Wednesday, May 3, 2017

ಪಳನಿ ಪ್ರವಾಸ

ಹೋಗೋದು ಹೇಗೆ ?
ಬೆಂಗಳೂರು > ಹೊಸೂರು > ಕೃಷ್ಣಗಿರಿ > ಸೇಲಂ > ಪಳನಿ.
ದೂರ = ೪೦೦ ಕಿ.ಮೀ
ತೆಗೆದುಕೊಂಡ ಸಮಯ : ಎಂಟೂವರೆ ಘಂಟೆ
ನೋಡಿದ ಜಾಗಗಳು: ಪಳನಿ ಮುರುಗನ್ ದೇವಾಲಯ, ಪಳನಿ ಬೆಟ್ಟದಲ್ಲಿರುವ ೨೦ಕ್ಕೂ ಹೆಚ್ಚಿನ ವಿಚಿತ್ರ ದೇಗುಲಗಳು, ಪಳನಿ ಪೆರುಮಾಳ್ ದೇಗುಲ

ಒಂಭತ್ತಂದರೆ ಹನ್ನೊಂದೂವರೆ ಗುರೂ !
ಪಳನಿಗೆ ಹೋದ್ವಿ, ಬಿಸಿಲಲ್ಲಿ ಬೆಂಡೆದ್ದು, ಒಂದಿಷ್ಟು ದೇವರ ದರ್ಶನ ಪಡೆದು ಬಂದ್ವಿ ಅಂದ್ರೆ ಅದೊಂದು ಪ್ರವಾಸವಲ್ಲ. ಅದನ್ನು ಅದೆಷ್ಟು ಅದ್ವಾನವಾಗಿಸ್ಬೇಕೋ ಅಷ್ಟು ಅದ್ವಾನವಾಗಿಸೋಕೆ ಪ್ರಯತ್ನ ಪಟ್ಟ ಸಾರಥಿಯ ಬಗ್ಗೆ, ಆ ಸಾರಥಿಯನ್ನು ಕೊಟ್ಟ ಟ್ರಾವೆಲ್ ಏಜೆಂಟಿನ ಬಗ್ಗೆ ಬರೀದೆ ಹೋದ್ರೆ ನಮ್ಮ ಪ್ರವಾಸದ ಕಥೆ ಪೂರ್ಣವಾಗೋಲ್ಲ. ನಾವು ಹತ್ತೋ ಜಾಗದಿಂದ ಕಿ.ಮೀ ಶುರುವಾಗುತ್ತೆ, ನಾವಿಳಿಯೋ ಜಾಗದಿಂದ ಕಿ.ಮೀ ಕೊನೆಯಾಗುತ್ತೆ , ಉಳಿದ ಮೂರು ದಿನದಲ್ಲಿ ಮೂರು ಜಾಗ ನೋಡ್ತೀವಿ ಅಂತ ಮಾತಾಡಾಗಿತ್ತು. ನಮ್ಮನ್ನು ಹತ್ತಿಸಿಕೊಂಡ ರಾತ್ರಿಯ ಬಾಟ ಮತ್ತು ನಮ್ಮನ್ನು ಕರೆದುಕೊಂಡು ಬರೋ ರಾತ್ರಿಯ ಬಾಟ ಸೇರಿ ಒಟ್ಟು ೫ ಬಾಟ ಕೊಡೋದಂತಲೂ ಒಪ್ಪಾಗಿತ್ತು. ಕಿ.