Wednesday, September 7, 2016

ಸಹಸ್ರಲಿಂಗ, ಶಿವಗಂಗಾ ಫಾಲ್ಸ್, ಗಣೇಶ ಪಾಲ್, ಸೋಂದಾ ಮಠ ಟ್ರಿಪ್ಪು

ಸಹಸ್ರಲಿಂಗ:
Sahasra linga cross

Sahasralinga Board in Sirsi, Yellapura route
ಸಿರಸಿಯಿಂದ ಯಲ್ಲಾಪುರ ಮಾರ್ಗದಲ್ಲಿರೋ ಸಹಸ್ರಲಿಂಗವನ್ನು ನೋಡಿರದ ಅಥವಾ ಕೇಳಿರದೇ ಇರುವಂತಹ ಜನ ಉತ್ತರ ಕನ್ನಡದ ಸುತ್ತಲ ಮೂರ್ನಾಲ್ಕು ಜಿಲ್ಲೆಗಳಲ್ಲೇ ಇಲ್ಲವೆನ್ನುವಷ್ಟು ವಿರಳವೆನ್ನಬಹುದೇನೋ. ಆದರೆ ನಮ್ಮ ಗಿರೀಶ್ ಅದನ್ನ ನೋಡದೇ ಇದ್ದಿದ್ದರಿಂದ ನಮ್ಮ ಶಿರಸಿ ಪ್ರವಾಸ ಶುರುವಾದ್ದೇ ಅಲ್ಲಿಂದ. ಮಧ್ಯಾಹ್ನ ಮೂರು ಘಂಟೆ ಸುಮಾರಿಗೆ ಶಿರಸಿ ತಲುಪಿದ್ದ ನಾವು ಮೊದಲು ತೆರಳಿದ್ದೇ ಸಹಸ್ರಲಿಂಗದತ್ತ.


ರಾಮಚಂದ್ರಲಿಂಗವು ಎಂಬ ಬರಹವಿರುವ ಲಿಂಗ 
ಮೂರು ಇಪ್ಪತ್ತಕ್ಕೇ ಸಹಸ್ರಲಿಂಗ ಬೋರ್ಡನ್ನು ತಲುಪಿದ್ದ ನಾವು ಅಲ್ಲಿಂದ ಒಳಸಾಗಿ ಪಾರ್ಕಿಂಗಿನ ಹತ್ತು ರೂ ತೆತ್ತು ಶಾಲ್ಮಲಾ ನದೀತಟವನ್ನು ನೋಡಲು ತೆರಳಿದೆವು. ಅಲ್ಲಿನ ನದೀತಟದಲ್ಲಿ ಸಾವಿರ ಲಿಂಗಗಳಿವೆಯೆಂಬ ಪ್ರತೀತಿಯಿದ್ದರೂ ಅದರಲ್ಲಿ ಮೂರಂಕಿಯ ಲಿಂಗಗಳನ್ನು ನೋಡಲು ಬೇಸಗೆಯವರೆಗೂ ಕಾಯಬೇಕು. ಅಲ್ಲಿನ ಲಿಂಗವೊಂದರ ಮೇಲಿರುವ "ಸೋಂದೆಯ ರಾಮಚಂದ್ರಲ್ಲಿಂಗವು.." ಎಂಬ ವಾಕ್ಯದಂತೆ ಇಲ್ಲಿನ ಶಿವಲಿಂಗಗಳನ್ನು ಸೋಂದೆಯರಸರ ಕಾಲದಲ್ಲಿ ಕೆತ್ತಲಾಯಿತೆಂದು ನಂಬಬಹುದು. 

View of River Shalmala in sahasralinga



Lingas at sahasralinga
 ಅಲ್ಲಿನ ನದೀತಟದ ಜೊತೆಗೆ ಪಕ್ಕದಲ್ಲಿರುವ ಪಕ್ಷಿಧಾಮವನ್ನು ಮತ್ತು ತೂಗುಸೇತುವೆಯ ಮೇಲಿನ ನೋಟವನ್ನೂ ಸವಿಯಬಹುದು. ಅಲ್ಲಿಂದ ಹಾಗೇ ಮುಂದೆ ಹೋದರೆ ಸೋಂದಾ ಕ್ರಾಸ್ ಸಿಗುತ್ತದೆ. ಅಲ್ಲಿಂದ ಎಡಕ್ಕೆ ಹೋದರೆ ಸೋಂದಾ, ಬಲಕ್ಕೆ ಹೋದರೆ ಯಲ್ಲಾಪುರ ಸಿಗುತ್ತದೆ.
Hanging bridge of Sahasralinga
ಸಹಸ್ರಿಲಿಂಗದಿಂದ ಶಿವಗಂಗೆ ಅಥವಾ ಸೋಂದಾಕ್ಕೆ ಹೋಗೋದೇಗೆ ?
ದಾರಿ ೧: ಸಹಸ್ರಲಿಂಗದಿಂದ ಸೀದಾ ಮುಂದೆ ಹೋದರೆ ೪.೫ ಕಿ.ಮೀ ಸೋಂದಾ ಸ್ವರ್ಣವಲ್ಲೀ ಮಠ ಸಿಗುತ್ತದೆ.ವಾದಿರಾಜ ಮಠಕ್ಕೆ ಏಳೂವರೆ ಕಿ.ಮೀ ಆಗುತ್ತದೆ.

