Thursday, September 15, 2016

ಯಾಣ ಚಾರಣ

Welcome to Yaana
ಶಿರಸಿಯಿಂದ ಸುಮಾರು ನಲ್ವತ್ತು ಕಿ.ಮೀ ದೂರವಿರುವ ಯಾಣಕ್ಕೆ ಹೋಗಲು ಉತ್ತಮವಾದ ರಸ್ತೆಯ ಸೌಲಭ್ಯವಿದೆ. ಹೊನ್ನಾವರ ಅರಣ್ಯ ವಿಭಾಗ, ಕುಮಟಾ ಉಪ ವಿಭಾಗ, ಕತಗಾಲ ವಲಯದ ವ್ಯಾಪ್ತಿಗೆ ಬರೋ ಯಾಣಕ್ಕೆ ಹೋಗೋದು ಅಂದ್ರೆ ಅದೊಂದು ಸಾಹಸ ಅನ್ನುವಂತಿತ್ತು ಒಂದು ಕಾಲದಲ್ಲಿ. ಆರು ಕಿ.ಮೀ ನಡೀಬೇಕು. ಉಂಬಳಗಳಿರುತ್ತೆ ಅನ್ನುವೆಲ್ಲಾ ಮಾತುಗಳನ್ನೆಲ್ಲಾ ಕೇಳಿದ್ದ ನಮಗೆ ಇತ್ತೀಚೆಗೆ ಮೂರು ಕಿ.ಮೀ ವರೆಗೂ ರಸ್ತೆ ಮಾಡಿದ್ದಾರೆ ಅಲ್ಲಿಂದ ಮುಂದೆ ಮೂರು ಕಿ.ಮೀ ನಡೀಬೇಕು ಅಂದ್ರು. ಆದ್ರೆ ನಾವು ಹೋದಾಗ ನೋಡಿದ್ರೆ ಅದ್ರ ಬುಡದವರೆಗೂ ವಾಹನಗಳು ಹೋಗುತ್ತೆ !
Final 3 km of road to Yaana















ಅರಣ್ಯ ಇಲಾಖೆಯವರು ಮಾಡಿರುವ ಸ್ವಾಗತದ್ವಾರದ ಬುಡದವರೆಗೂ ಕಾರು, ಜೀಪು, ಬೈಕುಗಳು ಹೋಗೋದ್ರಿಂದ ಯಾಣ ಚಾರಣವೆನ್ನೋದು ನಿಜವಾದ ಚಾರಣವಾಗುಳಿದಿಲ್ಲ. ಕೊನೆಯ ಅರ್ಧ ಕಿ.ಮೀ ನಡೆಯುವಷ್ಟರಲ್ಲಿ ಕಾಣೋ ಚಂಡಿಕಾ ಶಿಖರ ಮತ್ತು ಅದನ್ನು ದಾಟಿ ಮುಂದೆ ಹೋದರೆ ಸಿಗುವ ಭೈರವೇಶ್ವರ ಶಿಖರಗಳನ್ನಲ್ಲದೇ ಅಲ್ಲಿನ ಈಶ್ವರ ದೇವಸ್ಥಾನ, ಭೈರವೇಶ್ವರ ಶಿಖರದ ಸುತ್ತಲೂ ಪ್ರದಕ್ಷಿಣೆ ಹಾಕಲು,ಎಡಕಲ್ಲು ಗುಡ್ಡದ ಮಾದರಿಯಲ್ಲಿ ಮಾಡಿರೋ ಕಬ್ಬಿಣದ ಸರಳು, ಮೆಟ್ಟಿಲುಗಳ ಪ್ರದಕ್ಷಿಣಾ ಪಥ, ಮಳೆಗಾಲದಲ್ಲಿ ಅಲ್ಲಲ್ಲಿ ಧುಮ್ಮಿಕ್ಕೋ ಜಲಧಾರೆಗಳು ಇಲ್ಲಿನ ಪ್ರಧಾನ ಆಕರ್ಷಣೆ. ನವರಾತ್ರಿಯ ಸಮಯದಲ್ಲಿ ನಡೆಯುವ ಚಂಡಿಕಾ ಶಿಖರದ ಪೂಜೆಯನ್ನೂ ಆ ಸಮಯದಲ್ಲಿ ಆನಂದಿಸಬಹುದು.