ಮೀ ೧೨ರ ಇನ್ನೋವ ಸಿಕ್ತಾ ಇದೆ, ಆಲ್ ಈಸ್ ವೆಲ್ ಅಂತಿದ್ದ ನಮಗೆ ಆದ ಅನುಭವವೇ ಬೇರೆ. ಲಾಂಗ್ ವೀಕೆಂಡ್ ಆದ್ದರಿಂದ ಶುಕ್ರವಾರ ರಾತ್ರೆ ೯ಕ್ಕೇ ಬರೋಕೆ ಹೇಳಿದ್ದಿವಿ ಡ್ರೈವರನಿಗೆ. ಕೊನೆಗೆ ಅವರು ನಮಗೆ ಕೊಟ್ಟ ಲೆಕ್ಕಾಚಾರ ಹೀಗಿತ್ತು. ಮೂರು ದಿನ ಅಂತಂದ್ರೆ ಬುಕ್ ಮಾಡಿದ ಶುಕ್ರವಾರ ರಾತ್ರಿ, ಶನಿವಾರ ಮತ್ತು ಭಾನುವಾರ !! ಭಾನುವಾರ ಮಧ್ಯಾಹ್ನ ನಮಗೆ ಜಾಗ ತೋರಿಸೋದ್ರೊಳಗೇ ಡ್ರೈವರು ಇವತ್ತಿಗೆ ಮೂರು ದಿನ ಆಯ್ತು, ನಾನು ಹೊರಡಬೇಕು ಅಂತನ್ನೋಕೆ ಶುರು ಮಾಡಿದ್ದ ! ಶನಿವಾರ, ಭಾನುವಾರ, ಸೋಮವಾರ ಮೂರು ದಿನಗಳಿಗೆ ಅಂತ ಒಪ್ಕೊಂಡಿದ್ದ ಟ್ರಾವೆಲ್ ಏಜಂಟನೂ ಉಲ್ಟಾ ಹೊಡೆಯೋಕೆ ಶುರುಮಾಡಿದ್ದ. ಅಂತೂ ಇಂತೂ ಒಂದೂವರೆ ಘಂಟೆ ಅದ್ರಲ್ಲೇ ವೇಸ್ಟ್ ಮಾಡಿ ಭಾನುವಾರದ ಟ್ರಿಪ್ಪಿಗೆ ಅದೇ ಡ್ರೈವರನ್ನ ಇಟ್ಕೊಂಡು ಸೋಮವಾರವೂ ಅವನ ಗೊಣಗಾಟದ ಮದ್ಯೆ ಓಡಾಡಿ ಸೋಮವಾರ ಸಂಜೆ ವಾಪಾಸ್ ಬರ್ತಿದ್ದರೆ ವಿಪರೀತ ಮಳೆ. ಆಲಿಕಲ್ಲು ಮಳೆಗೆ ನಿಂತು ಹೋದ ವೈಪರನ್ನ ಸರಿ ಮಾಡೋದು ಹೇಗಂತಾಗಲೀ , ಮಳೆಯಲ್ಲಿ ಗಾಡಿ ಓಡಿಸೋದು ಹೇಗಂತ್ಲೂ ಗೊತ್ತಿಲ್ಲದ ಪುಣ್ಯಾತ್ಮ ನಮ್ಮ ಡ್ರೈವರು. ಸೋಮವಾರ ಸಂಜೆ ಇರಬೇಕಾದ ಜಾಗದಲ್ಲಿಲ್ಲದೇ ಎಲ್ಲೋ ಹೋಗಿದ್ದು, ಮಳೆಯಲ್ಲಿ ಸಿಕ್ಕಾಕ್ಕೊಂಡಿದ್ದು ಎಲ್ಲಾ ಆಗಿ ನಮ್ಮನ್ನು ಅವನು ಬೆಂಗ್ಳೂರು ತಲುಪಿಸೋ ಹೊತ್ತಿಗೆ ಮಂಗಳವಾರದ ಮೂರು ಘಂಟೆ. ಬಿಡೋ ಹೊತ್ತಿಗೆ ಹೊಸ ವರಾತ ಶುರುವಾಗಿತ್ತು ಅವನದ್ದು. ಪಿಕಪ್ ಮಾಡಿದ ಜಾಗಕ್ಕೆ ೨೫ ಮತ್ತು ಬಿಟ್ಟ ಜಾಗದಿಂದ ೨೫ ಅಂತ ಒಟ್ಟು ೫೦ ಕಿ.