ದಾರಿ ೨: ಸಹಸ್ರಲಿಂಗದಿಂದ ಅದರ ಪಕ್ಕದಲ್ಲಿರೋ ತೂಗುಸೇತುವೆಯ ಮೇಲೆ ದಾಟಿ ಮುಂದೆ ೮ ಕಿ.ಮೀ ಸಾಗಿದರೆ ಸುರಬೈಲು ಎಂಬ ಊರು ಸಿಗುತ್ತದೆ. ಅದರಿಂದ ಮುಂದೆ ಬರುತ್ತಿದ್ದಂತೆಯೇ ಬಕ್ಕಳ ಕ್ರಾಸ್ ಸಿಗುತ್ತದೆ. ಅಲ್ಲಿಂದ ಬಕ್ಕಳ(೩ ಕಿ.ಮೀ) ವಾನಳ್ಳಿ(೧೧ ಕಿ.ಮೀ) ಮಾರ್ಗವಾಗಿ ಶಿವಗಂಗೆ ಜಲಪಾತಕ್ಕೆ ೨೨ ಕಿ.ಮೀ.  ಬಕ್ಕಳ ಕ್ರಾಸಿನಿಂದ ಸ್ವರ್ಣವಲ್ಲೀ ಸೋಂದಾ ಮಠಕ್ಕೆ ೯ ಕಿ.ಮೀ , ವಾದಿರಾಜ ಮಠಕ್ಕೆ ೬ ಕಿ.ಮೀ ಆಗುತ್ತದೆ.ಶಿವಗಂಗೆಗೆ ಶಿರಸಿಯಿಂದ ನೇರವಾಗಿ ಹೋಗುವುದಾದರೆ ೩೫ ಕಿ.ಮೀ ಆಗುತ್ತದೆ.
ಕನ್ಫ್ಯೂಸ್ ಆಯ್ತಾ ? ಆಗ್ಲಿ ಅಂತನೇ ಇದನ್ನ ಹಾಕಿದ್ದು :-) ಇಲ್ಲಿ ಒಂದು ಜಾಗಕ್ಕೆ ಹೋಗೋಕೆ ಒಂದಕ್ಕಿಂತ ಹೆಚ್ಚು ಮಾರ್ಗಗಳಿವೆ ಅನ್ನೋದನ್ನ ಹೇಳೋ ಉದ್ದೇಶದಿಂದ ಇದನ್ನ ಹಾಕಿದ್ದಷ್ಟೆ.

Directions to Shivaganga falls, Sonda from Bakkala/Surabail cross


ಶಿವಗಂಗಾ ಜಲಪಾತ:

ಶಿವಗಂಗಾ ಜಲಪಾತಕ್ಕೆ ಹೋಗೋರು ಸೊಣಗಿನಮನೆ ಅನ್ನೋ ಬೋರ್ಡನ್ನು ಹಿಡ್ಕೊಂಡು ಹೋದ್ರೆ ಆರಾಮಾಗಿ ಶಿವಗಂಗಾ ತಲುಪಬಹುದು. ಬಕ್ಕಳ ಕ್ರಾಸ್ ಆದ್ಮೇಲೆ ೧೧ ಕಿ.ಮೀಗೆ ವಾನಳ್ಳಿ, ೧೮ ಕಿ.ಮೀಗೆ ಸೊಣಗಿನಮನೆ ಸಿಗುತ್ತೆ. ಇದ್ದಿದ್ರಲ್ಲಿ ವಾನಳ್ಳಿ ಸ್ವಲ್ಪ ದೊಡ್ಡ ಊರು. ಮಧ್ಯೆ ಕಾಫಿ, ಚಾ, ಬಾಳೇಹಣ್ಣು ಬೇಕಾದ್ರೆ ಇಲ್ಲಿ ಸ್ಟಾಪ್ ಕೊಡ್ಬೋದು. ನಾಲ್ಕಕ್ಕೆ ಸಹಸ್ರಲಿಂಗದಿಂದ ಹೊರಟಿದ್ದ ನಾವು ಬಕ್ಕಳ ಕ್ರಾಸಿಗೆ ಬರ್ತಾ ೪:೨೦ ಆಗಿತ್ತು.
 ವಾನಳ್ಳಿ ದಾಟಿ ಮುಂದೆ ಬಂದ ನಾವು ಸೊಣಗಿನ ಮನೆ ದಾಟಿ ಜಡ್ಡಿಗದ್ದೆ ದಾಟೋ ಹೊತ್ತಿಗೆ "ರುದ್ರ ರಮಣೀಯ ಶಿವಗಂಗಾ ಫಾಲ್ಸಿಗೆ ಸ್ವಾಗತ" ಅನ್ನೋ ಬೋರ್ಡ್ ನೋಡಿದ್ವಿ.


ಇಲ್ಲಿಂದ ಎಡಕ್ಕೆ ಸಾಗಿದ ದಾರಿಯಲ್ಲಿ ಕಲ್ಮನೆಗೆ ಬರೋ ಹೊತ್ತಿಗೆ ೪:೫೫. ಅಲ್ಲಿಂದ ಶಿವಗಂಗಾ ಫಾಲ್ಸಿಗೆ ೨ ಕಿ.ಮೀ ಅಷ್ಟೆ.
ಇಲ್ಲಿಂದ ಎಡಕ್ಕೆ ಸಾಗಿದ ದಾರಿಯಲ್ಲಿ ಕಲ್ಮನೆಗೆ ಬರೋ ಹೊತ್ತಿಗೆ ೪:೫೫. ಅಲ್ಲಿಂದ ಶಿವಗಂಗಾ ಫಾಲ್ಸಿಗೆ ೨ ಕಿ.ಮೀ ಅಷ್ಟೆ. 
ಕಲ್ಮನೆಯಿಂದ ಗಣೇಶಪಾಲಿಗೂ ೩.೫ ಕಿ.ಮೀ ಅಷ್ಟೆ.

