿರಲಿಲ್ಲ. ಮೆಟ್ಟಿಲು ಹತ್ತಿ ಹೋಗೋಕೆ ಕಷ್ಟ ಅಂತ ಮಧ್ಯಾಹ್ನದಿಂದ ಹೊತ್ತು ತಂದಿದ್ದ ನಮ್ಮಿಬ್ಬರ ಬ್ಯಾಗುಗಳನ್ನೂ ಇಟ್ಟಿದ್ವಿ. ಎಲ್ಲಾ ಸೇರಿ ನಾಲ್ಕು ರೂ !! ಹತ್ತು ರೂ ನೋಟು ಕೊಟ್ಟು ಹಾಗೇ ಹೊರಡಲನುವಾಗಿದ್ದ ನಮ್ಮನ್ನು ಅಜ್ಜಿ ತಡೆದ್ರು. ತಡೀರಪ್ಪ ಅನ್ನದಿದ್ರೂ ಅದೇ ತರದ ಮುಖಭಾವ ಅವರಲ್ಲಿ. ಸರಿ, ಏನಾಗುತ್ತೆ ನೋಡೋಣ ಅಂತ ಕಾದ್ವಿ.

ಅಜ್ಜಿ ತನ್ನ ಬಳಿಯಲ್ಲಿದ್ದ ಜೋಳಿಗೆ ತೆಗೆದು ಅದರಲ್ಲಿದ್ದ ಚಿಲ್ರೆಯಿಂದ ಆರಿಸಿ ತೆಗೆದು ಆರು ರೂಗಳ ಚೇಂಜ್ ಕೊಡೋದೇ ? ಸರಿಯಿದೆಯೇನಪ್ಪಾ ನೋಡಿ ಒಮ್ಮೆ ಅಂದ್ರು. ತಾನು ಜಾಸ್ತಿ ಕೊಟ್ಟುಬಿಟ್ಟಿದ್ದೇನೆ ಅನ್ನೋ ಭಾವ ಅಜ್ಜಿಯ ಬಳಿ ಖಂಡಿತಾ ಇರಲಿಕ್ಕಿಲ್ಲ, ಸಂಜೆಯಾಗುತ್ತಿರೋ ಹೊತ್ತಲ್ಲಿ, ಮಬ್ಬಾಗುತ್ತಿರೋ ಬೆಳಕಲ್ಲಿ ತಾನೇ ಎರಡರ ಕಾಯಿನ್ನು ಅಂತ ಒಂದರ ಕಾಯಿನ್ನು ಕೊಟ್ಟು ಕಡಿಮೆ ದುಡ್ಡು ಕೊಟ್ಟುಬಿಟ್ಟಿದ್ದೇನೋ ಎಂಬ ಅಳುಕಿದ್ದಂತೆ ಕಂಡಿತವರ ಭಾವ ಮತ್ತು ನುಡಿಗಳಲ್ಲಿ. ಇಲ್ಲ ಅಜ್ಜಿ, ಸರಿಯಾಗೇ ಇದೆ. ತುಂಬಾ ಥ್ಯಾಂಕ್ಸು ಅಂತ ಹೇಳಿ ಅಲ್ಲಿಂದ ಬೀಳ್ಕೊಡಬೇಕಾದ್ರೆ ಹೃದಯ ತುಂಬಿ ಬಂದ ಭಾವ. ಇನ್ನೊಂದು ಸ್ವಲ್ಪ ಭಾವುಕರಾಗಿದ್ದಿದ್ರೆ ಆ ಅಜ್ಜಿಯ ಕಾಲಿಗೆ ಬಿದ್ದು ಆಶೀರ್ವಾದ ತಗೊಂಡೇ ಮರಳ್ತಿರ್ದೇನೋ. ಆದ್ರೆ ನಮ್ಮಿಂದ ಆದಿನವದು ಸಾಧ್ಯವಾಗಿರ್ಲಿಲ್ಲ. ಎಷ್ಟೇ ಮುಕ್ತ ಹೃದಯವೆಂದ್ರೂ ನಾವು ಪಟ್ಟಣಿಗರೆಂಬ ಅಹಂ ಮನದ ಮೂಲೆಯಲ್ಲೆಲ್ಲೋ ಕಾಡಿದ್ದಿರಬೇಕು !