ಮೀ ಹೆಚ್ಚಿಗೆ ಕೊಡಬೇಕು ಅಂತ. ಆ ತರ ಮಾತಾಡೇ ಇಲ್ಲ ಟ್ರಾವೆಲ್ ಏಜೆಂಟ್ ಹತ್ರ ಅಂದ್ರೆ ಐದು ದಿನದ ಬಾಡಿಗೆ ಕೊಡಿ  ಅಂತ ಹೊಸ ವರಾತ ತೆಗೆದ. ಶುಕ್ರವಾರ ರಾತ್ರೆ ಒಂಭತ್ತಕ್ಕೆ ಬರಬೇಕಾದವನು ಹನ್ನೊಂದೂವರೆಗೆ ಬಂದು ಬೆಳಬೆಳಗ್ಗೆ ಟ್ರೆಕ್ಕಿಂಗ್ ಶುರು ಮಾಡೋ ನಮ್ಮ ಪ್ಲಾನೇ ಹಾಳು ಮಾಡಿದ್ರೂ ಒಂಚೂರೂ ಬೇಸರವಿಲ್ಲದಂತೆ ನಮ್ಮ ಮೇಲೇ ಸುಲಿಗೆ. ಶುಕ್ರವಾರ ರಾತ್ರಿ, ಶನಿವಾರ, ಭಾನುವಾರ, ಸೋಮವಾರ, ಮಂಗಳವಾರ ಬೆಳಿಗ್ಗೆ ಮೂರರದ್ದು ಅಂತ ಒಟ್ಟು ಐದು ದಿನ ಆಗಿದೆ ಅಂತ ಅವನ ಲೆಕ್ಕಾಚಾರ. ದಿನಕ್ಕೆ ೩೦೦ ರಂತೆ ಐದು ದಿನಕ್ಕೆ ೧೫೦೦ ರ ಬಾಡಿಗೆ + ೫೦ + ೭ ಬಾಟ ಕೊಡಬೇಕು ಅನ್ನೋದು ಅವನ ಲೆಕ್ಕಾಚಾರ. ಟ್ರಾವೆಲ್ ಏಜೆಂಟಿಗೆ ಫೋನ್ ಮಾಡಿದ್ರೆ ೧೫-೨೦ ಸಲ ಫೋನ್ ಮಾಡಿದ್ರೂ ಎತ್ತೋದೇ ಇಲ್ಲ ಅವ. ಸಿಲ್ಕ್ ಬೋರ್ಡಿಂದ ಫೋನ್ ಮಾಡೋಕೆ ಹಿಡಿದ್ರೂ ನೈಟ್ ಶಿಫ್ಟಲ್ಲೇ ಇದ್ದ್ದ ಅವನು ಎತ್ತೋ ಹೊತ್ತಿಗೆ ಕುಂದಲಹಳ್ಳಿ ಗೇಟ್ ಬಂದಿತ್ತು. ೫೦ ಕಿ.ಮೀ ಹೆಚ್ಚು ಕೊಡೋದು ಬೇಡ ಅಂತ ಸಮಜಾಯಿಷಿ ಕೊಟ್ರೂ ೫ ದಿನದ ಬಗ್ಗೆ ಏನೂ ಹೇಳದ ಅವ ನೀವು ಅಷ್ಟೇ ಕೊಡಬೇಕಾಗುತ್ತೆ . ಬೇಕಾದ್ರೆ ನೀವು ನೀವೇ ಸೆಟಲ್ ಮಾಡ್ಕೊಳ್ಳಿ ಅಂತ ಸಾಗಿ ಹಾಕೋ ಪ್ರಯತ್ನದಲ್ಲಿದ್ದ.

೫೦ ಕಿ.ಮೀ ಉಳಿಯತ್ತೆ ಅಂತ ಸಾವಿರಗಟ್ಟಲೆ ದಂಡ ತೆತ್ತಿದ ಕತೆ:
ಈ ಟ್ರಾವೆಲ್ ಏಜೆಂಟ್ ಮಾಡಿದ ಕಿತಾಪತಿ ಒಂದಲ್ಲ, ಎರಡಲ್ಲ. ಶುಕ್ರವಾರ ರಾತ್ರೆ ಹೊರಡಬೇಕು.ಶುಕ್ರವಾರ ಬೆಳಿಗ್ಗೆಯವರೆಗೂ ಬರೋ ಡ್ರೈವರನ ನಂಬರ್ ಕಳಿಸಿರಲಿಲ್ಲ. ಬೆಳಗ್ಗಿಂದ ಫೋನ್ ಮಾಡಿ,ಮೆಸೇಜ್ ಮಾಡಿದ ಮೇಲೆ ಹನ್ನೆರಡೂವರೆಗೆ ಫೋನೆತ್ತಿದವ ಇನ್ನೊಂದು ಸ್ವಲ್ಪ ಹೊತ್ತಿಗೆ ಕಳಿಸ್ತೀನಿ ಅಂದ. ಸಂಜೆ ಐದೂವರೆಯಾದರೂ ಪತ್ತೆಯಿಲ್ಲ. ಮತ್ತೆ ಪೋನ್ ಮಾಡಿದರೆ ಇನ್ನೊಂದು ಸ್ವಲ್ಪ ಹೊತ್ತಿಗೆ ಕಳಿಸ್ತೀನಿ ಅಂದ. ಆರೂವರೆಯಾಯ್ತು. ಸುದ್ದಿಯಿಲ್ಲ.ಫೋನ್ ಮಾಡಿದರೆ ಡ್ರೈವರ್ ಸ್ನೋ ಸಿಟಿಗೆ ಹೋಗಿದ್ದಾರೆ ಸಾರ್.ನಾಲ್ಕೂವರೆಗೇ ಅಲ್ಲಿಂದ ಹೊರಡಬೇಕಿತ್ತು, ಈಗ ಹೊರಟಿದ್ದಾರೆ , ನಿಮ್ಮ ಟೈಂಗೆ ಬರ್ತಾರೆ ಬಿಡಿ ಸಾರ್ ಅಂದ, ನಂಬರ್ ಕೊಡಲಿಲ್ಲ. ಎಂಟೂವರೆಯಾದರೂ ಸುದ್ದಿಯಿಲ್ಲದ್ದ ಕಂಡು ಮತ್ತೆ ಫೋನ್ ಮಾಡಿದ್ರೆ ಏಳೂವರೆಗೇ ಓಕುಳಿಪುರಂ ಹತ್ರದಿಂದ ಹೊರಟಿದ್ದಾರೆ, ಬರ್ತಾರೆ ಸಾರ್ ಅಂತ ನಂಬರ್ ಕಳಿಸಿದ. ಆ ನಂಬರಿಗೆ ಫೋನ್ ಮಾಡಿದ್ರೆ ನಾನು ಮೈಸೂರು ರೋಡಲ್ಲಿದ್ದೀನಿ ಸಾರ್ ಅಂತಿದ್ದಾನೆ ಡ್ರೈವರ್ ! ಎಲ್ಲಿಯ ಓಕುಳಿಪುರಂ ಎಲ್ಲಿಯ ಮೈಸೂರು ರೋಡ್ ! ಏನಿಲ್ಲ ಅಂದ್ರೂ ಇಲ್ಲಿಗೆ ಬರೋಕೆ ಎರಡು ಘಂಟೆ ಆಗುತ್ತೆ. ಏನ್ರಿ ನಿಮ್ಮದು ಅಂದ್ರೆ ಮಳೆ ಬರ್ತಿತ್ತು ಸಾರ್, ಇಲ್ಲಿ ಸಿಕ್ಕಾಕ್ಕೊಂಡಿದ್ದ್ರೆ, ಬೇಗ ಬರ್ತೀನಿ ಸಾರ್ ಅಂದ. ಸುಳ್ಳಿನ ಮೇಲೆ ಸುಳ್ಳು! ಸರಿ, ಬಾ ಅಂತೇಳಿ ಬರ್ತಾ ಜೇಪಿ ನಗರದಲ್ಲಿದ್ದ ಹೆಗ್ಡೆಯನ್ನ ಕರ್ಕೊಂಡು ಬಾ ಅಂದ್ವಿ. ಮೊದಲ ಪ್ಲಾನಿನ ಪ್ರಕಾರ ಜೇಪಿ ನಗರದ್ದು ಕೊನೆಯ ಪಿಕಪ್ ಆಗಿತ್ತು ಮತ್ತು ಕಾಸ್ಮೋಸಿಗೆ ಬಂದು ಹೋಗೋ ಕಿಲೋಮೀಟರಾದ್ರೂ ಉಳೀತಿತ್ತು. ಮೊದಲ ಪಿಕಪ್ಪೇ ಜೇಪಿನಗರವಾದ್ದರಿಂದ ಕಿ.ಮೀ ಜಾಸ್ತಿ ಮಾಡಿದ್ದಲ್ದೇ ನಮ್ಮಲ್ಲಿಗೆ ಬರೋ ಹೊತ್ತಿಗೆ ಹನ್ನೊಂದೂವರೆ ಮಾಡಿ ನಮ್ಮ ಪ್ಲಾನಿನ ಎರಡೂವರೆ ಘಂಟೆನೂ ವೇಸ್ಟ್ ಮಾಡಿದ್ದ. ಈ ರೋಡಲ್ಲಿ ಸಖತ್ ಸಲ ಓಡಾಡಿದ್ದೀನಿ ಸಾರ್ ಅನ್ನೋ ಅವನಿಗೆ ವರ್ತೂರಿನ ಮೇಲೆ ಹೊಸೂರಿಗೆ ಹೋಗೋ ರಸ್ತೆ ಗೊತ್ತಿರಲಿಲ್ಲ ! ಸರಿಯಪ್ಪ ಅಂತ ಗೂಗಲ್ ಮ್ಯಾಪ್ ಹಾಕ್ಕೊಟ್ಟು ಹೊಸೂರಿನ ತಂಕ ನಾವೇ ಕರ್ಕೊಂಡು ಹೋದ್ವಿ ಅಂತಾಯ್ತು. ಅಲ್ಯಾವ್ದೋ ಎರಡು ಪೋಲೀಸರು ಬ್ಯಾರಿಕೇಡ್ ಹಾಕ್ಕೊಂಡು ಕೂತಿದ್ರು ಅಂತ ಅವರತ್ರ ಗಾಡಿ ತಗೊಂಡೋಗಿ ನಿಲ್ಸಿ ಇಲ್ಲಿ ಪರ್ಮಿಟ್ ಎಲ್ಲಿ ಸಿಗುತ್ತೆ ಅಂತ ಕೇಳೋದಾ ? ಅವರೋ ಆ ರಸ್ತೇಲಿ ಯಾರೂ ನಿಲ್ಲಿಸದೇ ಮುಂದೆ ಹೋಗ್ತಿದ್ದರಿಂದ ಒಂದಿಷ್ಟು ಬಕರಾಗಳ ನಿರೀಕ್ಷೆಯಲ್ಲಿದ್ರು. ಸಿಕ್ಕಿದ್ದೇ ಚಾನ್ಸು