Chandka shikaRa ಚಂಡಿಕಾ ಶಿಖರ
ಯಾಣದಲ್ಲೇನಿದೆ ?
ಯಾಣವೆಂದರೆ ವಿಚಿತ್ರವಾದ ಬಂಡೆಗಳ ಸಾಲೆಂಬುದು ಅಲ್ಲಿನ ಚಿತ್ರಗಳ ಕಂಡವರೆಲ್ಲರ ಕಲ್ಪನೆ. ಅದು ತಕ್ಕಮಟ್ಟಿಗೆ ಸರಿಯೂ ಹೌದು. ಇಲ್ಲಿನ ಗಣಪತಿ ಅರಣ್ಯ ಸಮಿತಿಯ ಪ್ರವೇಶದ್ವಾರದಲ್ಲಿ ಪ್ರವೇಶ ಶುಲ್ಕ(ದ್ವಿಚಕ್ರ=೫, ಮೂರು/ನಾಲ್ಕು ಚಕ್ರ=೧೦, ಬಸ್ಸು=೧೫) ಕೊಟ್ಟು ಒಳನಡೆದರೆ ಯಾಣದ ಯಾತ್ರೆ ಶುರುವಾಗುತ್ತದೆ. ಇಲ್ಲಿ ಪ್ರಕೃತಿ ನಿರ್ಮಿತ ೬೧ ಕಲ್ಲಿನ ಶಿಖರಗಳಿವೆ. ಅದರಲ್ಲಿ ಎಲ್ಲವಕ್ಕೂ ಜನರಿಂದ ಪೂಜೆಯಿದ್ದರೂ ಸಣ್ಣವಿರುವ ೫೯ ಶಿಖರಗಳು ಕಾಲಕ್ರಮೇಣ ತಮ್ಮ ಪೂಜೆಯನ್ನು ಕಳೆದುಕೊಂಡು ಈಗ ಕಾಡಿನ ಮಧ್ಯ ಮರೆಯಾಗಿವೆ ಎನ್ನಲಾಗುತ್ತಿದೆ. ಇಲ್ಲಿಗೆ ಬಂದವರೆಲ್ಲರ ಕಣ್ಣಿಗೆ ಮೊದಲು ಬೀಳೋದೆಂದರೆ ಚಂಡಿಕಾ ಶಿಖರ. ಬೇಸಿಗೆಯ ಸಮಯದಲ್ಲಿ ಅದರ ಸುತ್ತಲೂ ಬರಬಹುದಾದರೂ ಮಳೆ ಹೆಚ್ಚಿದ್ದ ಸಮಯದಲ್ಲಿ ಅದು ಕಷ್ಟದ ಕೆಲಸ. ಅದನ್ನು ದಾಟಿ ಮುಂದೆ ಬಂದಾಗ ಸಿಗೋದೇ ಭೈರವೇಶ್ವರ ಶಿಖರ.
bhairaveshWara shikhara
ಭೈರವೇಶ್ವರ ದೇವಸ್ಥಾನ:
bhairaveshwara temple at Yaana












ಈ ಶಿಖರದ ಬುಡದಲ್ಲೇ ಭೈರವೇಶ್ವರ ದೇವಸ್ಥಾನವಿದೆ. ೨೦೦೫ರಲ್ಲಿ ಶ್ರೀ ರಾಘವೇಶ್ವರ ಶ್ರೀಗಳಿಂದ ಜೀರ್ಣೋದ್ದಾರಗೊಂಡ ಇಲ್ಲಿನ ದೇವಸ್ಥಾನ ಬೆಳಗ್ಗಿನ ೮ ರಿಂದ ಸಂಜೆ ೬ರವರೆಗೆ ತೆಗೆದಿರುತ್ತದೆ. ಇಲ್ಲಿನ ಧ್ವಜಸ್ಥಂಭದ ಬಳಿ ನಿಂತು ತಲೆಯೆತ್ತಿ ನೋಡಿದರೆ ಕಾಣೋ ಭೈರವೇಶ್ವರ ಶಿಖರದ ದೃಶ್ಯವೇ ಅದ್ಭುತ. ಸುತ್ತಲಿನ ಹಸಿರು ಪರಿಸರದಲ್ಲಿ ಆಕಾಶದೆತ್ತರಕ್ಕೆ ತಲೆಯೆತ್ತಿರೋ ಕಪ್ಪು ಹಾವಿನ ಹೆಡೆಯಡಿ ನಾವು ನಿಂತಂತೊಮ್ಮೆ ಅನಿಸಿದರೆ ಆಶ್ಚರ್ಯವಿಲ್ಲ. ಇಲ್ಲಿನ ಗುಡಿಯಲ್ಲಿ ಉದ್ಭವಲಿಂಗವೆಂದು ನಂಬಲಾಗುವ ಗುಹೆಯಲ್ಲಿರುವ ಚುಕ್ಕೆಯಂತಹ ರಚನೆಯನ್ನು, ಅದರ ಸುತ್ತಮುತ್ತ ಕೆತ್ತಿದ್ದನ್ನು ಭೈರವೇಶ್ವರನೆನ್ನುಲಾಗುತ್ತದೆ. ಇದರ ಪಕ್ಕದಲ್ಲೇ ಗಣಪತಿ ವಿಗ್ರಹವನ್ನಿಡಲಾಗಿದೆ. ಇಲ್ಲಿನ ಗುಹೆಯಲ್ಲಿರುವ ಭೈರವೇಶ್ವರನಿಗೆ ಮತ್ತು ಗಣಪನಿಗೆ ನೀರಿನ ಅಭಿಷೇಕ ಮಾಡುವ ಮೂಲಕ ಇಲ್ಲಿ ಪೂಜಿಸಲಾಗುತ್ತದೆ. ನವರಾತ್ರಿಯ ಸಮಯದಲ್ಲಿ ಭಕ್ತಾದಿಗಳೇ ನೇರವಾಗಿ ಆ ಮೂರ್ತಿಗಳಿಗೆ ಅಭಿಷೇಕ ಮಾಡಬಹುದಂತೆ. ಆ ದೇವಸ್ಥಾನದ ಇತಿಹಾಸದ ಬಗ್ಗೆ ಅಲ್ಲಿನ ಅರ್ಚಕರು ಹೇಳುವ ಮಾತುಗಳನ್ನು ಇಲ್ಲಿ ಕೇಳಬಹುದು


ಭೈರವೇಶ್ವರ ಶಿಖರ: 
ದೇವರ ದರ್ಶನಕ್ಕೆ ಹೋದಾಗ ಅಲ್ಲಿನ ಭಟ್ಟರು ಎಲ್ಲೋ ಹೋಗಿದ್ದರಿಂದ ಭೈರವೇಶ್ವರ ಶಿಖರವನ್ನು ಸುತ್ತಿ ಬರಲು ಹೊರಟೆವು. ಅಲ್ಲಿನ ಪರಿಪರಿಯ ಕಲ್ಲುಗಳ ನಡುವೆ ಆದ ಕೊರಕಲಲ್ಲಿ ನಡೆಯುವುದೇ ಒಂದು ಮಜ. ಎಲ್ಲೆಲ್ಲಿಂದಲೋ ತೂರಿಬರುವ ಬೆಳಕ ಕಿರಣಗಳು, ಕಲ್ಲನ್ನು ವಿಚಿತ್ರವಾಗಿ ಕೊರೆದಿರುವ ಮಳೆ,ಬಿಸಿಲುಗಳು, ಅಲ್ಲಲ್ಲಿ ಸೃಷ್ಠಿಯಾಗೋ ಪ್ರತಿಧ್ವನಿ ಇವೆಲ್ಲವುಗಳ ನಡುವಿನ ಸುಮಾರು ಕಾಲು ಘಂಟೆಯ ನಡುಗೆಯೊಂದು ಖುಷಿ ಕೊಡುತ್ತೆ.

Views at Yaana
ತಲೆಬಾಚಿದಂತಿರೋ ಕಲ್ಲುಗಳು, ಮಧ್ಯ ಮಧ್ಯ ಬರೋ ಮಳೆಯಿಂದ ಕಲ್ಲುಗಳಾಚೆ ಕಂಡಂತಾಗೋ ಕಾಮನಬಿಲ್ಲುಗಳು, ಹಸಿರ ಸಿರಿಯ ನಡುವಿನ ನಾನಾ ಆಕಾರಗಳು ಗಮನಿಸಿದವರಿಗಷ್ಟೇ ಸಿಗೋ ಬೋನಸ್ಸುಗಳು.
Other view of Bhairaveshwara shikhara during pradakshina

View of bhairaveshwara temple and shikhara from distance
Rain in yaana as seen from inside the caves
ಭೈರವೇಶ್ವರ ಶಿಖರ ಹತ್ತಿ, ಚಂಡಿಕಾ ಶಿಖರದ ಬುಡದವರೆಗೂ ಹೋಗಿ ಬಂದ ನಾವು ಅಲ್ಲಿಂದ ವಾಪಾಸ್ ಬಂದು ಅಲ್ಲಿಂದ ೧೧ ಕಿ.ಮೀ ದೂರದಲ್ಲಿರುವ ವಿಭೂತಿ ಫಾಲ್ಸಿನತ್ತ ಹೊರಟೆವು.