ಅಲ್ಲಿಂದ ಸ್ವಲ್ಪ ಮುಂದೆ ಬರ್ತಿದ್ದಂಗೆ ಶಿವಗಂಗಾ ಫಾಲ್ಸ್ ಎಂದು ಎಡಕ್ಕೆ ದಿಕ್ಕು ತೋರೋ ಒಂದು ಹೊಸ ಬೋರ್ಡು, ಅದರ ನೇಪಥ್ಯದಲ್ಲಿ ಒಂದು ಮಾಸೋದ ಬೋರ್ಡು ಕಾಣುತ್ತೆ.
Shivaganga falls board
ಅಲ್ಲಿಂದ ಚೆನ್ನಾಗಿರೋ ಟಾರ್ ರಸ್ತೆಯಲ್ಲಿ ಎರಡ್ಮೂರು ನಿಮಿಷ ಸಾಗುತ್ತಿದ್ದಂಗೆ ಒಂದು ತಂಗುದಾಣ ಸಿಗುತ್ತೆ. ಅಲ್ಲಿಂದ ಕೆಳಗಿಳಿಯೋ ಮೆಟ್ಟಿಲುಗಳೂ ಕಾಣುತ್ತೆ. ಅದ್ರಲ್ಲೇ ಕೆಳಗಿಳಿದ್ರೆ ಒಂದು ವೀಕ್ಷಣಾಗೋಪುರವಿದೆ. ಅಲ್ಲಿಂದ ಶಿವಗಂಗಾ ಜಲಪಾತದ ಮನೋಹರ ನೋಟವನ್ನು ಸವಿಯಬಹುದು. ಜಲಪಾತದ ಬುಡದವರೆಗೂ ಸಾಗೋ ಮನಸ್ಸಿದ್ದರೆ ಅಲ್ಲಿಂದ ಕೆಳಗಿರೋ ಮೆಟ್ಟಿಲುಗಳಲ್ಲಿ ಸಾಗಬಹುದು. ಸೆಪ್ಟೆಂಬರ್ ತಿಂಗಳಿನಲ್ಲಿ ಹೋಗಿದ್ದರೂ ನಮಗೆ ಜಲಪಾತದ ಹತ್ತತ್ತರದವರೆಗೂ ಹೋಗೋಕೆ ಸಾಧ್ಯವಾಗಿತ್ತು.

View of shivaganga falls from the first view point
Video of the Shivaganga falls
ಇಲ್ಲಿ ಕೆಳಗಿಳಿಯೋಕೆ ಮೆಟ್ಟಿಲುಗಳಿದ್ದರೂ ಮಧ್ಯ ಮಧ್ಯ ಮೆಟ್ಟಿಲುಗಳು ಇಲ್ಲಿನ ಮಳೆಗೆ ಕೊಚ್ಚಿ ಹೋಗಿವೆ. ಆದ್ರೂ ದಾರಿ ಹುಡುಕಿಕೊಂಡು ಕೆಳಗಿಳೀತಿದ್ವಿ. ಜಲಪಾತ ಸಿಗ್ಲೀ ಸಿಗದಿರ್ಲಿ, ಐದೂಐವತ್ತು, ಆರರ ಹೊತ್ತಿಗೆ ಮೇಲೆ ಹತ್ತೋಕೆ ಶುರು ಮಾಡ್ಬೇಕು ಅಂತ ನಾನು, ಗಿರಿ ಮಾತಾಡ್ಕೊಂಡಿದ್ವಿ. ಜಲಪಾತದ ಸದ್ದು ಕೇಳ್ತಿದೆ.ದೂರದಲ್ಲಿ ಮರಗಳ ಮರೆಯಲ್ಲಿ ಬಿಳಿಬಿಳಿಯಾಗಿ ಅದು ಕಾಣ್ತಲೂ ಇದೆ. ಆದ್ರೆ ಅಲ್ಲಿಗೆ ಹೋಗೋಕಾಗ್ತಿಲ್ಲ. ಸುತ್ತಿ ಬಳಸಿ ಸಾಗ್ತಿರೋ ಕಾಡ ಇಳಿಜಾರ ದಾರಿ ಅದು. ಮಧ್ಯ ಮಧ್ಯ ಎಲ್ಲಾದ್ರೂ ಉಂಬುಳ ಹತ್ಕಂಡಿದ್ಯಾ ಅಂತ ಹತ್ತಕ್ಕೆ ಪ್ರಯತ್ನ ಮಾಡ್ತಿದ್ದ ಉಂಬುಳಗಳನ್ನ ಅಲ್ಲೇ ಕಿತ್ತು ಮುಂದೆ ಸಾಗ್ತಿದ್ವಿ. ಕೊನೆಗೂ ಒಂದು ಹಳ್ಳ ಸಿಗ್ತು. ಆ ಹಳ್ಳಕ್ಕೆ ಧುಮುಕೋ ಮಿನಿ ಜಲಧಾರೆ ಕಾಣ್ತು. ಅದನ್ನ ದಾಟಿದ್ರೆ ಮುಂದೆ ಜಲಪಾತದ ಬುಡಕ್ಕೆ ಸಾಗಬಹುದಾದ ದಾರಿ ಕಾಣ್ತಿತ್ತು. ಆದ್ರೆ ಆ ಹಳ್ಳನ ಒಂದು ಬಂಡೆಯ ಮೇಲಿಂದ ದಾಟಬೇಕಿತ್ತು. ಸಾಮಾನ್ಯವಾಗಿ ಚಾರಣಕ್ಕೆ ಧೈರ್ಯ ಮಾಡೋ ಗಿರಿಗೆ ಇಲ್ಯಾಕೋ ಧೈರ್ಯ ಸಾಕಾಗ್ಲಿಲ್ಲ. ಇಲ್ಯಾಕೋ ಧೈರ್ಯ ಬರ್ತಿಲ್ಲ ಕಣೋ ನಂಗೆ ಅಂದ್ರು. ಅದನ್ನ ದಾಟಿ ಮುಂದೆ ಸಾಗಿದ್ರೆ ಜಲಪಾತದ ಬುಡಕ್ಕೇ ಸಾಗೋ ದಾರಿ ಕಾಣ್ತಿದೆ. ಆದ್ರೆ ಗಿರೀನ ಒಬ್ರನ್ನೇ ಬಿಟ್ಟು ಮುಂದೆ ಸಾಗೋಕೆ ನಂಗೂ ಮನಸ್ಸು ಬರ್ತಿರಲಿಲ್ಲ. ಸರಿ, ನಿಮಗೆ ಮನಸ್ಸಿಲ್ಲದಿದ್ರೆ ಮುಂದೆ ಸರ್ಕಸ್ ಮಾಡೋದು ಬೇಡ ಬಿಡಿ ಅಂತ ಅಲ್ಲೇ ಕೂತು ಜಲಪಾತದ ಸವಿಯ ಸವಿದು ಮೇಲತ್ತೋಕೆ ಶುರು ಮಾಡಿದ್ವಿ.
Getting down towards Shivaganga falls
View of falls besides the trees.


