Monday, June 6, 2016

ತಿಥಿ

ಒಂಚೂರು ವಿಭಿನ್ನ ಪ್ರಯತ್ನದ, ಪೂರ್ಣ ಹೊಸಬರ, ಯಾವುದೇ ವಿವಾದಗಳಿಲ್ಲದ ಕನ್ನಡ ಸಿನಿಮಾವೊಂದು ಥಿಯೇಟ್ರಲ್ಲಿ ಓಡ್ಬೇಕೂಂದ್ರೆ ಒಂದೋ ಅದಕ್ಕೆ ವಿಪರೀತ ಹೈಪ್ ಕೊಡ್ಬೇಕು ಇಲ್ಲಾ ಅದು ರಿಲೀಸ್ ಆಗೋ ಮೊದಲೇ ಅದು ರಾಷ್ಟ್ರೀಯ ಅಥವಾ ಅಂತರಾಷ್ಟ್ರೀಯ ಮಟ್ಟದ ಯಾವುದಾದ್ರೂ ಪ್ರಶಸ್ತಿ ಬರ್ಬೇಕು ಅನ್ನೋ ಪರಿಸ್ಥಿತಿ ಬಂದೋಗಿದೆ ! ಗಟ್ಟಿ ಕತೆ, ನಿರೂಪಣೆಯಿಲ್ಲದ ಕಾರಣ ಕನ್ನಡ ಚಿತ್ರಗಳ ಸಾಲು ಸಾಲು ಸೋಲಿಗೆ ಇಲ್ಲಿನ ನಿರ್ದೇಶಕರು ಎಷ್ಟು ಕಾರಣರೋ ಅಷ್ಟೇ ಕಾರಣರು ಇಲ್ಲಿನ ಚಿತ್ರಮಂದಿರ ಮತ್ತು ಮಲ್ಟಿಪ್ಲೆಕ್ಸುಗಳು. ತೆಲುಗು , ತಮಿಳು, ಹಿಂದಿ , ಇಂಗ್ಲೀಷ್ ಚಿತ್ರಗಳನ್ನೇ ಇಡೀ ದಿನ ತೋರಿಸುತ್ತಾ ಕನ್ನಡ ಸಿನಿಮಾಕ್ಕೆ ದಿನಕ್ಕೊಂದು ಶೋ ನೀಡುವುದೇ ದೊಡ್ಡ ಕನ್ನಡಸೇವೆ ಅಂತ ಅನೇಕರು ಭಾವಿಸಿದ್ದಂಗಿದೆ. ಇನ್ನು ಕೆಲವೊಂದು ಅಂತರ್ಜಾಲದ ತಾಣಗಳೂ ಕನ್ನಡ ಸಿನಿಮಾಗಳು ಥಿಯೇಟರ್ಗಳಿಂದ ಎತ್ತಂಗಡಿಯಾಗೋಕೆ ಭರಪೂರ ಕಾಣಿಕೆ ಕೊಡ್ತಿರೋದು ಗುಟ್ಟಾಗೇನುಳಿದಿಲ್ಲ. ಕನ್ನಡ ಸಿನಿಮಾಗಳಿಗೆ ಯಾವಾಗ ನೋಡಿದ್ರೂ ಎಲ್ಲಾ ಸೀಟುಗಳನ್ನು ಬುಕ್ಕಾಗಿ ತೋರಿಸೋ ಈ ತಾಣಗಳ ಮಧ್ಯ ಜನ ಇಲ್ಲ ಅಂತ ಆ ಚಿತ್ರವನ್ನು ಥಿಯೇಟ್ರಿಂದ ಎತ್ತಂಗಡಿ ಮಾಡೋ ಥಿಯೇಟ್ರಗಳ ನಡುವೆ ಏನೂ ಇಲ್ಲ ಅಂದ್ರೆ ನಂಬೋಕಾಗುತ್ತಾ ? ಇನ್ನು ನಾಲ್ಕೈದು ತೆರೆಗಳಿದ್ರೂ ಕನ್ನಡ ಚಿತ್ರಕ್ಕೆ ಒಂದೇ ತೆರೆಯ ಭಾಗ್ಯ. ಅದೂ ಮಟ ಮಟ ಮಧ್ಯಾಹ್ನದ ಒಂದೂವರೆ, ಎರಡೂವರೆಯಂತಹ ಹೆಚ್ಚಿನವರು ಯಾರೂ ಬಾರದ ಸಮಯ ನೀಡೋ ಮಲ್ಟಿಪ್ಲೆಕ್ಸುಗಳೂ ನಡುವೆ ಕನ್ನಡ ಚಿತ್ರಗಳ ತಿಥಿಯಾಗದೇ ಇನ್ನೇನು ? ! ಇಷ್ಟೆಲ್ಲಾ ಅವಾಂತರಗಳ ನಡುವೆಯೂ "ತಿಥಿ" ಚಿತ್ರ ಹೌಸ್ಫುಲ್ಲಾಗಿ ಓಡ್ತಾ ಇದೆ ಅಂದ್ರೆ ಅದ್ರಲ್ಲೇನಿದೆ ಅನ್ನೋ ಕುತೂಹಲ ನಿಮ್ಮಂತೆಯೇ ನನಗೂ ಕಾಡಿ ಥಿಯೇಟ್ರವರೆಗೂ ಹೋಗಿ ಹೌಸ್ಫುಲ್ ಬೋರ್ಡ್ ನೋಡಿ ಎರಡನೇ ಪ್ರಯತ್ನದಲ್ಲಿ ಅಂತೂ ಸಿನಿಮಾ ನೋಡಾಯ್ತು ಮತ್ತು ಪೇಪರಲ್ಲಿ ಬಂದಿದ್ದ ವಿಮರ್ಶೆಗಳನ್ನೋದಿ ಏನಂದ್ಕೊಂಡಿದ್ನೋ ಅವೆಲ್ಲಾ ನಿರೀಕ್ಷೆಗಳ ತಿಥಿಯಾಯ್ತು !