ಅಂತ ಅವನತ್ರ ಇದ್ದ ರೆಕಾರ್ಡುಗಳನ್ನೆಲ್ಲಾ ಪರಿಶೀಲಿಸತೊಡಗಿದ್ರು. ಅಂತೂ ಇಂತೂ ಬಿಡ್ತಾರೆ ಅಂದ್ಕೊಂಡ್ರೆ ನಮ್ಮ ಬ್ಯಾಗುಗಳ ಚೆಕಿಂಗ್, ಗಾಡಿ ಚೆಕಿಂಗ್ ಶುರು ಆಯ್ತು. ಬ್ಯಾಗಲ್ಲಿದ್ದ ಗ್ಲೂಕೋಸ್ ಪ್ಯಾಕೇಟ್,ಬ್ಯಾಟರಿ, ಬಟ್ಟೆ, ನೀರಿನ ಬಾಟಲ್ಲೂ ಬಿಡದೇ ಎಲ್ಲಾ ತೆಗೆದು ತಡಕಾಡಿದ ಮೇಲೂ ಏನೂ ಸಿಗದ ಮೇಲೆ ಹ್ಯಾಪು ಮೋರೆ ಹಾಕ್ಕೊಂಡು ನಮ್ಮನ್ನು ಮುಂದೆ ಕಳಿಸಿದ್ರು ಆ ತಮಿಳುನಾಡು ಪೋಲೀಸವ್ರು. ಅದೇ ರಸ್ತೇಲಿ ಓಡಾಡೋರಿಗೆ ಪರ್ಮಿಟ್ ಕೊಡೋದು ಎಲ್ಲಿ ಅಂತ ಗೊತ್ತಿರಲ್ವಾ ? ಅಂತೂ ಇಂತೂ ಗೂಗಲ್ ಮ್ಯಾಪ್ ಹಾಕ್ಕೊಂಡು ಮುಂದೆ ಹೋದ್ವಿ ಅನ್ನೋ ಹೊತ್ತಿಗೆ ಪರ್ಮಿಟ್ ಕೊಡೋ ಜಾಗ ಬಂತು. ಪರ್ಮಿಟ್ಟಿಗೆ ಅಂತ ಸಾವಿರ ಇಸ್ಕೊಂಡು ಹೋಗಿದ್ದ. ಗಾಡಿ ಒಳಗೆ ಕೂತು ಕೂತು ಬೇಜಾರಾಯ್ತು, ಪರ್ಮಿಟ್ ತರೋಕೆ ಹೋದೋನು ಇಷ್ಟೊತ್ತಾದರೂ ಬರ್ಲಿಲ್ವಲ್ಲ ಅಂತ ಸಂದೇಶ ನೋಡೋಕೆ ಹೋದ. ಅಷ್ಟೊತ್ತಿಗೆ ಡ್ರೈವರ್ ಓಡೋಡಿ ಬಂದ ಗಾಡಿಯತ್ರ. ಸಾರ್ ಇನ್ನೊಂದೈನೂರು ಕೊಡಿ ಅಂದ. ಯಾಕಪ್ಪಾ ಅಂದ್ರೆ ನೀವೆಲ್ಲಾ ಪರ್ಮಿಟ್ ಕೊಡುವಲ್ಲಿಗೆ ಬರಬಾರ್ದು, ಬಂದಿದ್ದಕ್ಕೆ ಮತ್ತೆ ಐನೂರು ಕೇಳ್ತಿದ್ದಾರೆ ಅಂದ ! ಟ್ರಿಪ್ಪಿಗೆ ಅಂತ ಬಂದಾಗಿದೆ. ಮುಂದೆ ಹೋಗದೇ ವಿಧಿಯಿಲ್ಲ.ಸರಿ ಅಂತ ಐನೂರು ಕೊಟ್ಟೂ ಕಾದ್ವಿ, ಕಾದ್ವಿ, ಕಾದ್ವಿ. ಸುಮಾರು ಒಂದು ಘಂಟೆ ಕಾದ್ವಿ. ಡ್ರೈವರು ಬಾಲ ಸುಟ್ಟ ಬೆಕ್ಕಿನ ತರ ಅಲ್ಲೇ ಹೊರಗೆ ಓಡಾಡಿಕೊಂಡಿದ್ನೇ ಹೊರತು ಪರ್ಮಿಟ್ ಕೊಡ್ತಿದ್ದವರ ಹತ್ರ ಹೋಗಿರಲಿಲ್ಲ ! ಅದೇ ರೋಡಲ್ಲಿ ಅದೆಷ್ಟೋ ಸಲ ಹೋಗಿ ಅಭ್ಯಾಸವಿದ್ದವನ ರೀತಿ ಅದು. ಸುಳ್ಳಿನ ಮೇಲೆ ಸುಳ್ಳಿನ ಮೇಲೆ ಸುಳ್ಳು ! ಮೊದಲೇ ಲೇಟಾಗಿದ್ದೋರು ಇನ್ನೊಂದಿಷ್ಟು ಲೇಟು ಮಾಡಿಸಿಕೊಳ್ಳುತ್ತಾ , ದರಿದ್ರ ಲಂಚ ವ್ಯವಸ್ಥೆಗೆ, ಡ್ರೈವರಿಗೆ, ಇವನನ್ನು ತಗುಲಾಕಿದ ಟ್ರಾವೆಲ್ ಏಜೆಂಟಿಗೆ ಶಾಪ ಹಾಕುತ್ತಾ , ಸೆಕೆಯಲ್ಲಿ ಬೇಯುತ್ತಾ, ಕಿಟಕಿ ತೆಗೆದರೆ ಕಚ್ಚುತ್ತಿದ್ದ ಸೊಳ್ಳೆಗಳಿಗೆ ರಕ್ತದಾನ ಮಾಡುತ್ತಾ ಕುಳಿತಿದ್ದೆವು. ಮುಂಚೆ ನಿಲ್ಲಿಸಿದ ಪೋಲೀಸ್ ಚೆಕ್ ಪೋಸ್ಟಲ್ಲಿ ಏನೂ ದುಡ್ಡು ಕೇಳದ್ದು ನಮ್ಮ ಪುಣ್ಯವಿರಬೇಕು ! ನಮ್ಮ ಪ್ಲಾನಿದ್ದಿದು ೪೯೦ಕಿ.ಮೀ ಇದ್ದ ಥೇನಿ ಜಿಲ್ಲೆಯಲ್ಲಿರೋ ಟಾಪ್ ಸ್ಟೇಷನ್ನಿಗೆ ಹೋಗಿ ಅಲ್ಲಿ ಬೆಳಗ್ಗೆ ಚಾರಣ ಶುರು ಮಾಡಿ ಸಂಜೆಯ ಹೊತ್ತಿಗೆ ಕೆಳಗಿಳಿಯುವುದು ಅಂತ. ಆದರೆ ಈ ಪುಣ್ಯಾತ್ಮರಿಂದ ನಾವು ಅಲ್ಲಿಗೆ ಹೋಗೋದೇ ಮಧ್ಯಾಹ್ನವಾಗೋ ಎಲ್ಲಾ ಲಕ್ಷಣಗಳೂ ಗೋಚರಿಸಿದ್ವು. ಅದಕ್ಕೇ ಅಂತ ಪ್ಲಾನ್ ಬದಲಾಯಿಸಿ ಕೊನೆಯ ದಿನವಿದ್ದ ಪಳನಿಗೆ ಮೊದಲ ದಿನ ಹೋಗೋದು ಅಂತ ಮಾಡಿದೆವು.