ಯಾಣದ ಸುತ್ತಮುತ್ತಲಿನ ಸ್ಥಳಗಳು: ಶಿರಸಿಯಿಂದ ಯಾಣಕ್ಕೆ ೪೦ ಕಿ.ಮೀ. ಅದೇ ಕುಮಟಾದಿಂದ ೨೨ಕಿ.ಮೀ. ಶಿರಸಿಯಿಂದ ಯಾಣಕ್ಕೆ ಹೋಗೋ ದಾರಿಯಲ್ಲಿ ಶಿರಸಿಯಿಂದ ೧೭ಗೆ ಪಂಚಲಿಂಗ ಕ್ಷೇತ್ರ ಅಂತ ಸಿಗುತ್ತದೆ. ಯಾಣದಿಂದ ೧೧ ಕಿ.ಮೀಗೆ ವಿಭೂತಿ ಫಾಲ್ಸ್ ಇದೆ. ಇಲ್ಲಿಗೆ ಬಂದವರು ೧೧ನೇ ಶತಮಾನದಲ್ಲಿ ತಿರುಮಲಾರ್ಯರಿಂದ ನಿರ್ಮಿತವಾದ ಮಂಜುಗುಣಿ ದೇಗುಲವನ್ನೂ ಸಂದರ್ಶಿಸಬಹುದು


ಮುಂದಿನ ಭಾಗದಲ್ಲಿ: ವಿಭೂತಿ ಫಾಲ್ಸು ಮತ್ತು ಮಂಜುಗುಣಿ

5 comments:

  1. ತಲೆಬಾಚಿದಂತಿರೋ ಕಲ್ಲುಗಳು, ಮಧ್ಯ ಮಧ್ಯ ಬರೋ ಮಳೆಯಿಂದ ಕಲ್ಲುಗಳಾಚೆ ಕಂಡಂತಾಗೋ ಕಾಮನಬಿಲ್ಲುಗಳು, ಹಸಿರ ಸಿರಿಯ ನಡುವಿನ ನಾನಾ ಆಕಾರಗಳು ಗಮನಿಸಿದವರಿಗಷ್ಟೇ ಸಿಗೋ ಬೋನಸ್ಸುಗಳು.


    ​ಈ ಸಾಲು ಸಾಕು ನಿಮ್ಮ ವಿಶಿಷ್ಟ ಶೈಲಿಯ ಬರವಣಿಗೆಗೆ ಸಾಕ್ಷಿಯಾಗಿ ನಿಲ್ಲಲು.

    ಆಗಂತುಕ ಕನ್ನಡ ಚಿತ್ರದಿಂದ ನನಗೆ ಯಾಣ ಪರಿಚಿತ.. ನಂತರ ನಮ್ಮೂರ ಮಂದಾರ ಹೂವೆ ಚಿತ್ರದಿಂದ ಇನ್ನಷ್ಟು ಪ್ರಚಲಿತವಾಯಿತು

    ಯಾಣ ನಾ ಮೂರು ಬಾರಿ ನೋಡಿದರೂ ಪ್ರತಿ ಬಾರಿಯೂ ಅದ್ಭುತವಾಗಿ ಕಾಣುತ್ತದೆ .. ಸೊಕ್ಕಿದ್ದರೆ ಯಾಣ ರೊಕ್ಕ ಇದ್ದರೆ ಗೋಕರ್ಣ ಎನ್ನುವ ಗಾದೆಯಂತೆ .. ನಾ ಮೊದಲ ಬಾರಿಗೆ ಹೋದಾಗ ನಾಲ್ಕು ಕಿಮಿ ನೆಡೆದಿದ್ದೆ ನಂತರ ಎರಡು ಆಯಿತು.. ಮೂರನೇ ಬಾರಿಗೆ ಅರ್ಧ ಕಿಮಿ ಆಗಿದೆ..

    ಯಾಣದ ಬಗ್ಗೆ ಮಾಹಿತಿ ಅದರ ಕಿರು ಐತಿಹ್ಯ, ಸೇರಲು ಬೇಕಾದ ಹಾದಿ ಸ್ವರೂಪ ಎಲ್ಲವನ್ನು ಸೊಗಸಾಗಿ ಮೂಡಿಸಿದ್ದೀರಾ

    ಉತ್ತಮ ಮಾಲಿಕೆ ನಿಮ್ಮ ಬರಹಕ್ಕೆ ಮತ್ತು ಗಿರಿ ಪ್ರಶಸ್ತಿ ಜೋಡಿಗೆ ಅಭಿನಂದನೆಗಳು

    ReplyDelete