Tuesday, May 9, 2017

ಭೋದಿಯಲ್ಲಿನ ಜ್ಞಾನೋದಯ ಮತ್ತು ಟಾಪ್ ಸ್ಟೇಷನ್

ಬೇಸಿಗೆಯ ಬೆಂಗಳೂರಿಂದ ಬಿರುಬೇಸಿಗೆಯ ಪಳನಿಗೆ ಕಾಲಿಟ್ಟು, ಕೊಡೈಯಲ್ಲೊಂದಿಷ್ಟು ಕೂಲಾಗಿ ಮತ್ತೆ ಬೋದೀನಾಯಕ್ಕನೂರಲ್ಲಿ ಸೆಖೆಗೊಡ್ಡಿಕೊಂಡಲ್ಲಿವರೆಗಿನ ಕತೆಯನ್ನು ಇಲ್ಲಿಯವರೆಗಿನ ಭಾಗಗಳಲ್ಲಿ ಓದಿದ್ದೆವು. ತಮಿಳುನಾಡಲ್ಲಿ ಹೇಗಿರಬೇಕು, ಹೇಗಿರಬಾರದು ಎಂಬುದರ ಬಗ್ಗೆ ನಮಗಾಗಬೇಕಾದ ಜ್ಞಾನೋದಯಗಳಿಗೆ ಕೊರತೆಯಿರಲಿಲ್ಲ. ಕಲಿಯಬೇಕಾದ ಪಾಠಗಳು ಬೋಧಿಯಲ್ಲೂ ಮುಂದುವರೆದಿದ್ದವು. ಮೊದಲನೆಯದಾಗಿ  ಬೋಧಿಯಲ್ಲಿನ ಎಸ್.ಪಿ.ಎ ಲಾಡ್ಜೆಂಬುದು ಅಸಲಿಗೆ ಲಾಡ್ಜಾಗಿರಲಿಲ್ಲ. ೧೯೭೭ರಲ್ಲಿ ಏಲಕ್ಕಿ ಬೋರ್ಡಿನವರು ಉದ್ಘಾಟಿಸಿದ ಕಟ್ಟಡವಾಗಿತ್ತದು. ಎಲ್ಲಿಯ ಸೆಖೆನಾಡು ಎಲ್ಲಿಯ ಏಲಕ್ಕಿ ಅಂದಿರಾ ? ತೇಜಸ್ವಿಯವರ ಚಿದಂಬರ ರಹಸ್ಯದಲ್ಲಿ ಬರುವಂತೆ ಒಂದೊಮ್ಮೆ ಏಲಕ್ಕಿಯ ಬೀಡಾಗಿದ್ದ ಬೋಧಿನಾಯಕ್ಕನೂರು ಕಾಲಕ್ರಮೇಣ ಆಧುನಿಕತೆಗೆ ಸಿಕ್ಕಿ ,ಮರಗಳೆಲ್ಲವನ್ನೂ ಕಳೆದುಕೊಂಡು ಬೋಳಾಯಿತಾ ಅಥವಾ ಸುತ್ತಲೆಲ್ಲೋ ಇರುವ ಹಳ್ಳಿಗಳ ಬದಲು ಪಟ್ಟಣವೆಂದು ಇಲ್ಲಿ ಏಲಕ್ಕಿ ಬೋರ್ಡ್ ಮಾಡಿದರಾ ಅಥವಾ ಚಿಕ್ಕಮಗಳೂರಿನ ಏಲಕ್ಕಿಗೆ ಬಯಲುಸೀಮೆಯಲ್ಲೆಲ್ಲೋ ಜಾಗ ಸಿಕ್ಕಿತೆಂದು ಬೋರ್ಡಿನ ಜಾಗ ಕಟ್ಟುವಂತೆ ಇಲ್ಲಿ ಕಟ್ಟಿದರಾ ? ಗೊತ್ತಿಲ್ಲ. ಒಟ್ಟಿನಲಿ ಒಂದಾನೊಂದು ಕಾಲದಲ್ಲಿ ಏನೋ ಆಗಿದ್ದು ಈಗೊಂದು ಲಾಡ್ಜಾಗಿತ್ತಷ್ಟೆ.