ಕಿತ್ತೆದ್ದು ಬಂದ ಬೆವರು, ಭಯ:
Getting down towards the shivaganga falls
ಮೇಲತ್ತಿ ಬರೋ ಹೊತ್ತಿಗೆ ಬೆವರು ಕಿತ್ತೆದ್ದು ಬರೋಕೆ ಶುರುವಾಗಿತ್ತು. ಕತ್ತಲಾಗುತ್ತಾ ಬಂದಿದ್ರಿಂದ ಸುತ್ತಲಿದ್ದ ಜಾಗದಲ್ಲಿದ ಆಮ್ಲಜನಕ ಕಡಿಮೆಯಾಗಿ ನಮ್ಮ ಉಸಿರಾಟದ ಗತಿ ತೀವ್ರವಾಗಿದ್ದಕ್ಕೋ, ಕತ್ತಲಾಗ್ತಾ ಬಂದಿದೆ ಅಂತ ಬೇಗ್ಬೇಗ ಮೇಲತ್ತೋಕೆ ಪ್ರಯತ್ನಿಸಿದ್ರಿಂದಲೋ , ಸುತ್ತಲಿನ ವಾತಾವರಣದಲ್ಲಿನ ತೇವದಿಂದ್ಲೋ ಗೊತ್ತಿಲ್ಲ. ಬಸಿದಷ್ಟೂ ಬೆವರ ಹನಿ ಹರಿಯುತ್ತಿತ್ತು ನಮ್ಮ ಹಣೆ, ಮುಖಗಳಿಂದ.  ಅಷ್ಟರಲ್ಲಿ ಗಿರಿ ತಡಿಯೋ ಒಂದು ನಿಮಿಷ ಅಂತ ಅಲ್ಲೇ ಇದ್ದ ಬಂಡೆಯ ಮೇಲೆ ಕೂತ್ರು.
 ಹೃದಯದ ಬಡಿತ ನಿಧಾನ ಆಗ್ತಾ ಇದೆ ಅನ್ನಿಸ್ತಾ ಇದೆ. ತಡಿ ಒಂದ್ನಿಮಿಷ ಅಂತ ಅವರು ಹೇಳ್ತಾ ಇದ್ರೆ ಏನಾಯ್ತಪ್ಪ ಇಲ್ಲಿ ಅಂತ ನಂಗೂ ಒಂದರೆಕ್ಷಣ ಭಯ. ತಕ್ಷಣಕ್ಕೆ ಬಾಟಲಿಯಲ್ಲಿದ್ದ ನೀರು ಕುಡಿಸಿ , ಬ್ಯಾಗಲ್ಲಿದ್ದ ಶರ್ಟಿಂದಲೇ ಗಾಳಿ ಹಾಕೋ ಪ್ರಯತ್ನ ಮಾಡಾಯ್ತು. ಬಹುಷಃ  ಅಲ್ಲಿನ ಕಡಿಮೆ ಆಮ್ಲಜನಕದ ವಾತಾವರಣಕ್ಕೆ ಅವರ ದೇಹ ಹೊಂದಿಕೊಳ್ಳೋದು ಸ್ವಲ್ಪ ತಡವಾಗಿ, ಅವರ ಹೃದಯಕ್ಕೆ ಸಾಕಷ್ಟು ಆಮ್ಲಜನಕ ಸಿಗದೇ ಹಾಗಾಗಿದ್ದಿರಬಹುದು. ಅದಕ್ಕೆ ಅವರ ದೇಹ ಹೊಂದಿಕೊಂಡಿದ್ದಕ್ಕೋ ಅಥವಾ ಗಾಳಿ, ನೀರು, ವಿಶ್ರಾಂತಿಯ ರಿಲೀಫಿಗೋ ಒಂದೆರಡು ನಿಮಿಷ ಗಾಳಿ ಹಾಕೋ ಹೊತ್ತಿಗೆ ಅವರು ತಾನಾಗಿ ಸರಿ ಹೋದ್ರು. ಹಿಮಾಲಯದಂತಹ ಸ್ಥಳಗಳಿಗೆ ಹೋದ್ರೆ ಅಲ್ಲಿನ ಕಡಿಮೆ ಆಮ್ಲಜನಕದ ವಾತಾವರಣಕ್ಕೆ ನಮ್ಮ ದೇಹ ಹೊಂದಿಕೊಳ್ಳೋಕೆ ಅಂತಲೇ ಮಾಡಿಸೋ ಅಕ್ಮಮಟೈಸೇಷನ್ ಅನ್ನೋ ವ್ಯಾಯಾಮಗಳ ಬಗ್ಗೆ, ಅವರ ಹಿಂದಿನ್ಯಾವ ಟ್ರೆಕ್ಕುಗಳಲ್ಲೂ ಆಗದ ಅನುಭವ ಇಲ್ಲೇ ಆದ ಬಗ್ಗೆ, ಶ್ವಾಸಕೋಶಗಳಿಗೆ ವ್ಯಾಯಾಮ ಕೊಡೋಕಂತ ದಿನಾ ಒಂದಿಷ್ಟು ನಡಿಗೆಯನ್ನೋ, ಓಟವನ್ನೋ ಇಟ್ಕೊಳ್ಳಬೇಕಾದ್ರ ಅನಿವಾರ್ಯತೆ ಬಗ್ಗೆ ಮಾತಾಡ್ತಾ ಮೇಲೆ ಬಂದ್ವಿ.
one more video of the shivaganga falls