ಅಲ್ಲಿಂದ ಮರಳ್ತಾ ಮೂವರು ಹುಡುಗ್ರು ಸಿಕ್ಕಿದ್ರು. ಒಬ್ಬ ಹುಡುಗ, ಇಬ್ಬರು ಹುಡುಗಿಯರು. ಬೆಟ್ಟ ಹತ್ತುವಾಗ ನಿಂಬೆಹಣ್ಣು ಜ್ಯೂಸ್ ಕುಡೀರಿ, ಇರ್ಲೇಕಾಯಿ ಜ್ಯೂಸ್ ಕುಡೀರಿ(ನಿಂಬೆಗೆ ಅವರು ಕರೀತಿದ್ದ ಹೆಸ್ರು) ಅಂತ ಹೆಜ್ಜೆ ಹೆಜ್ಜೆಗೂ ಕರೆಯುತ್ತಿದ್ದ ಅವರಲ್ಲಿ ಆ ಹುಡುಗನಿಗೆ ವಾಪಾಸ್ಸು ಬರುತ್ತಾ ಕುಡಿಯುತ್ತೀವಪ್ಪಾ ಅಂತ ಹೇಳಿದ್ದೆ. ಅದನ್ನೇ ನೆನಪಿಟ್ಟುಕೊಂಡಿದ್ದ ಅವ ವಾಪಾಸ್ ಬರ್ತಾ ಕುಡೀತೀವಂದಿದ್ರಲ್ಲಣ್ಣ, ಇನ್ಯಾವಾಗ ಕುಡೀತೀರ ಅಂದ. ಸಂಜೆಯಾಗುತ್ತಾ ಬಂದಿತ್ತು. ಅವರು ತಂದಿದ್ದ ಜ್ಯೂಸು ಪೂರ್ಣ ವ್ಯಾಪಾರ ಆಗಿರ್ಲಿಲ್ಲ ಅಂತ ಕಾಣಿಸುತ್ತೆ. ಆದ್ರೆ ಬರೋ ಯಾತ್ರಿಕರೆಲ್ಲಾ ಮರಳೋ ಸಮಯವಾದ್ದರಿಂದ ಅದನ್ನು ಹಾಗೇ ಹೊತ್ತು ಹೊರಟಿದ್ದ ಅವ. ಅವನ ಮಾತು ಕೇಳೋ ಹೊತ್ತಿಗೆ ಬೆಟ್ಟವಿಳಿದು ಬಂದಿದ್ದ ನಮಗೆ ಬಾಯಾರಿಕೆಯೂ ಆಗಿತ್ತು, ನಮ್ಮತ್ರದ ನೀರೂ ಖಾಲಿಯಾಗುತ್ತಾ ಬಂದಿತ್ತು. ಎಷ್ಟಪ್ಪಾ ಅಂದೆ. ಹತ್ತಕ್ಕೆ ಮೂರು ಗ್ಲಾಸು ಅಂದ. ಜೊತೆಗಿದ್ದ ಆದರ್ಶ ಬೇಡ ಬಿಡು ಅಂತ ಹೇಳೋ ಹೊತ್ತಿಗೆ, ಇದ್ರಲ್ಲಿದ್ದ ಅಷ್ಟೂ ಜ್ಯೂಸು ಕುಡಿದು ಹತ್ತು ರೂ ಕೊಟ್ಟು ಬಿಡಿ ಸಾಕು ಅಂದ ಹುಡುಗ. ಆ ಸಮಯದಲ್ಲೂ ಮೆರೆದ ಅವನ ಸಮಯಪ್ರಜ್ನೆ, ಪುಕ್ಸಟೆ ದುಡ್ಡು ತೆಗೆದುಕೊಳ್ಳಲೊಪ್ಪದ ಸ್ವಾಭಿಮಾನ ಕಂಡು ಖುಷಿಯಾಯ್ತು. ಎಲ್ಲೋ ಸ್ವಲ್ಪ ಜ್ಯೂಸ್ ಇರ್ಬೋದು ಅಂತ ಕುಡಿಯೋಕೆ ಶುರು ಮಾಡಿದ ನಮಗೆ ಅದರಲ್ಲಿದ್ದ ಜ್ಯೂಸ್ ಖಾಲಿ ಮಾಡೋವಷ್ಟರಲ್ಲಿ ಇಬ್ಬರ ಹೊಟ್ಟೆ ತುಂಬಿದ ಭಾವ ! ಹತ್ತರ ನೋಟ ಪಡೆದ ಅವನ ಮುಖ ಗೆಲುವಾಯ್ತು ಆದ್ರೆ ಜೊತೆಗಿದ್ದ ಎರಡು ಹುಡುಗಿಯರ ಮುಖ ಬಾಡಿ ಹೋಯ್ತು. ! ಸಹಜವಲ್ಲವೇ ಅದು. ಅಣ್ಣಾ, ನನ್ನ ಜ್ಯೂಸ್ ಕುಡೀರಿ, ನನ್ನ ಜ್ಯೂಸ್ ಕುಡೀರಿ ಅಂತ ಅವ್ರೂ ದುಂಬಾಲು ಬಿದ್ರು. ಆದ್ರೆ ಹೊಟ್ಟೇಲಿ ಜಾಗ ಇಲ್ವೇ. ಬೇಡಮ್ಮ ಅಂದ್ರೆ ಅವ್ರು ಬಿಡುವಂಗೆ ಕಾಣ್ತಾ ಇಲ್ಲ.ಏನೋ ಬೈದು ಮುಂದೆ ಹೋಗ್ಬೋದಾಗಿತ್ತಾದ್ರೂ ಯಾಕೋ ಮನಸ್ಸು ಬರಲಿಲ್ಲ. ಎಲ್ಲಾ ಅನುಕೂಲವಿದ್ದಿದ್ರೆ ಅವರ್ಯಾಕೆ ಜ್ಯೂಸ್ ಮಾರಲು ಬರುತ್ತಿದ್ರು. ಶನಿವಾರದ ಸ್ಕೂಲ್ ಯೂನಿಫಾರ್ಮಲ್ಲಿದ್ದ ಅವರ ಕಂಡು ಇಲ್ಲಿ ದುಡ್ಡು ಸಿಗಲಿಲ್ಲ ಅಂದ್ರೆ ಶಾಲೆಯನ್ನೇ ಬಿಡಿಸಿ ಅವರನ್ನು ಶಾಶ್ವತವಾಗಿ ಕೂಲಿಗೆ  ಹಚ್ಚಬಹುದಾದ ಅಪಾಯವಿದೆಯಲ್ಲ ಅನಿಸಿ ಮತ್ತೆ ಹತ್ತು ರೂ ಕೊಟ್ಟು, ಇದನ್ನೇ ಹಂಚಿಕೊಳ್ಳಿ ನಿಮ್ಮಲ್ಲಿ ಅಂತ ಆ ಹುಡುಗಿಯರಿಗೆ ಹೇಳಿ ಮುಂದೆ ಬಂದ್ವಿ. ಅದನ್ನು ಪುಕ್ಕಟೆ ತಗೊಳ್ಳಲು ಸುತರಾಂ ಒಪ್ಪದ ಅವ್ರು ಜ್ಯೂಸ್ ಕುಡಿದೇ ಮುಂದೆ ಹೋಗ್ಬೇಕು ಅಂತ ಕೂತು ಬಿಡೋದೇ ? ಇಲ್ಲಮ್ಮ, ಜಾಗವೇ ಇಲ್ಲ ಅಂತ ಹೇಳಿ ನಗುಮೊಗದಿಂದ್ಲೇ ಮುಂದೆ ಬರುವಾಗ ಮೋಸ, ದಗಾ, ವಂಚನೆ, ಸ್ವಾರ್ಥಪರತೆಗಳೇ ತುಂಬಿರೋ ಜಗದಲ್ಲಿ ನಾ ಎಲ್ಲಿಗೆ ಬಂದು ಬಿಟ್ಟೆನಪ್ಪಾ ಅನ್ನೋ ಭಾವ.