ಚಿತ್ರದ ಪ್ರಧಾನಪಾತ್ರ ಸೆಂಚುರಿಗೌಡ್ರು. ಅವರ ಅಭಿನಯದ ಬಗ್ಗೆ ಕನ್ನಡದ ಹಿರಿಯ ನಟರೆಲ್ಲಾ ಪ್ರಶಂಸಿದ್ದಾರೆ ಎಂದೊಂದು ಬರಹವನ್ನು ಓದಿದ್ದೆ, ಕನ್ನಡದ ಪತ್ರಿಕೆಯೊಂದರಲ್ಲಿ. ತಮ್ಮ ಮೊದಲ ಚಿತ್ರದ ಮೊದಲ ದೃಶ್ಯದಲ್ಲೇ ಗೌಡರು ಮನಸೆಳೆದರೂ ಅದರಲ್ಲಿ ಅವರು ಹಳ್ಳಿಯಲ್ಲಿದ್ದಂತೇ ತೆಗೆಯಲಾಗಿದೆಯೇ ಹೊರತು ಪತ್ರಿಕೆಯಲ್ಲಿ ಬಂದ ಮಟ್ಟದ್ದೇನಿಲ್ಲ. ಬದಲಿಗೆ ಕತೆಯೇ ಚಿತ್ರದ ನಾಯಕ ಅಂತ ಅನೇಕ ಬಾರಿ ಅನಿಸಿದ್ದುಂಟು.  ಚಿತ್ರದಲ್ಲಿ ಬರೋ ಟೈಗರ್ ಅಥವಾ ಗಡ್ಡಪ್ಪನೇ ಚಿತ್ರದ ಅಸಲೀ ನಾಯಕನಂತೆ ಭಾಸವಾಗುತ್ತಾನೆ. ತಮ್ಮಣ್ಣ , ಶಾನುಭೋಗ, ಕಮಲಕ್ಕ, ಅಭಿ ಮತ್ತು ಕುರಿಗಾಹಿಯ ಹುಡುಗಿ ಮುಂತಾದ ಪಾತ್ರಗಳನ್ನು ಕತೆಯೇ ಆಗಾಗ ಬದಲಾಯಿಸುತ್ತಾ ಒಮ್ಮೆ ಖಳನಾಗಿಯೂ ಒಮ್ಮೆ ಅನುಕಂಪದ ಪಾತ್ರರನ್ನಾಗಿಯೂ ಮಾಡುತ್ತೆ. ಇನ್ನು ಕುರಿ ಕಾಯುವವರ ಹಿಂದೆ ಹದಿನೈದು ದಿನಗಟ್ಟಲೇ ಅಲೆದು ಅವರಿಂದ ಸಂಭಾಷಣೆಗಳನ್ನು ರೆಕಾರ್ಡ್ ಮಾಡಿದ್ದೇವೆ ಎಂದು ಚಿತ್ರದ ನಿರ್ದೇಶಕರು ಹೇಳಿದ ಬಗ್ಗೆ ಪತ್ರಿಕೆಯೊಂದರಲ್ಲಿ ಬಂದಿತ್ತು. ಕುರಿಗಾಹಿಗಳ ಮಧ್ಯದ ಹಗಲು ರಾತ್ರಿಯ ದೃಶ್ಯಗಳು, ಮೂಗು ಚುಚ್ಚುವ ಸಂದರ್ಭದ ಹಾಡು ಬಂದಿದೆಯಾದ್ರೂ ಅಂಥಾ ಕ್ಲಾಸಿಕ್ ಅನ್ನುವಂತಹ ಛಾಯಾಗ್ರಹಣವಾಗಲೀ, ಸಂಭಾಷಣೆಯಾಗಲೀ ಇಲ್ಲ. ಹುಬ್ಬಳ್ಳಿ-ಧಾರವಾಡ ಶೈಲಿಯ ಮಾತುಕತೆ ಬಿಟ್ರೆ ಮತ್ತಿನ್ನೇನು ವಿಶೇಷ ಕಾಣೋಲ್ಲ. ಕೆಲವೊಂದು ಕಡೆಯಂತೂ ನಿರೂಪಣೆಯನ್ನು ಇನ್ನೂ ಬಿಗಿಗೊಳಿಸಬೇಕಾದ ಅಥವಾ ಚಿತ್ರವನ್ನು ಮತ್ತೊಮ್ಮೆ ಸಂಕಲಿಸಬೇಕಾದ ಅಗತ್ಯ ಕಾಣುತ್ತೆ. ಉದಾಹರಣೆಗೆ ಕುರಿಗಾಹಿಯ ಹುಡುಗಿ ಒಂದಿಷ್ಟು ಸಾಮಾನು ಕೊಳ್ಳೋಕೆ ಬಂದಿರ್ತಾಳೆ. ಆ ಸಮಯದಲ್ಲಿ ಆ ಅಂಗಡಿಯವ ಮಂಡ್ಯದ ಭಾಷೆ ಬಿಟ್ಟು ಪಕ್ಕಾ ಗ್ರಾಂಥಿಕ ಕನ್ನಡ ಮಾತನಾಡೋಕೆ ಶುರು ಮಾಡ್ತಾನೆ. ಕುರಿ ಕದಿಯೋಕೆ ಟ್ರ್ಯಾಕ್ಟರ್ ಅಲ್ಲಿ ಬಂದ್ರೂ ಅದ್ರ ಶಬ್ದ ಯಾರಿಗೂ ಗೊತ್ತಾಗದೇ ಇರೋದು, ಸೆಂಚುರಿಗೌಡ್ರಿಗೆ ಇರೋದು ಮರಿಮಗ ಅಷ್ಟೇ ಆದ್ರೂ ಹರಿಕಥೆ ದಾಸರು ಮರಿ ಮರಿಮಕ್ಕಳು ಎನ್ನೋದು , ಅಪ್ಪ-ಮಗ ಆ ರೇಂಜಿಗೆ ಕಿತ್ತಾಡ್ಕೊಂಡ್ರೂ ಜನ ಆರಾಮಾಗಿ ಬಂದು ತಿಥಿ ಊಟ ಮಾಡೋದು ಎಲ್ಲಾ ಕತೆಯಲ್ಲಿನ ದುರ್ಬಲ ಅಂಶಗಳು ಅಂದುಕೊಳ್ಳದೇ ಪರಿಸ್ಥಿತಿಯ ವೈಪರೀತ್ಯಗಳು ಅಂದ್ಕೊಳ್ಳೋದೇ ಕ್ಷೇಮ ! ಸೆಂಚುರಿಗೌಡ ಉರುಳಿ ಬೀಳೋ ದೃಶ್ಯದ ಸುಮಾರಿಗೆ ಬರೋ ಕೋಳಿ ಕೂಗೋ ದೃಶ್ಯ, ಆಡಿನ ದೃಶ್ಯ ಮುಂತಾದವನ್ನು ಪಕ್ಕಾ ಕ್ಲಾಸಿಕ್ ಅನ್ನುವಂತೆ ಚಿತ್ರೀಕರಿಸಿದ್ರೂ ಸೆಂಚುರಿ ಗೌಡ್ರ ಮಾತುಕತೆಯ ದೃಶ್ಯಗಳನ್ನು ಯಾವುದೋ ಮೊಬೈಲ್ ಕ್ಯಾಮರಾದಿಂದ ತೆಗೆದಂಗಿದೆ ! ಇನ್ನು ಚಿತ್ರದ ಕೊನೆಯನ್ನು ಪ್ರಶ್ನಾರ್ಥಕವಾಗಿ , ಭಾಗ ಎರಡು ಇದೆಯೇನೋ ಎಂಬ ಸಂದೇಹದೊಂದಿಗೆ ಮುಗಿಸೋದೇ ಒಂದು ಶೈಲಿಯಾದೂ ಚಿತ್ರದ ದ್ವಿತೀಯಾರ್ಧ ಮೂಡಿಸಿದ್ದ ಕುತೂಹಲ, ಇನ್ನು ಏನೋ ಆಗುತ್ತೆ ಎಂಬ ಕಾತುರಗಳನ್ನೆಲ್ಲ ಅಲ್ಲೇ ಬಿಟ್ಟು ಚಿತ್ರ ಅರ್ಜೆಂಜರ್ಟೆಂಟಲ್ಲಿ  ಕೊನೆಯಾಗುತ್ತೆ !