ಗಣೇಶಪಾಲ್:
ಶಿವಗಂಗಾ ಜಲಪಾತದ ಬುಡದವರೆಗೂ ಸಾಗಿ ಮೇಲೆದ್ದು ಬರೋ ಹೊತ್ತಿಗೆ ಘಂಟೆ ಆರಾಗುತ್ತಾ ಬಂದಿತ್ತು. ಅಲ್ಲಿಂದ ವಾಪಾಸ್ ಬಂದ ನಾವು ಅಲ್ಲಿಂದ ೨ ಕಿ.ಮೀ ದೂರದಲ್ಲಿರೋ ಗಣೇಶಪಾಲಿಗೆ ಹೋಗೋ ಮನಸ್ಸು ಮಾಡಿದ್ವಿ. ಅಂದಾಗೆ ಶಿವಗಂಗಾ ಫಾಲ್ಸು ಮತ್ತು ಗಣೇಶಪಾಲು ಬರೋದು ಕೊಡ್ನಗದ್ದೆ ಗ್ರಾಮಪಂಚಾಯಿತಿ ವ್ಯಾಪ್ತೀಲಿ.
Road ends at Ganeshpal

View of Ganeshpal from distance
 ಏಳು ನಿಮಿಷಕ್ಕೆ ಬಂದು ತಲುಪಿದ ಒಳ್ಳೆಯ ರಸ್ತೆ ಗಣೇಶಪಾಲ್ ಬಸ್ಟಾಂಡಲ್ಲೇ ಕೊನೆಗೊಳ್ಳುತ್ತೆ. ಅಲ್ಲಿಂದ ಕೆಳಗೆ ಮಣ್ಣ ರಸ್ತೇಲಿ ಸಾಗಬೇಕು. ಸುತ್ತ ಹರಿಯೋ ನೀರ ಮಧ್ಯದಲ್ಲಿರೋ ದ್ವೀಪದಂತಿರೋ ರಚನೆಯೇ ಗಣೇಶಪಾಲು.

Ganeshpal

 ಹರಿಯೋ ನದಿಯ ಮಧ್ಯ ಜಾಗ ಮಾಡ್ಕೊಂಡು ಮಧ್ಯವಿರೋ ಕಟ್ಟೆಯಂತಹ ಜಾಗಕ್ಕೆ ಹೋಗಬೇಕು. ಭರಪೂರ ಮಳೆಯಿದ್ರೂ ಆಕಡೆ ದಾಟೋಕೆ ಆಗುವಂತಹ ದಾರಿಯಿದ್ಯಂತೆ ಇಲ್ಲಿ. ಆದ್ರೆ ಅದ್ರಲ್ಲಿ ದಾಟೋಕೆ ಅದ್ರ ಬಗ್ಗೆ ಗೊತ್ತಿರೋ ಸ್ಥಳೀಯರಿರ್ಬೇಕಿಲ್ಲಿ. ಇಲ್ಲದೇ ಸರ್ಕಸ್ ಮಾಡೋಕೋದ್ರೆ ಅಪಾಯ ಕಟ್ಟಿಟ್ಟ ಬುತ್ತಿ.ಇಲ್ಲಿ ನದಿ ದಾಟೋಕಾಗದಿದ್ರೂ ಇಲ್ಲಿನ ನೀರ, ಸೂರ್ಯಾಸ್ತಗಳ ಸೊಬಗ ಸವಿಯಬಹುದು.
View of the center of Ganesh pal
Sunset at Ganeshpal
Must be very carefull while crossing the ganesh pal river in rainy season

ಸುಸ್ತೆದ್ದ ಪಯಣಕ್ಕೊಂದು ವಿಶ್ರಾಂತಿಯ ಕನವರಿಕೆ:

ಮಧ್ಯಾಹ್ನ ಸಿದ್ದಾಪುರದಲ್ಲಿ ಬರೀ ಬನ್ನೊಂದು ತಿಂದು ಹೊರಟಿದ್ದ ನಾವು ಸಹಸ್ರಗಂಗೆ ನೋಡಿ,ಶಿವಗಂಗೆ ಹತ್ತಿಳಿದು, ಗಣೇಶ ಪಾಲ್ ನೋಡೋ ಹೊತ್ತಿಗೆ ತಿಂದಿದ್ದೆಲ್ಲಾ ಕರಗೋಗಿತ್ತು. ಬಾಟಲಿಯಲ್ಲಿದ್ದ ನೀರು, ಬೆಂಗಳೂರ ಬನಶಂಕರಿಯಲ್ಲಿ ತಗೊಂಡಿದ್ದ ನೆಲ್ಲಿಕಾಯಿಗಳನ್ನ ಬಿಟ್ರೆ ಬೇರೇನೂ ಇಲ್ಲ ಹೊಟ್ಟೆಗೆ. ಕತ್ತಲಾಗೋದ್ರೊಳಗೆ ಆದಷ್ಟು ಜಾಗಗಳನ್ನ ನೋಡ್ಲೇ ಬೇಕೂಂತಿದ್ದ ಧಾವಂತದಲ್ಲಿ ದಾರಿ ಖರ್ಚಿಗೆ ಏನಾದ್ರೂ ಇಟ್ಕೊಳ್ದೇ ಹೊರಟಿದ್ರ  ಪ್ರಭಾವ ಗೊತ್ತಾಗ್ತಿತ್ತು.  ಗಾಡಿ ಓಡಿಸ್ತಿದ್ದ ಗಿರೀಶಲ್ದೇ ಹಿಂದೆ ಕೂತಿದ್ದ ನಾನೂ ಸುಸ್ತೆದ್ದು ಹೋಗಿದ್ದೆ. ವಾನಳ್ಳಿಯಲ್ಲಿ ಒಂದು ಚಾನಾದ್ರೂ ಹಾಕ್ಕೊಂಡೇ ಮುಂದೋಗೋದು ಅಂದ್ರು ಗಿರಿ. ಸರಿ ಅಂತ ಅಲ್ಲಿ ನಿಲ್ಲಿಸಿದ್ರೆ ಮೊದ್ಲು ಕಂಡಿದ್ದೇ ಒಂದು ತರಕಾರಿ ಅಂಗಡಿ. ಅದ್ರಲ್ಲಿ ಬಾಳೇಹಣ್ಣಿದ್ದಿದ್ದ ಕಂಡ ನಾವು ಅಲ್ಲಿಗೇ ನುಗ್ಗಿ ಅಲ್ಲಿದ್ದ ಕರಿಬಾಳೇ ಹಣ್ಣುಗಳನ್ನ ಯಾವತ್ತೂ ಬಾಳೇ ಹಣ್ಣನ್ನೇ ಕಾಣದಿರುವವರಂಗೆ ತಿಂದ್ವಿ ! ಹೊಟ್ಟೆ ಸ್ವಲ್ಪ ದಡುವಾದ ಮೇಲೆ ಅಲ್ಲೆಲ್ಲಾದ್ರೂ ಟೀಯಂಗಡಿಯಿದ್ಯಾ ನೊಡಿದ್ವಿ. ಎಲ್ಲೂ ಕಾಣ್ತಿರಲಿಲ್ಲ. ಹಂಗೇ ಮುಂದೆ ಹೊರಟ್ವಿ. ಇಲ್ಲಿನ ಜನ ಎಷ್ಟು ಪಕ್ಕಾ ಅಡ್ರೆಸ್ ಹೇಳ್ತಾರೆ ಅನ್ನೋದ್ರ ಅನುಭವ ಇಲ್ಲಿ ಮತ್ತೊಮ್ಮೆ ಆಗಿತ್ತು. ನಿಂಗ ಇಲ್ಲಿಂದ ಸೀದಾ ಸುರಬೈಲ್ ಕ್ರಾಸಿಗೆ ಹೋಗಿ, ಅಲ್ಲಿಂದ ಎಡಕ್ಕೆ ಹೋದ್ರೆ ಸೋಂದಾ ಸಿಗ್ತು ಹೇಳಿದ್ದ ಅವ. ಅವ ಹೇಳಿದಂಗೇ ನಾವು ವಾನಳ್ಳಿಯ ನಂತರ ಸುರಬೈಲ್ ಕ್ರಾಸ್ ಅಥವಾ ಬಕ್ಕಳ ಕ್ರಾಸಿಗೆ ಬರೋ ಹೊತ್ತಿಗೆ ಏಳೂಮುಕ್ಕಾಲಾಗಿತ್ತು. ಹೊಟ್ಟೆಗೊಂಚೂರು ಬಿದ್ರೂ ಪ್ರಯಾಣದ ಸುಸ್ತು ಕಮ್ಮಿ ಆಗಿರಲಿಲ್ಲ. ಅದಕ್ಕೆ ಎರಡು ದಿನ ಮುಂಚೆ ಅಷ್ಟೆ ತಿಂದ ಆಹಾರ ಎಂತೋ ಅಜೀರ್ಣವಾಗಿ ವಾಂತಿ ಬರತ್ತೋ ಬರಲ್ವೋ ಅನ್ನೋ ಒದ್ದಾಟದಲ್ಲಿ, ಕಣ್ಣಿಗೆಲ್ಲಾ ಕತ್ತಲೆ ಬಂದಂತಾ ಭಾವದಲ್ಲಿ ಮಧ್ಯರಾತ್ರಿಯ ತನಕ ಒದ್ದಾಡಿದ್ದು ನೆನಪಾಗಿ ಇವತ್ತೂ ಬೈಕಲ್ಲಿ ಕೂತ ಕೂತಂಗೇ ಕಣ್ಣಿಗೆ ಕತ್ತಲೆ ಬರದಿರಲಿ ಅಂತ ಅಂದ್ಕೊತಂದ್ಕೋತಲೇ ಕೂತಿದ್ರೂ ಹಸಿದ ಹೊಟ್ಟೆಯ ಕಾರಣಕ್ಕೆ ಆಗಾಗ ಕಣ್ಣು ಎಳೆದಂತಾಗುತ್ತಿತ್ತು. ಆದ್ರೂ ಅದೂ ಇದೂ ಮಾತಾಡುತ್ತಾ ನಿದ್ರೆಯನ್ನ ದೂರ ತಳ್ಳುತ್ತಿದ್ರೂ ಸದ್ಯದಲ್ಲೀ ಯಾವುದಾದ್ರೂ ಒಂದು ಸುರಕ್ಷಿತ ಜಾಗ ಹುಡುಕಿ ಅವತ್ತಿನ ಪಯಣಕ್ಕೊಂದು ವಿರಾಮ ಹಾಕಲೇಬೇಕಿತ್ತು. ಅಂತಹ ಪರಿಸ್ತಿತೀಲಿ
ಅಲ್ಲಿಂದ ಮುಂಚೆ ಕಂಡ ಬೋರ್ಡಿನ ಬಳಿಯಲ್ಲಿ ಎಡಕ್ಕೆ ಹೊರಳಿ ಸೋಂದಾ ಮಠದತ್ತ ಸಾಗಿದೆವು.