ಹಾಗೇ ಮುಂದೆ ಬಂದ್ವಿ .ದಾರಿಯಲ್ಲಿ ಒಂದಿಷ್ಟು ಚಿಳ್ಳೆ ಪಿಳ್ಳೆ ಹುಡುಗ್ರು ಅಣ್ಣಾ ದುಡ್ಡು ಕೊಡಿ ಅಂತ ಬಂದ್ರು. ಅದಕ್ಕಿಂತ ಮುಂಚೆ ಎರಡು ರೂಗೆ ಒಂದು ಉದ್ದದ ಪೊಪ್ಪಾಳೆ ಹೋಳು,ಸೌತೆಕಾಯಿ ಮಾರೋರು ಸಿಕ್ಕಿದ್ರು. ಹಾಳು ಪಾಳಲ್ಲ ಮತ್ತೆ. ಸಖತ್ತಾಗಿದ್ದವೇ. ಎಂ.ಆರ್.ಪಿ ಹನ್ನೆರಡೂವರೆ ಇದ್ದ ಗ್ಲೂಕೋಸ್ ಪ್ಯಾಕೇಟ್ನ ಹತ್ತು ರೂಗೆ ಮಾರಿದ್ದ ಅದಕ್ಕಿಂತಾ ಮುಂಚೆ ಸಿಕ್ಕ ಅಂಗಡಿಯವನೊಬ್ಬ. ಎಂ.ಆರ್.ಪಿ ನೋಡಿ ಇದು ಎಕ್ಸಪೈರಾಗಿದ್ದೇನಾದ್ರೂ ಆಗಿರಬಹುದಾ ಅಂತ ಪರೀಕ್ಷಿಸಿ ಅದು ಆಗಿಲ್ಲದೇ ಇದ್ದಾಗ ಹತ್ತು ರೂನೇನಾ ಅಂತ ಎರಡೆರಡು ಸಲ ಕೇಳಿ ತಗೊಂಡ ನಮಗೆ ಆ ಸ್ವಾಭಿಮಾನಿ, ಮುಗ್ದ ಜನಗಳ ಮಧ್ಯೆ ಈ ಬೇಡೋ ಭಾಗ ಹುಟ್ಟಿದ್ದೇಗಪ್ಪಾ ?   ಯಾರಪ್ಪಾ ಈ ಹುಡುಗ್ರಿಗೆ ಬೇಡೋದ ಕಲಿಸಿದ್ದು ಅನಿಸಿಬಿಡ್ತು. ಹಾಗೇ ಮುಂದೆ ಬಂದು ನಾವು ಮುಂಚೆ ಇಳಿದಿದ್ದ ಜೀಪಿನ ಹತ್ತಿರ ಬರುವಾಗ ಅಲ್ಲೊಂದು ಶಾಲೆ ಕಂಡಿತು. ಅಲ್ಲೇ ಹತ್ತಿರದಲ್ಲಿ ಆದರ್ಶ ಒಂದು ಮನೆಯಲ್ಲಿ ತನ್ನ ಹೆಲ್ಮೆಟ್ ಇಟ್ಟಿದ್ದ. ಬೆಟ್ಟದ ಚಾರಣ ಶುರು ಮಾಡೋ ಮೊದ್ಲು. ಮನೆಯ ಹೊರಗಡೆಯ ಗೋಡೆಯ ಮೇಲೆ ಇಡಿ ಅಂದ ಅವರ ಮಾತಿನಂತೆ ಅಲ್ಲಿ ಇಟ್ಟಿದ್ದ ಹೆಲ್ಮೆಟ್ಟು ಅಲ್ಲೇ ಇತ್ತು. ಮೊದಲಿನಂತೆ ಹೆಲ್ಮೆಟ್ ಇಟ್ಕೊಂಡಿದ್ದಕ್ಕೆ ನಯಾಪೈಸೆ ಪಡೆಯದ ಆ ಮನೆಯವ್ರು ಒಂದು ಕೃತಜ್ನತಾ ಮಾತ್ರದಿಂದಲೇ ಖುಷಿಯ ಆಗಸಕ್ಕೇರಿದಂತೆ ಕಾಣ್ತು . ಶಾಲೆ ದಾಟಿ ಜೀಪ ಹತ್ತಿರ ಬಂದಾಗ ಅಲ್ಲೊಂದಿಷ್ಟು ಮಕ್ಕಳು ಆಡ್ತಾ ಇದ್ರು. ಜೀಪು ನಿಂತಿದ್ದ ಜಾಗಕ್ಕೆ ಹೊಂದಿಕೊಂಡಂತೆ ಒಂದಿಷ್ಟು ಅಂಗಡಿಗಳು. ಅವುಗಳ ಮಧ್ಯೆ ಒಂದು ಅಂಗಡಿಗೆ ಹೊಂದಿಕೊಂಡಂತಿದ್ದ ಮನೆಯ ಮುಂದಿದ್ದ ಚಾರ್ಪಾಯಿಯ ಮೇಲೆ ಕೂತ್ವಿ ನಾವು. ಅಲ್ಲೇ ಪಕ್ಕದ ಚಾರ್ಪಾಯಿಗಳ ಮೇಲೆ ಮಲಗಿದ್ದ ಬೆಟ್ಟವಿಳಿದು ದಣಿದು ಬಂದ ಜನಗಳ ನಡುವೆ.