ಇನ್ನಿಲ್ಲಿಯ ಊಟವೋ ? ಇಡ್ಲಿ ದೋಸೆಗಳಲ್ಲಿ ಯಾರು ಹಿತವರು ನಿನಗೆ ಎಂದು ಹುಡುಕಬೇಕಾದ ಪರಿಸ್ಥಿತಿ. ಗೋಬಿ ಮಂಚೂರಿ ಅಂತ ಮೆನುವಿನಲ್ಲಿದ್ದರೂ ಆರ್ಡರ್ ಮಾಡಿದ ನಮಗೆ ಸಿಕ್ಕಿದ್ದು ಒಣ ಗೋಬಿಯನ್ನು ಈರುಳ್ಳಿ ಪಕೋಡದಂತೆ ಹುರಿದುಕೊಟ್ಟ ಮಂಚೂರಿ ! ಅದಕ್ಕೆ ಗೋಬಿ ಮಂಚೂರಿಯೆನ್ನದೇ ಗೋಬಿ ಪಕೋಡ ಅಂದಿದ್ದರೂ ಚೆನ್ನಿತ್ತೇನೋ. ಅದರ ಕತೆಗೆ ಆಮೇಲೆ ಬರೋಣಂತೆ.  ಚೆನ್ನಾಗಿ ಸಿಕ್ಕಿದ್ದೆಂದರೆ ರಸ್ತೆ ಬದಿಯಲ್ಲಿ ಮಾರುತ್ತಿದ್ದ ಹಲ್ವಾಗಳಷ್ಟೆ. ಮುಂಚೆಯೆಲ್ಲಾ ಶಬರಿಮಲೈಗೆ ಹೋದವರು ಮರೆಯದೇ ತರುತ್ತಿದ್ದ ಕೆಂಪು, ಹಳದಿ ಹಲ್ವಾಗಳ ನೆನಪು ತಂದ ಗೋಡಂಬಿ, ಪಿಸ್ತಾ , ಡ್ರೈ ಫ್ರೂಟ್ ಹಲ್ವಾಗಳ ಸವಿಯುತ್ತಾ ಬೋಧಿಯಲ್ಲಿನ ಬೀದಿಗಳ ತಿರುಗುತ್ತಿದ್ದೆವು. ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಅಂಗಡಿಗಳ ಬಿಟ್ಟರೆ ಫೋಟೋ ತೆಗೆದು ನೆನಪಿಡಬೇಕಾದಂತಹ ಚಿತ್ರಣವೇನಿಲ್ಲವಿಲ್ಲಿ. ಹೋಗಿ ಬರಬೇಕಾದಂತಹ ಎರಡು ದೇಗುಲಗಳಿವೆ. ಒಂದು ಶಹರದ ಮಧ್ಯದಲ್ಲಿಯೇ ಇರುವ ಕಾಳಿಯಮ್ಮನ್ ದೇಗುಲ ಮತ್ತು ಸುಬ್ರಹ್ಮಣ್ಯ ದೇಗುಲ. ಮುರುಗನ್ ದೇಗುಲ ಎಂದೂ ಕರೆಯಲ್ಪಡುವ ಎರಡನೆಯ ದೇಗುಲ ರಾತ್ರೆ ಒಂಭತ್ತರವರೆಗೂ ತೆಗೆದಿದ್ದು ಅದನ್ನು ದೇಗುಲವೆಂದು ಕರೆಯೋ ಬದಲು ದೇಗುಲಗಳ ಸಂಕೀರ್ಣವೆಂದು ಕರೆಯಬಹುದು. ನಾವು ಹೋಗಿ ಬರುವಷ್ಟರಲ್ಲಿ ಬಾಗಿಲು ಹಾಕಿದ ಇನ್ನೊಂದು ದೇಗುಲದ ಪಕ್ಕದಲ್ಲೇ ಇರುವ ಈ ದೇಗುಲದಲ್ಲಿ ಸುಬ್ರಹ್ಮಣ್ಯ ಅಲ್ಲದೇ ಪಾರ್ವತಿ, ಗಣೇಶ, ನವಗ್ರಹಗಳು, ನಾಯನಾರ್ಗಳು(ತಮಿಳಿನ ೬೩ ಶೈವ ಯತಿಗಳು) ಮುಂತಾದ ಮೂರ್ತಿಗಳಿರೋ ಈ ದೇಗುಲದಲ್ಲಿ ಎಂಟು ಎಂಟೂವರೆಯ ಮೇಲೆ ರಷ್ಯು ಕಮ್ಮಿಯಿರೋದ್ರಿಂದ ಬರ್ಮುಡ ಹಾಕಿಕೊಂಡು ಹೋದರೂ ಒಳಪ್ರವೇಶಿಸದಂತೆ ಯಾರೂ ನಮ್ಮನ್ನು ತಡೆಯಲಿಲ್ಲ.

ನೀರು ದೋಸೆ ಹೋಗಿ ಘೀ ರೋಸ್ಟಾಗಿದ್ದು
ದೇಗುಲ ಬಾಗಿಲು ಹಾಕುವಷ್ಟರಲ್ಲಿ ಹೊರಬಂದ ನಮ್ಮ ಹೊಟ್ಟೆ ತಾಳಹಾಕುತ್ತಿತ್ತು. ಇಲ್ಲಿದ್ದ ವೆಜ್ ಹೋಟೆಲ್ಗಳೆಂದರೆ ಬಾಲಾಜಿ ಭವನ ಮತ್ತು ರಾಜ್ ಭವನಗಳಷ್ಟೆ. ಬಾಲಾಜಿ ಭವನದ ಬಗ್ಗೆ ನಮ್ಮ ಲಾಡ್ಜಿನವರು ಹೈಪ್ ಕೊಟ್ಟಿದ್ರಿಂದ ಅತ್ತ ತಿರುಗಿದ್ವಿ. ಅಲ್ಲಿಯೋ ಅನ್ನದ ಯಾವ ಐಟಂಗಳೂ ಇಲ್ಲ. ಅವ ದೋಸೆಯ ವೆರೈಟಿಗಳ ಬಗ್ಗೆ ಹೇಳಿದ್ದು ಸಂದೇಶಿಗೆ ನೀರು ದೋಸೆ ಅನ್ನುವಂತೆ ಕೇಳಿಸಿ ನೀರು ದೋಸೆ ಕೊಡಿ ಅಂದ. ತಮಿಳುನಾಡಲ್ಲಿ  ನೀರು ದೋಸೆಯಾ ? ಸರಿ ಅಂತ ಎಲ್ಲರೂ ಅದನ್ನೇ ಹೇಳಿದೆವು. ಸ್ವಲ್ಪ ಹೊತ್ತಾದ ಮೇಲೆ ಬಂದದ್ದು ನೋಡಿದರೆ ಮಾರುದ್ದದ ದೋಸೆ. ಏನಪ್ಪಾ ಇದು ಅಂದ್ರೆ ಘೀ ರೋಸ್ಟ್ ಅಂದ ಅವ ! ಮೇಜಿನ ಮೇಲಿಟ್ಟರೆ ನಮ್ಮ ಪ್ಲೇಟು ದಾಟಿ ಪಕ್ಕದ ಪ್ಲೇಟನ್ನೂ ಅರ್ಧ ಆಕ್ರಮಿಸೋ ಆ ದೋಸೆಯನ್ನ ಹೆಂಗಪ್ಪಾ ತಿನ್ನೋದು ಅನ್ನುವಷ್ಟರಲ್ಲಿ ಅವನೇ ಅರ್ಧವಾಗಿ ಮಡಚಿ ಕೊಟ್ಟ. ದೋಸೆಯ ಹೊಗಳುತ್ತಾ ತಿಂದರೂ ಹೊಟ್ಟೆ ತುಂಬಲಿಲ್ಲ. ಆಮೇಲಿನ ಗೋಬಿ ಮಂಚೂರಿ, ಅಲ್ಲಲ್ಲ ಗೋಬಿ ಪಕೋಡದಿಂದಲೂ ಹೊಟ್ಟೆ ತುಂಬಲಿಲ್ಲ. ಇನ್ನೇನಾದ್ರೂ ತಗೋಳ್ಳೋಣ ಅಂದ್ರೆ ಉಳಿದವರೆಲ್ಲಾ ಹೊಟ್ಟೆ ತುಂಬಿದೆ, ನನಗೇನೋ ಬೇಡ ಅಂತ. ಸರಿ, ಇನ್ನೇನು ಮಾಡೋದು ಅಂತ ಮನಸ್ಸಿಲ್ಲದ ಮನಸ್ಸಿಂದ , ರೂಮಿನಲ್ಲಿದ್ದವರಿಗೆ ಚಪಾತಿ, ಕುರ್ಮ ಪಾರ್ಸೆಲ್ ತಗೊಂಡು ಹೊರಟ್ವಿ.