ಸೊಂದಾ ಸ್ವರ್ಣವಲ್ಲೀ ಮಠ: 
Sonda Swarnavalli matha
ಅಲ್ಲಿಂದ ೯ ಕಿ.ಮೀ ದೂರವಿದ್ದ ಸ್ವರ್ಣವಲ್ಲೀ ಮಠ ತಲುಪೋ ಹೊತ್ತಿಗೆ ಎಂಟೂಇಪ್ಪತ್ತು.ಅಲ್ಲಿನ ಕಾಶೀ ವಿಶ್ವೇಶ್ವರ, ಚಂದ್ರಮೌಳೀಶ್ವರ, ಉಗ್ರನರಸಿಂಹ ದೇವರ ದರ್ಶನವಾಗೋ ಹೊತ್ತಿಗೆ ಅಲ್ಲಿದ್ದವರೊಬ್ಬರು ಬಂದು ನೀವು ಇವತ್ತಿನ ರಾತ್ರಿ ಊಟಕ್ಕೆ ಏನು ಮಾಡ್ತಿದ್ದೀರಿ, ಇಲ್ಲೇ ಇಳಿಯೋ ಯೋಚನೆಯಲ್ಲಿದ್ದೀರಾ ಅಂತ ಕೇಳಿದ್ರು. ಅವ್ರು ಹವ್ಯಕರೆಂದು ನೋಡಿದ್ರೇ ಗೊತ್ತಾಗ್ತಿದ್ದಿದ್ರಿಂದ ನಾ ಹವ್ಯಕದಲ್ಲೇ ಮಾತಿಗಿಳಿದೆ. ನಂಗ ದರ್ಶನಕ್ಕೆ ಹೇಳಿ ಬಯಂದ್ಯ. ಊಟ, ವಸತಿ ಬಗ್ಗೆ ಎಂತೂ ಯೋಚ್ನೆ ಮಾಡ್ಲೆ ಅಂದಿ. ಸರಿ, ಇಲ್ಲಿ ಒಂಭತ್ತೂವರೆಗೆ ಪೂಜೆ ಶುರು ಆಗ್ತು. ಅದಾದ ಮೇಲೆ ಹತ್ತಕ್ಕೆ ರಾತ್ರಿ ಊಟ ಆಗ್ತು. ಊಟ ಮಾಡ್ಕಂಡು ಇಲ್ಲೇ ಉಳ್ಕಂಡು ಬೆಳಗ್ಗೆ ಹೋಗಿ ಅಂದ. ಇಲ್ಲಿಂದ ವಾಪಾಸ್ ಶಿರಸಿಗೆ ಹೋದ್ರೂ ಅಷ್ಟೊತ್ತಿಗೆ ಒಂಭತ್ತೂವರೆ ಆಗ್ಬೋದು. ಅಥವಾ ಜಾಸ್ತೀನೆ ಆಗ್ಬೋದು. ಜೊತೆಗೆ ಅಷ್ಟರ ಮೇಲೆ ಅಲ್ಲಿ ಊಟ ಸಿಕ್ಕಿ, ರೂಮು ಸಿಕ್ಕಿ ನಾವು ವಿಶ್ರಾಂತಿ ಮಾಡೋದು ಹೌದಾ ? ಇಲ್ಲೇ ಇದ್ದು ಬಿಡೋದು ಬೆಟರ್ ಅಂತಿದ್ರು ಗಿರಿ. ನಂಗೂ ಆಗಾಗ ಗಿರ್ ಅಂತಿದ್ದ ತಲೆಯಿಂದ ಇಲ್ಲಿರೋದೇ ಬೆಟರ್ ಅನ್ನಿಸಿಬಿಡ್ತು. ಅಲ್ಲೇ ಮೇಲೊಂದು ಹಾಲಿದೆ. ಅಲ್ಲಿ ಸದ್ಯಕ್ಕೆ ಯಾರೂ ಇಲ್ಲ. ಅಲ್ಲೇ ನೀವು ಇರ್ಬೋದು ಅಂತ ಹಾಲಿನ ಜಾಗ ತೋರಿಸಿದ್ರು ಆ ಪುಣ್ಯಾತ್ಮರು. ಹಾಗೇ ಅಲ್ಲೇ ಪಕ್ಕದಲ್ಲಿದ್ದ ಸ್ನಾನ, ಶೌಚ ಗೃಹಗಳನ್ನೂ. ಅಲ್ಲೇ ಮೇಲೆ ಹೋಗಿ ಅಲ್ಲಿದ್ದ ಜಮಖಾನವನ್ನೇ ಹಾಸಿ ಅದಕ್ಕೆ ತಲೆ ಕೊಟ್ರೆ .. ಆಹಾ ಸ್ವರ್ಗ ಸುಖ ! ಹಂಗೇ ಒಂದು ಹತ್ತು ನಿಮಿಷ ಕಣ್ಣು ಮುಚ್ಚಿದ ಮೇಲೆ ಸಿಡಿಯುತ್ತಿದ್ದ ತಲೆ ನಿಧಾನಕ್ಕೆ ಸ್ಥಿಮಿತಕ್ಕೆ ಬಂದಿತ್ತು. ಒಂದಿಷ್ಟು ನೀರು ಒಳಸೇರಿದ ಮೇಲೆ ಇನ್ನೊಂದಿಷ್ಟು ಜೀವ ಪಡೆದ ಜೀವದೊಂದಿಗೆ ಕೆಳಗಿನ ಮಂಗಳಾರತಿ ನೋಡೋಕೆ ಹೊರಟೆವು. ಇಲ್ಲಿನ ರಾಜರಾಜೇಶ್ವರಿ ವೇದ-ಸಂಸ್ಕೃತ ಅಧ್ಯಯನಕೇಂದ್ರದ ಹುಡುಗರ ಕಂಠದಿಂದ ಪುರುಷಸೂಕ್ತ, ಮಂತ್ರಪುಷ್ಪಗಳ ನಡುವೆ ಸ್ವರ್ಣವಲ್ಲೀ ಶ್ರೀಗಳು ದೇವರಿಗೆ ಆರತಿ ಬೆಳಗೋದನ್ನ ನೋಡೋದೇ ಒಂದು ಅದ್ಭುತ ಅನುಭವ. ಆ ಘಂಟೆ, ಶಂಖಗಳ ನಿನಾದದಲ್ಲಿ ಉಳಿದಿದ್ದ ತಲೆನೋವೂ ಮಾಯವಾಯ್ತು. ಅದಾದ ನಂತರ ತಂಬುಳಿ, ಚಟ್ನಿ, ಸಾಂಬಾರು, ಮಜ್ಜಿಗೆಗಳ ಸೊಗಸಾದ ಪ್ರಸಾದ ಭೋಜನ ಅಲ್ಲಿನ ಭೋಜನಶಾಲೆಯಲ್ಲಿ. ಊಟದ ಮಧ್ಯ ಮತ್ತು ನಂತರವೂ ಬಂದು ಇನ್ನೂ ಏನಾದ್ರೂ ಬೇಕಾ ಅಂತ ಅಲ್ಲಿನ ವಟುಗಳು ಕೇಳ್ಕೊಂಡು ಹೋಗ್ತಾ ಇದ್ರೆ ನಂಗಂತೂ ನಮ್ಮನೆಯಲ್ಲೇ ಊಟ ಮಾಡಿದ ಭಾವ. ಯಾರ್ಯಾರಿಗೆ ಯಾವ್ಯಾವತ್ತಿನ ಊಟದ ಋಣ ಎಲ್ಲೆಲ್ಲಿ ಬರೆದಿರುತ್ತೋ ಯಾರಿಗೆ ಗೊತ್ತು ಅನ್ನೋಕೆ ಇದೇ ಸಾಕ್ಷಿ ಅನಿಸಿಬಿಡ್ತು. ಸ್ವರ್ಣವಲ್ಲೀ ಮಠಕ್ಕೆ ಹೋಗ್ಬೇಕೂಂತ ಕೆಲವು ಸಲ ಅಂದ್ಕೊಂಡಿದ್ರೂ ಆಗಿರಲಿಲ್ಲ. ಆದ್ರೆ ಇವತ್ತು ಅನಿರೀಕ್ಷಿತವಾಗಿ ಅಲ್ಲಿಗೆ ಭೇಟಿ ಕೊಡೋದಲ್ದೇ ಅಲ್ಲಿನ ರಾತ್ರಿಯ ಮಂಗಳಾರತಿ, ಪ್ರಸಾದ ಭೋಜನವನ್ನೂ ಸವಿಯೋ ಅದೃಷ್ಟ ಒದಗಿಬಂದಿತ್ತು. ಅಲ್ಲಿನ ಐನೂರರಿಂದ ಸಾವಿರ ಜನ ಹಿಡಿಸಬಹುದಾದಂತಹ ಬೃಹತ್ ಸಭಾಂಗಣದಲ್ಲಿ ನಾವಿಬ್ಬರೇ ರಾಜರೆಂಬಂತೆ ಇದ್ದೊಂದು ಜಮಖಾನವನ್ನೇ ಹಾಸಿಗೆಯಾಗಿಸಿ, ಅದನ್ನೇ ಹೊದಿಕೆಯಾಗಿಸಿ ಮಲಗಿಬಿಟ್ಟೆವು. ಸುಸ್ತಾದ ನಮ್ಮ ದೇಹಗಳಂತೇ ಖಾಲಿಯಾದ ನಮ್ಮ ಮೊಬೈಲು, ಕ್ಯಾಮೆರಾಗಳೂ ನಾಳೆಗಾಗಿ ರೀಚಾರ್ಚ್ ಆಗ್ತಿದ್ದವು.

