Wednesday, April 8, 2015

ಸಾಲದ ತುತ್ತು

ತುಂಬಿ ನಿಂತಿಹ ಕಣ್ಣು, ಖಾಲಿ ಜೇಬಿನ ಪಯಣ
ಹಸಿದ ಹೊಟ್ಟೆಯ ಕೆಣಕಿ ನಿಂತ ನಿದ್ರೆ
ಕ್ಷೀಣವಾಯಿತು ದೇಹ , ಕಟ್ಟಿದಂತೆಯೆ ಉಸಿರು
ಸಾಲದಾ ಕಲ್ಪನೆಗೆ ಬೆಚ್ಚಿ ನಿಂತು

ದೊರೆಯುತಿತ್ತೇನೋ ಕೇಳಿದೊಡೆ ಆಹಾರ
ಆದರಲ್ಲಿದೆಯಲ್ಲ ಅಹಮ ಸಾವು
ದುಡಿವ ಬಿಲ್ಲೆಯು ಒಂದೆ ಆದರೂ ಅಭಿಮಾನ
ಬೇಡಿ ತಿನ್ನೆನು ಎಂಬ ಭಾವ ಮರಣ

ಜೊತೆಗಿದ್ದ ಸ್ನೇಹವೇ ಎದುರಿಟ್ಟ ಆಹಾರ
ನುಂಗೆನೆಂದಿತು ಬಾಯಿ ಜೇಬ ನೆನೆದು
ನೀರಿನಲೆ ಸಂತೈಸಿ ಕಣ್ಣೊರಿಸಿದಾ ಮನಸು
ಖಾಲಿ ಹೊಟ್ಟೆಯೆ ಪಾಠ ನಾಳೆಗೆಂತು

ಭಾರ ಜೇಬಿನ ಕನಸು ಬೇಡೆನಗೆ ನಾಳೆಯೇ
ಬೇಡುವಂತಹ ಸ್ಥಿತಿಗೆ ದೂಡಬೇಡ
ಎಣಿಸಿ ಮುಗಿಯದ ನೋಟು ಇಷ್ಟವಿಲ್ಲವೊ ಎನಗೆ
ಜೊತೆಗಿರುವ ನೋಟದಲೆ ಕೊಲ್ಲಬೇಡ

1 comment:

  1. ಜೊತೆಗಿರುವ ನೋಟವೆಂದರೆ ಬಾಳ ಸಂಗಾತಿ ಇದ್ದಿರಬಹುದೇನೋ?
    ಖಾಲಿ ಹೊಟ್ಟೆ ಮತ್ತು ಅಡುಗೆ ಮನೆ ನನ್ನದೂ ಪೂರ್ವ ಇತಿಹಾಸದ ಅಳಲು. ಯಾಕೋ ಕಣ್ಣೀರಾದೆ!

    ReplyDelete