ಆ ಮನೆಯಲ್ಲೊಂದಿಷ್ಟು ಹುಡುಗ್ರು. ಒಬ್ಬ ಅಂಬಾರುಗುಂಡೆ ಹಾಕಿ ಕೂತು ಬರೆಯುತ್ತಾ ಇದ್ದ. ಅವನ ಅಕ್ಕನೋ ತಂಗಿಯೋ ಇರಬೇಕು ಅನಿಸುತ್ತೆ. ಪಕ್ಕದಲ್ಲಿದ್ದ ಒರಳು ಕಲ್ಲಲ್ಲಿ ಹಿಟ್ಟು ರುಬ್ತಾ ಇದ್ಳು. ಅವಳ ಹಿಟ್ಟು ರುಬ್ಬಿ ಮುಗಿಯೋ ಹೊತ್ತಿಗೆ ನಾವಲ್ಲಿಗೆ ಹೋಗಿದ್ವಿ ಅಂತನಿಸುತ್ತೆ. ಕೊಂಚ ಹೊತ್ತಲ್ಲೇ ಅವಳ ಸ್ನೇಹಿತೆಯರು ಅಲ್ಲಿಗೆ ಬರೋಕೂ ಅವಳು ಕೈತೊಳೆದು ಏಳೂಕೂ ಸರಿ ಹೋಯ್ತು. ಅಷ್ಟರಲ್ಲಿ ಅಲ್ಲೇ ಕೂತಿದ್ದ ನಮ್ಮ ನೋಡಿ ಇನ್ನೊಂದಿಷ್ಟು ಹುಡುಗ್ರು ಬಂದ್ರು. ಅಣ್ಣಾ ಮಿಚ್ಚರ್ರು ಕೊಡ್ಸಿ, ಮಿಚ್ಚರ್ರು ಅಂದ ಒಬ್ಬ. ಸಂಜೆಯ ಹೊತ್ತು. ಯಾರಿಗಾದ್ರೂ ಹಸಿವಾಗೋ ಸಮಯವೇ. ಪಾಪ ಅಂಗಡಿಯ ಗಾಜಿನ ಬಾಟಲುಗಳಲ್ಲಿಟ್ಟಿರುವ ಖಾರ ನೋಡಿ ಇವನಿಗೆ ಆಸೆಯಾಗಿರ್ಬೇಕು. ಆದ್ರೆ ತಿನ್ನಲು ದುಡ್ಡಿಲ್ಲದ ಕಾರಣ ನಮ್ಮತ್ರ ಬೇಡ್ತಿರಬೇಕು ಅಂದ್ಕೊಂಡೆ.  ಅಷ್ಟರಲ್ಲಿ ಮನೆಯೊಳಗಿದ್ದ ಹುಡುಗ ಹೊರಬಂದು ಅಣ್ಣಾ, ಇವ್ರಿಗ್ಯಾರಿಗೂ ದುಡ್ಡು ಕೊಡ್ಬೇಡಿ. ನಿಮ್ಮತ್ರ ಕ್ಯಾಮರಾ ಇದ್ಯಲ್ಲ. ಅದ್ರಲ್ಲ ಫೋಟೋ ತೆಗ್ದು ಮಾಷ್ಟ್ರಿಗೆ ತೋರುಸ್ತೀನಿ ಅಂತ ಹೇಳಿ. ನಿಮ್ನ ಬಿಟ್ಟು ಹೋಗ್ತಾರೆ ಅಂದ. ಮತ್ತೊಬ್ಬ ಬೇಡೋಕೆ ಬಂದಾಗ , ಬಾರೋ ಇಲ್ಲಿ , ನಿನ್ನ ಫೋಟೋ ತೆಗಿತೀನಿ. ನಿಮ್ಮ ಮಾಸ್ಟ್ರಿಗೆ ತೋರುಸ್ತೀನಿ ತಡಿ ಅಂದದ್ದೇ ತಡ, ಅವನಷ್ಟೇ ಅಲ್ದೇ ಅವನ ಜೊತೆಯಿದ್ದ ಉಳಿದ ಹುಡುಗ್ರೂ ಅಲ್ಲಿಂದ ಓಟ ಕಿತ್ರು. ಅದಾಗಿ ಸ್ವಲ್ಪ ಹೊತ್ತಿಗೆ ಇನ್ನೊಂದಿಷ್ಟು ಹುಡುಗ್ರು ಅಲ್ಲಿಗೆ ಬಂದ್ರು ನಮ್ಮ ಕೈಲಿದ್ದ ಕ್ಯಾಮೆರಾ ನೋಡಿ. ಅಣ್ಣಾ ಅಣ್ಣಾ, ನಮ್ಮ ಫೋಟೋ ತೆಗಿತೀರಾ ಅಂತ. ಅವ್ರ ಉರುಳಿಸೋ ಚಕ್ರದ ಆಟಿಗೆಯೊಂದಿಗೆ ಒಂದು ಫೋಟೋ ಬೇಕಾಗಿತ್ತಷ್ಟೆ ಅವ್ರಿಗೆ. ಆದ್ರೆ ಫೋಟೋ ತೆಗ್ಯೋದೇನೋ ಸರಿ. ಆದ್ರೆ ಅದನ್ನ ಕೊಡೋದೇಗೆ ಅವ್ರಿಗೆ ಅಂತ ಯೋಚ್ನೆ ಮಾಡ್ತಿರುವಷ್ಟ್ರರಲ್ಲೇ ಅವನ ಆಟಿಕೆ ಉರುಳಿಸುಕೊಳ್ಳುತ್ತಾ ಬಂದ. ಇನ್ನು ಯೋಚ್ನೆ ಮಾಡೋ ಅಷ್ಟ್ರಲ್ಲಿ ಅವ ಆ ಫೋಟೋಕ್ಕೂ ದಕ್ಕದೇ ಹೋಗ್ಬೋದು ಅಂತ ಪಟಪಟನೆ ಕ್ಯಾಮೆರಾ ಸರಿ ಮಾಡಿ ಕ್ಲಿಕ್ಕಿಸುವಷ್ಟರಲ್ಲಿ ಅವ ಮುಂದೆ ಹೋಗಿ ಬಿಟ್ಟಿದ್ದ. ಏ, ಈ ಫೋಟೋ ಬ್ಲರ್ರಾಗಿದೆ ಇನ್ನೊಂದು ತೆಗಿತೀನಿ ಬರ್ರೋ ಅನ್ನೋಣ, ನಿಂತ್ಕೊಂಡು ಒಂದು ಚೆನ್ನಾಗಿರೋ ಫೋಟೋಕ್ಕೆ ಪೋಸ್ ಕೊಡೋ ಅಂತ ಹೇಳೋಣ ಅಂದ್ಕೊಂಡು ಅವ್ನ ಕರದ್ರೆ ಅವ ಹತ್ರ ಬರೋ ಬದ್ಲು ನಾಚಿ ದೂರ ಹೋಗ್ಬುಟ್ಟ. ನೀವು ಮಾಸ್ಟ್ರಿಗೆ ತೋರಿಸ್ತೀರಿ ಫೋಟೋನ ಅಂತ ಹೆದರಿರ್ಬೇಕು ಅಂದ್ರು ಪಕ್ಕದಲ್ಲಿದ್ದೋರು. ಮುಂದಿನ ಸಲ ಇಲ್ಲಿಗೆ ಬಂದ್ರೆ ಬೇಡೋರ ಮಕ್ಕಳಿಗೆಲ್ಲಾ ಫೋಟೋ ತೆಗ್ದು ಮಾಸ್ಟ್ರಿಗೆ ತೋರಿಸ್ತೀನಿ ಅಂತ ಹೆದರಿಸಬಹುದು ಅನ್ನೋ ಯೋಚ್ನೆಯಲ್ಲಿದ್ದಾಗ್ಲೇ ನಮ್ಮ ಜೀಪು ಹದಿನಾಲ್ಕು ಜನರ ಅಂತೂ ಇಂತೂ ತುಂಬಿಸ್ಕೊಂಡು ಹೊರಡೋಕೆ ಶುರು ಆಯ್ತು. ಅದೇ ಹಳ್ಳಿಯಲ್ಲಿ ಎಂಟನೇ ಕ್ಲಾಸಿನವರೆಗೆ ಓದಿ ನಂತರ ಎಂಟತ್ತು ಕಿ.ಮೀ ನಡೆದು ಹೈಸ್ಕೂಲಿಗೆ ಹೋಗಲಾರದೇ ವಿದ್ಯೆಗೆ ಎಳ್ಳುನೀರೆರಿದಿದ್ದ ನಮ್ಮ ಜೀಪ್ ಡ್ರೈವರ್ ಬೆಳ್ಳಿ ಆ ಕೊರಕಲುಗಳ ನಡೆಸಲಸಾಧ್ಯವೆನಿಸೋ ರೋಡಲ್ಲಿ ಜೀಪನ್ನು ಬ್ಯಾಲೆನ್ಸ್ ಮಾಡಿಕೊಂಡು ಆ ಜೀಪಿನ ಮೈಲೇಜಿನ ಬಗ್ಗೆ, ಹದಿನಾಲ್ಕು ಜನರ ಲೆಕ್ಕ ಜೀಪಿನ ಓನರಿಗೆ ಕೊಡಲೇಬೇಕಾದ ಬಗ್ಗೆ ಹೇಳುತ್ತಿದ್ದ. ಹದಿನಾಲ್ಕು ಜನರ ಹತ್ರ ತಲಾ ನೂರರ ಬಾಡಿಗೆ(ಹೋಗೋಕೈವತ್ತು, ಬರೋಕೈವತ್ತು) ಇಸ್ಕೊಳೋ ನಿಂಗೆಷ್ಟಪ್ಪ ಸಂಬಳ ಅಂದ್ರೆ ದಿನಕ್ಕೆ ಇನ್ನೂರು ಅಂದಾಗ ಒಮ್ಮೆ ಸುಳ್ಳೋ ನಿಜವೋ ಅನಿಸಿಬಿಟ್ತು. ಅವನ ಮಾತಲ್ಲೇ ಹೇಳೋದಾದ್ರೆ ಅಲ್ಲಿ ಅದಕ್ಕೆ ಒಪ್ಪಿಕೊಂಡು ಮಾಡಿದ್ರೆ ಅಷ್ಟಾದ್ರೂ ಉಂಟು, ಇಲ್ಲದಿದ್ರೆ ಅದೂ ಇಲ್ಲ. ದುಡ್ಡಿನ ಬೆಲೆ, ಮುಗ್ದತೆ ಅಂತೆಲ್ಲಾ ಯೋಚ್ನೆ ಮಾಡ್ತಿರುವಾಗ್ಲೇ ಘಂಟೆ ಆರಾಗಿ ಮಧ್ಯದಲ್ಲೊಂದು ಕಡೆ ಗೇಟು ಹಾಕಿ ಬಿಟ್ಟಿದ್ರು. ಆರರ ಒಳಗೆ ಬರ್ಬೇಕಾಗಿತ್ತು. ನೀವು ಅಲ್ಲಿಂದ ಹೊರಡಲಿಲ್ಲ ಅಂತ ಗಾಡಿಯಲ್ಲಿದ್ದೋರಿಗೆ ಬೆಳ್ಳಿ ಹೇಳ್ತಾ ಗೇಟು ತೆಗಿಸಬೇಕಾದ ಪರಿಯ ಬಗ್ಗೆ ಯೋಚ್ನೆ ಮಾಡ್ತಾ ಇದ್ದ. ನಾವು ಬಂದು ಕಾಯುತ್ತಾ ಅರ್ಧ ಘಂಟೆ ಆಗಿದ್ರೂ ಜೀಪವ ಹೊರಡದಿದ್ದದ ಬಗ್ಗೆ ಹೇಳಬೇಕನ್ನಿಸಿದ್ರೂ ಅಲ್ಲಿದ್ದ ಸೊಬಗ ಸೂರ್ಯಾಸ್ತವನ್ನು ಕಣ್ತುಂಬಿಕೊಳ್ಳುವುದರ ಬದ್ಲು ಜಗಳ ತೆಗೆದು ಸಮಯ, ಮೂಡು ಹಾಳ್ಮಾಡಿಕೊಳ್ಳೋದು ಇಷ್ಟವಿರಲಿಲ್ಲ. ಸೂರ್ಯಾಸ್ತ ನೋಡುತ್ತಿದ್ದಂತೆಯೇ ಬೀಗ ಹಾಕುವವನ ಮಗ ಬಂದು ಬೀಗ ತೆಗ್ದ. ಇಲ್ಲಿ ಸಮಯ ಮೀರಿ ಬಾಗಿಲು ತೆಗೆಸೋದಕ್ಕೆ ಮತ್ತೆ ತಲಾ ಎಷ್ಟು ಕೊಡಬೇಕೋ ಅಂತಂದುಕೊಂಡಿದ್ದ ನಮಗೆ ಬರಿಗೈಯಲ್ಲಿ ಅಲ್ಲಿಂದ ಮುಂದೆ ಹೋದಾಗ ಮತ್ತೆ ಅಚ್ಚರಿ. ಬಂಗಾರದ ಬೆಳಕಲ್ಲಿ, ಸುವರ್ಣ ಮುಖವಾಡದ ಅಲಂಕಾರದಲ್ಲಿ ಮಲೆಮಹದೇಶ್ವರನ ನೋಡೋ ಭಾಗ್ಯವೂ ಸಿಕ್ಕಿತ್ತು ನಮಗವತ್ತು ಲೇಟಾಗಿದ್ದರಿಂದ. ಅದೃಷ್ಟವೆಂಬಂತೆ ಅವತ್ತೇ ಆ ಸೇವೆಯಿತ್ತಂತೆ.  