ಸೋಂದಾದ ಲಾಸ್ಟ್ ಬಸ್:
ಅಂದ ಹಾಗೆ ಸೋಂದಾ ಸ್ವರ್ಣವಲ್ಲೀ ಮಠಕ್ಕೆ ಸಿರಸಿಯಿಂದ ನೇರ ಬಸ್ಸುಗಳಿವೆ. ಇಲ್ಲಿಗೆ ಲಾಸ್ಟ್ ಬಸ್ಸು ಬರೋದು ರಾತ್ರಿ ಒಂಭತ್ತಕ್ಕೆ. ನಂತರ ಇಲ್ಲೇ ಹಾಲ್ಟಾಗೋ ಬಸ್ಸು ಬೆಳಗ್ಗೆ ಆರೂಮುಕ್ಕಾಲಿಗೆ ಇಲ್ಲಿಂದ ತೆರಳುತ್ತೆ.  ಇಲ್ಲಿ ವೃಕ್ಷಲಕ್ಷ ಆಂದೋಲನದ ಸಸ್ಯವನ ಕೂಡ ಇದೆ.
Last bus to Sonda

Places to see in and around Sonda

ಮುಂದಿನ ಭಾಗದಲ್ಲಿ: ಸೋಂದಾ ಕೋಟೆ:





No comments:

Post a Comment