ಹಸಿವೋ, ಹುಚ್ಚೋ ?
ನಾವು ಹೋಟೇಲಿಂದ ಹೊರಬಂದು ಎಲ್ಲಾದ್ರೂ ಮಿಲ್ಕ್ ಶೇಕ್ ಕುಡಿಯೋಣ ಅಂತ ಹುಡುಕುತ್ತಾ ಹೊರಟ್ವಿ. ನಾವು ಹೊರಬರುತ್ತಿದ್ದಂತೆಯೇ ಒಬ್ಬ ಕುಡುಕ ನಮ್ಮ ಹಿಂದೆ ಬಿದ್ದಿದ್ದ. ದುಡ್ಡು ಕೊಡಿ ಅಂತ. ಅವನಿಂದ ಎಸ್ಕೇಪಾಗಿ ಒಂದು ಜ್ಯೂಸಂಗಡಿ ದಾಟಿ ಬಂದಿದ್ರೂ ನಮ್ಮನ್ನೇ ಹಿಂಬಾಲಿಸುತ್ತಿದ್ದ. ಪ್ರಮೋದಿಗೆ ಸ್ವಲ್ಪ ಜಾಸ್ತಿಯೇ ಕಾಡಿಸುತ್ತಿದ್ದ ಅವನತ್ರ ಪ್ರಮೋದ ಸಿಕ್ಕಾಕಿಕೊಂಡಿದ್ದನ್ನು ನೋಡಿ ನಮಗೆಲ್ಲಾ ನಗೆ. ದುಡ್ಡು ದುಡ್ಡು ಅಂತಿದ್ದವ ಹಿಂದಿನಿಂದ ಸಡನ್ನಾಗಿ ಓಡಿ ಬಂದು ಪ್ರಮೋದನ ಕೈಯಲ್ಲಿದ್ದ ಊಟದ ಬ್ಯಾಗಿಗೆ ಕೈ ಹಾಕೋದೇ ? ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಆ ಕುಡುಕನ ಪ್ರಯತ್ನದ ಮುಂದೆ ಪ್ರಮೋದ್ ಕವರ್ ಕೈ ಬಿಡಲೇ ಬೇಕಾಯಿತು. ಸಡನ್ನಾಗಿ ಕೈಮೀರಿದ ಪ್ರಸಂಗ ನೋಡಿ ನಮಗೆಲ್ಲಾ ಶಾಕ್. ತಕ್ಷಣ ಕೆಲವರಿಗೆ ಪಿತ್ತ ನೆತ್ತಿಗೇರಿ ಆ ಹುಚ್ಚನಿಗೆ ಹೊಡೆದು ಅವನ ಕೈಯಲ್ಲಿನ ಪಾರ್ಸಲ್ ಬಿಡಿಸಿಕೊಳ್ಳಲು ಹೋದರೆ ಅವ ಆ ಕವರಿನೊಂದಿಗೆ ಓಡಿಹೋದ. ಪಕ್ಕದಲ್ಲೇ ಇದ್ದ ಪೋಲೀಸ್ ಚೌಕಿಯ ಪೋಲೀಸಪ್ಪ ಇಷ್ಟೆಲ್ಲಾ ನೋಡಿದರೂ ಏನೂ ಆಗದಂತೆ, ತುಟಿ ಪಿಟಕ್ಕೆನ್ನದೆ ತೆಪ್ಪಗಿದ್ದ ! ಹೋಗಿ ಬಿಡು ಗುರೂ. ಊಟ ತಾನೇ ? ಊಟ ಸಿಗದೇ ಎಷ್ಟು ದಿನವಾಗಿತ್ತೋ ಏನೋ  ? ಪಾಪ ತಿಂದುಕೊಂಡು ತಣ್ಣಗಿರಲಿ ಬಿಡು ಅಂತ ಸಮಾಧಾನ ಮಾಡಿಕೊಳ್ಳುತ್ತಾ ಮುಂದೆ ಬರುತ್ತಿದ್ದರೆ ಆ ಹುಚ್ಚ ನಮ್ಮ ಹಿಂದೆಯೇ ಓಡಿಬಂದ. ಕವರ್ ತನಗೆ ಬೇಡವೆನ್ನುವಂತೆ ನಟಿಸುತ್ತಾ ವಾಪಾಸ್ ಕೊಡಲು ಬರುತ್ತಿದ್ದ. ನಿಜವಾಗಲೂ ಅವನಲ್ಲಿ ಪಾಪಪ್ರಜ್ಞೆ ಕಾಡಿತ್ತೋ ಅಥವಾ ಅಲ್ಲಿದ್ದ ಅಂಗಡಿಯವರೆಲ್ಲಾ ಸೇರಿ ತನಗೆ ಚೆಚ್ಚಿದರೆ ಅನ್ನೋ ಭಯವೋ ಗೊತ್ತಿಲ್ಲ. ತಗಂಡಿದ್ದು ತಗಂಡಾಯ್ತಲ್ಲ, ಇನ್ನು ಹೋಗತ್ಲಗೆ, ತಗೊಂಡೋಗು ಅಂತ ಅವನನ್ನ ಅತ್ಲಾಗೆ ಕಳಿಸಿ ನಮ್ಮ ಮಿಲ್ಕ್ ಶೇಖಿನ ಹುಡುಕಾಟ ಮುಂದುವರೆಸಿದ್ವಿ

ಮಿಲ್ಕ್ ಶೇಖೋ ಪೌಡರ್ ಶೇಖೋ:
ಬರೀ ದೋಸೆ , ಗೋಬಿ ಪಕೋಡ ತಿಂದ್ಕೊಂಡು ಮಲ್ಕೊಂಡ್ರೆ ಹೆಂಗೆ ? ಹಾಲೋ ಮೊಸರೋ ಇಲ್ಲದೇ ಊಟವಾದ ಸಮಾಧಾನವಾದ್ರೂ ಹೆಂಗೆ ? ಏನಿಲ್ಲ ಅಂದ್ರೆ ಒಂದು ಜ್ಯೂಸಾದ್ರೂ ಇರಬೇಕಪ್ಪಾ ಈ ಉರಿನಾಡಲ್ಲಿ ಅಂತ ಜ್ಯೂಸಂಗಡಿ ಹುಡುಕಾಟ ಮುಂದುವರೆಸಿದ್ವಿ. ಅಂತೂ ಮತ್ತೊಂದು ಜ್ಯೂಸಂಗಡಿ ಸಿಕ್ತು. ಅಲ್ಲೊಂದು ದಾಳಿಂಬೆ ಮಿಲ್ಕ್ ಶೇಖ್ ಹೇಳಿದ್ವಿ ಅಂತಾಯ್ತು. ದಾಳಿಂಬೆ ಜ್ಯೂಸ್ ಚೆನ್ನಾಗಿರತ್ತೆ. ಮಾರನೇ ದಿನ ಟ್ರೆಕ್ಕಿಂಗೆಗೆ ಶಕ್ತಿ ಬೇಕಲ್ಲ, ಮಿಲ್ಕ್ ಶೇಖಾದ್ರೆ ಇನ್ನೂ ಒಳ್ಳೇದು ಅಂತ ಮಿಲ್ಕ್ ಶೇಖ್ ಹೇಳಿದ್ವಿ. ನಮ್ಮ ಕಾಸ್ಮೋಸಿನ ಆಸುಪಾಸಿನ ಸಖತ್ ಮಿಲ್ಕ್ ಶೇಖಂಗಡಿಗಳಿಗೆ ಇದನ್ನು ಹೋಲಿಸಿದ್ರೆ ಇದು ಅದಕ್ಕಿಂತಾ ಚೆನ್ನಾಗಿರ್ಬೋದಾ , ಈ ಸೆಖೆಯಲ್ಲಿ ಸೂಪರ್ರಾಗಿರ್ಬೋದಾ ಅನ್ನೋ ನಿರೀಕ್ಷೆಯಲ್ಲಿದ್ದಾಗ ಅವ ದಾಳಿಂಬೆಯಿಂದ ಕಾಳುಗಳ ಬಿಡಿಸೋ ಶೈಲಿ ನೋಡಿ ಏನೋ ಖುಷಿಯಾಯ್ತು. ಆದ್ರೆ ಪಿಂಕ್ ಕಲರಿನ ಬದಲು ಕಂದು ಬಣ್ಣವಿದ್ದ ಮಿಲ್ಕ್ ಶೇಖಿಗೆ ಬಾಯಿಟ್ಟಿದ್ದೇ ತಡ ಇದ್ದ ನಿರೀಕ್ಷೆಗಳೆಲ್ಲಾ ಕಮರಿ ಹೋಯ್ತು. ಪುಣ್ಯಾತ್ಮ ಮಿಲ್ಕ್ ಶೇಖಿಗೆ ಮಿಲ್ಕ್ ಪೌಡರ್ ಹಾಕಿದ್ದ. ದಾಳಿಂಬೆ ಹಣ್ಣಿನ ಕಾಳುಗಳ ಜೊತೆಗೆ, ಸಿಪ್ಪೆ ಪಪ್ಪೆ ಎಲ್ಲಾ ಹಾಕಿ ಜೈ ಅನ್ಸಿರಬೇಕು ! ಜೀವಮಾನದಲ್ಲಿ ಇಷ್ಟು ಕರಾಬ್ ಮಿಲ್ಕ್ ಶೇಖ್ ಇಲ್ಲಿಯವರೆಗೂ ಕುಡಿದಿರಲಿಲ್ಲ :-( ಮಾರನೆಯ ದಿನದ ಟ್ರೆಕ್ಕಿಂಗಿಗೆ ಅಂತ ಅಲ್ಲಿ ಆರಿಸಿ ಆರಿಸಿ ತಗೊಂಡ ಕಿತ್ತಳೆ ಹಣ್ಣು ಕೂಡ ಟಾಪ್ ಸ್ಟೇಷನ್ ತಲುಪೋದಿರಲಿ, ಮಿಡಲ್ ಸ್ಟೇಷನ್ ತಲುಪೋ ಹೊತ್ತಿಗೇ ಅರ್ದರ್ಧ ಕೊಳೆತೋಗಿದ್ವು :-( ಇಲ್ಲಿನ್ನು ಆಗೋದಲ್ಲ ಹೋಗೋದಲ್ಲ ಅಂತಂದ್ಕಂಡು ಮುಂದೊಂದಂಗಡಿಯಲ್ಲಿ ಫ್ರೈಡ್ ರೈಸ್ ತಗೊಂಡು ವಾಪಾಸಾದ್ವಿ.

ಟಾಪ್ ಸ್ಟೇಷನ್ನಿಗೆ ಮುನ್ನ:
ಬೋಧಿಯಲ್ಲಿದ್ದ ಸುಖ ಅಂದ್ರೆ ಅಲ್ಲಿದ್ದ ರೂಮು ಮತ್ತು ಗೊತ್ತು ಗುರಿಯಿಲ್ಲದ ಅಲ್ಲಿನ ಬೀದಿಗಳಲ್ಲಿನ ಅಲೆದಾಟಗಳಷ್ಟೆ. ಹಾಸಿಗೆ ಮೇಲೆ ಹಾಕಿದ್ದ ಬೆಡ್ ಶೀಟ್ ಬಿಟ್ರೆ ಬೇರೆ ಬೆಡ್ ಶೀಟ್ ಕೊಟ್ಟಿರಲಿಲ್ಲ ಅಲ್ಲಿ ಒಂಚೂರು ಕನ್ನಡ ಬರುತ್ತಿದ್ದ ಕೇರ್ ಟೇಕರ್ ಅಜ್ಜ. ಕೊಡ್ರಿ ಅಂದ್ರೆ ನಿಮಗೆ ಬೇಕಾದ್ರೆ ನನ್ನನ್ನ ಎಬ್ಬಿಸಿ ಕೇಳಿ, ಗ್ಯಾರಂಟಿ ಕೊಡ್ತೀನಿ ಅಂದಿದ್ದ. ಅಲ್ಲಿನ ಸೆಖೆಗೆ ಫ್ಯಾನು ಹಾಕಿಯೂ ಶರ್ಟು ತೆಗೆದು ಮಲಗೋ ಪರಿಸ್ಥಿತಿ. ಅಂತದ್ರಲ್ಲಿ ಬೆಡ್ ಶೀಟ್ಯಾಕೆ ಅಂತನ್ನೋ ಅವನ ಲಾಜಿಕ್ಕು ರಾತ್ರಿ ಅರ್ಥ ಆಯ್ತು ನಮಗೆ. ಚಿಲಕವಿಲ್ಲದ ಬಾತ್ರೂಮುಗಳು, ಏಸಿಯಿಲ್ಲದ ರೂಮುಗಳಲ್ಲಿದ್ದರೂ ಬೆಳಗ್ಗೆ ಐದೂವರೆಗೆ ಎದ್ದು ರೆಡಿಯಾಗುತ್ತೇವೆಂದ ಗೆಳೆಯರ್ಯಾರೂ ಎದ್ದಿರಲಿಲ್ಲ. ಸುಖನಿದ್ದೆಯಲ್ಲಿದ್ದ ಅವರನ್ನೆಲ್ಲಾ ಒಬ್ಬೊಬ್ಬರನ್ನಾಗಿ ಎಬ್ಬಿಸೋ ಹೊತ್ತಿಗೆ ೫:೪೦. ತಿಂಡಿ ಪಾರ್ಸೆಲ್ ಮಾಡಿಸ್ಕೊಂಡು ಹೊರಟು ಬಿಡೋಣ ಅಂದ್ರೆ ಅಲ್ಲಿನ ಯಾವ ಹೋಟೇಲಲ್ಲೂ ತಿಂಡಿಯಿಲ್ಲವೇ ? ಬಾಲಾಜಿ ಭವನದವ ೭:೩೦ ಮೇಲೇ ತಿಂಡಿ ಅಂತ ಖಡಕ್ಕಾಗಿ ಹೇಳಿ ಬಿಟ್ಟಿದ್ದ. ರಾಜ ಭವನಕ್ಕೆ ಮುಂಚೆಯೇ ಹೋಗಿ ಡೀಲ್ ಮಾಡಿದ್ರಿಂದ ೬:೩೦ ಕ್ಕೆ ತಿಂಡಿ ಕೊಡ್ತೀವಂತ ಹೇಳಿದ್ದ. ಅಂತೂ ೬:೪೫ಕ್ಕೆ ನಮ್ಮಿಂದಲೇ ತಿಂಡಿಯ ಬೋಣಿಯಾಗಿತ್ತು. ಎಲ್ಲರದ್ದೂ ತಿಂಡಿಯಾಗಿ, ಮಧ್ಯಾಹ್ನದ ಊಟಕ್ಕೂ ಇರಲಿ ಅಂತ ತಲಾ ನಾಲ್ಕು ಇಡ್ಲಿ ಕಟ್ಟಿಸ್ಕೊಂಡು ಬೋಧಿನಾಯಕ್ಕನೂರಿನಿಂದ ಹೊರಡುವಷ್ಟರಲ್ಲಿ ಘಂಟೆ ಏಳೂಕಾಲಾಗ್ತಾ ಬಂದಿತ್ತು .

No comments:

Post a Comment