ಅಂದ ಮಾತ್ರಕ್ಕೆ ಚಿತ್ರಕ್ಕೆ ಹೋಗೋದು ದುಡ್ಡು ದಂಡ ಅಂತಲ್ಲ. ಹೋಗ್ಲೇಬೇಡಿ ಅಂತಲೂ ಅಲ್ಲ. ಮಂಡ್ಯದ ಸುತ್ತಮುತ್ತಲ ಹಳ್ಳಿಯ ಪರಿಸರವನ್ನು, ಅಲ್ಲಿಯ ಘಟನಾವಳಿಗಳನ್ನ ಕಣ್ಣುತುಂಬಿಸಿಕೊಳ್ಳೋಕೆ ಗ್ಯಾರಂಟಿ ನೋಡಬೇಕಾದ ಚಿತ್ರವಿದು. ಅಕ್ರಮ ಮರಳುಗಾರಿಕೆ, ಮರ ಕಡಿಯೋದು, ಇಸ್ಪೀಟು, ಎಣ್ಣೆ ಮುಂತಾದ ವಿಷಯಗಳಲ್ಲಿ ಸಮಾಜಕ್ಕೊಂದು ಬುದ್ದಿ ಹೇಳೋ ಪ್ರಯತ್ನವಾಗಿ ಕಾಣೋ ಚಿತ್ರ ಹಳ್ಳಿ ಹೈದನ ಕೈಯಲ್ಲಿನ ಚೋಟು ಮೊಬೈಲಲ್ಲಿ ವಯಸ್ಕ ಚಿತ್ರಗಳು, ಕಬ್ಬಿನ ತೋಟ, ಕೆಟ್ಟ ಮೋಟರು, ಧಾರಾವಾಹಿಗಳು, ಹುಲಿ-ಹಸು/ಕುರಿ ಆಟದ ಮಣೆ ಹಿಂಗೆ ತಲೆತಲೆಮಾರುಗಳ ನಡುವಿನ ವ್ಯತ್ಯಾಸವನ್ನು , ಬದಲಾಗುತ್ತಿರೋ ಕಾಲವನ್ನೂ ಸೆರೆಹಿಡಿಯೋ ಪ್ರಯತ್ನ ಮಾಡುತ್ತೆ. ಎಲ್ಲಕ್ಕಿಂತ ಹೆಚ್ಚಿಗೆ ಚಿತ್ರದ ಕತೆಯೇ ಹೇಳುವಂತೆ ಚಿತ್ರದ ತುಂಬೆಲ್ಲಾ ತಿಥಿಯ ಆಚರಣೆಗಳು ತುಂಬಿಕೊಂಡು ಪಕ್ಕಾ ಮಂಡ್ಯದ ಅನುಭವ ಕೊಡುತ್ತೆ. ಎರಡುವರೆ ಘಂಟೆಯಲ್ಲಿ ಮೆಜೆಸ್ಟಿಕ್ಕೂ ತಲುಪಲಾಗದ ಸಂದರ್ಭದಲ್ಲಿರೋ ನಮಗೆ ಅದೇ ಎರಡೂವರೆ ಘಂಟೆಯಲ್ಲಿ ಒಂದು ಹಳ್ಳಿಯ ಘಟನಾವಳಿಗಳ ಅನುಭವಗಳ ಕಟ್ಟಿ ಕೊಡೋ ಈ ಚಿತ್ರವನ್ನು ಒಮ್ಮೆ ನೊಡೋದ್ರಲ್ಲಿ ಯಾವ ತಪ್ಪೂ ಇಲ್ಲ. ಆದ್ರೆ ಪೇಪರಲ್ಲಿ ಇದ್ರ ಬಗ್ಗೆ ಏನೋ ಓದಿದ್ರಿ, ಯಾರೋ ಏನೋ ಹೇಳಿದ್ದನ್ನ ಕೇಳಿದ್ರಿ ಅಂತ ಚಿತ್ರದ ಬಗ್ಗೆ ವಿಪರೀತವಾದ ನಿರೀಕ್ಷೆಗಳನ್ನಿಟ್ಟುಕೊಂಡಿದ್ರೆ ಅಲ್ಲಲ್ಲಿ ನಿರಾಸೆಯಾಗಬಹುದು. ಪೂರ್ವಾಗ್ರಹವಿಲ್ಲದೇ ಚಿತ್ರ ನೋಡುವವನಿಗೆ ಒಂದೊಳ್ಳೇ ಚಿತ್ರ ನೋಡಿದ ಅನುಭವ ಗ್ಯಾರಂಟಿ :-)

No comments:

Post a Comment