ದೇವರ ಕೈಮುಗಿದು ಈಚೆ ಬರುತ್ತಿದ್ದಂತೆ, ನಮ್ಮ ಅಂಗಡಿಯಲ್ಲಿ ಹಣ್ಣು ಹೂ ತಗೋಳ್ಳಿ, ಚಪ್ಪಲಿ ನಾವೇ ನೋಡ್ಕೋತೀವಿ ಅಂತ ಒತ್ತಾಯ ಮಾಡ್ತಿದ್ದ ಸುಮಾರು ಅಂಗಡಿಯವ್ರು ಸಿಕ್ಕಿದ್ರು. ಬೆಳಗ್ಗೆಯೇ ದರ್ಶನ ಆಗಿದ್ಯಮ್ಮ. ಧನ್ಯವಾದ ಅನ್ನುತ್ತಾ ಮುಂದೆ ಬಂದು ಹಳ್ಳಿಯ ಮುಗ್ದತೆಗೂ, ಎಲ್ಲೆಡೆಯಂತೆ ಇಲ್ಲಿ ಮತ್ತೆ ಶುರುವಾದ ವ್ಯಾಪಾರಿ ಭಾವವನ್ನೂ ನೆನೆಯುತ್ತಾ ಮರಳೋಕೆ ಬೈಕ್ ಹತ್ತಿದ್ವು. ಪ್ಲಾನಿದ್ದುದು ಮಲೆಮಹದೇಶ್ವರ, ನಾಗಮಲೈ ಮತ್ತೆ ಬಿಳಿಗಿರಿ ಅಂತ. ಕೊನೆಗೆ ಅದಾಗದಿದ್ದರೆ ಮಲೆಮಹದೇಶ್ವರದಿಂದ ಮರಳ್ತಾ ಸಿಗೋ ಒಂಭತ್ತು ಮರ, ಕೊಂಬು ಡಿಕ್ಕಿಯನ್ನಾದ್ರೂ ನೊಡ್ಬೇಕು ಅಂತ. ಆದ್ರೆ ಸಂಜೆಯಾಗಿದ್ರಿಂದ ಅದ್ಯಾವ್ದೂ ಸಾಧ್ಯವಾಗ್ದೆ ಕೊಳ್ಳೇಗಾಲದವರೆಗೆ ಬಂದು ಅಲ್ಲೇ ರೂಂ ಮಾಡಿದ್ವಿ.ವಿಪರೀತ ಸುಸ್ತಾಗಿದ್ದರಿಂದ ಅಲ್ಲೇ ಊಟ ಮಾಡಿ ಮಲಗಿದ ನಾವು ಮಾರನೇ ದಿನ ಬಿಳಿಗಿರಿ, ಹಿಮವದ್ ಗೋಪಾಲ ಸ್ವಾಮಿ ಬೆಟ್ಟವನ್ನೂ ನೋಡಿ ಮತ್ತೆ ಬೆಂಗಳೂರಿಗೆ ಮರಳೋ ಹೊತ್ತಿಗೆ ಮರುದಿನದ ರಾತ್ರೆ ಒಂದೂಕಾಲಾಗಿತ್ತೆಂಬುದು ಬೇರೆ ವಿಷ್ಯ ಬಿಡಿ. ಬಿಳಿಗಿರಿ, ಹಿಮವದ್ಗೋಪಾಲ ಸ್ವಾಮಿ ಬೆಟ್ಟದ ಹಾದಿಯಲ್ಲಿ ಕಂಡ ಜಿಂಕೆಗಳ ಕತೆ, ರೆಸಾರ್ಟುಗಳ ಕತೆ, ಆನೆ ಲದ್ದಿಯ ಕತೆ, ಕಾಡ ಹಾದಿಯಲ್ಲಿದ್ದ ಬೋರ್ವೆಲ್ಲುಗಳ ಕತೆ.. ಹಿಂಗೆ ಸುಮಾರಷ್ಟಿದೆ. ಬರೆಯುತ್ತೇನೆ ಮತ್ತೊಮ್ಮೆ.. ಭಾವ ಮೂಡಿದಾಗ. ತಡೆಯಲಾಗದಷ್ಟು ಕಾಡಿದಾಗ.. ಅಲ್ಲಿಯವರೆಗೊಂದಿಷ್ಟು ವಿಶ್ರಾಂತಿ.