ಪಳನಿಯತ್ತಲ ಪಯಣ:
ನಾಲ್ಕೈದು ಲೈನಿನ ತುಮಕೂರು ಟೋಲುಗಳಲ್ಲೇ ತಲೆ ಕೆಟ್ಟು ಹೋಗುತ್ತಿದ್ದ ನಮಗೆ ಒಂದು ಕಡೆ ಎರಡು ಲೇನಿದ್ದ ತಮಿಳುನಾಡು ಹೈವೆಯ ಬಗ್ಗೆ ಏನು ಹೇಳೋದೋ ಗೊತ್ತಾಗುತ್ತಿರಲಿಲ್ಲ. ಗಾಡಿಗೆ ತಾಗದಿದ್ದರೂ ಎಲ್ಲೋ ಅಡ್ಡಬಂದ ಅಂತ ಜಗಳ ತೆಗೆದು ಕಚ್ಚಾಡೋರು, ಕರ್ನಾಟಕದ ಗಾಡಿಗಳಿಗೆ ಜಾಗ ಕೊಡಬಾರದೆಂದು(ನಮ್ಮ ಡ್ರೈವರ್ ಹೇಳುತ್ತಿದ್ದಂತೆ) ಅಡ್ಡಾ ದಿಡ್ಡಿ ತಿರುಗಿಸುತ್ತಿದ್ದ ತಮಿಳುನಾಡಿನ ಬಸ್ಸುಗಳಿಂದ ಟೋಲಿನ ಹಿಂದೆ ನಿಂತಿದ್ದ ನಮ್ಮ ಇನ್ನೋವ ಒಂದಿಚೂ ಮುಂದೆ ಹೋಗದೆ ಟೋಲ್ ದಾಟೋದ್ರೊಳಗೇ ಬೆಳಗಾಗುತ್ತೇನೋ ಅನಿಸುತ್ತಿತ್ತು. ಅಂತೂ ಇಂತೂ ಅರ್ಧ -ಮುಕ್ಕಾಲು ಘಂಟೆ ದಾಟಿದ ಮೇಲೆ ಟೋಲ್ ದಾಟಿದ್ವಿ ಅಂತಿಟ್ಕೊಳ್ಳಿ. ಆ ಡ್ರೈವರ್ ನಿದ್ದೆ ಬರಬಾರದು ಅಂತ ಒಂದರ ಮೇಲೊಂದು ಸುಳ್ಳಿನ ಕತೆ ಕಟ್ಟುತ್ತಿದ್ನೋ ಅಥವಾ ಅವನ ಅಭ್ಯಾಸವೇ ಹಾಗೋ ಗೊತ್ತಿರಲಿಲ್ಲ.ಊಟಿಗೆ ಹೋಗ್ಬೇಕಾದ್ರೆ ೧೦೦೦ ರೂಪಾಯಿ ಕಟ್ಬೇಕು ಸಾರ್ ಆದ್ರೆ ಅಲ್ಲಿನ ಫಾರೆಸ್ಟಾಫೀಸರುಗಳು ಪರಿಚಯವಿದ್ರೆ ೫೦-೬೦ ರೂಪಾಯಿಗಳಲ್ಲಿ ಕೆಲಸವಾಗುತ್ತೆ ಅನ್ನುತ್ತಿದ್ದ ! ಕೃಷ್ಣಗಿರಿ ಬಂದ ತಕ್ಷಣ ಅಲ್ಲಿನ ಮಾವಿನ ಹಣ್ಣುಗಳ ಬಗ್ಗೆ ಹೇಳೋಕೆ ಶುರು ಮಾಡಿದ.ಇಲ್ಲಿ ನಲವತ್ತೈವತ್ತಕ್ಕೆ ಕೇಜಿ ಸಿಗುತ್ತೆ , ಒಳ್ಳೆಯ ಮಾವು ಅಂದ. ನಮ್ಮೂರಲ್ಲಿ ಬೆಳೆದ ಮಾವನ್ನು ವ್ಯಾಪಾರದವರು ೨೫-೩೦ಕ್ಕೆ ಕೊಳ್ಳೋದು ಗೊತ್ತಿದ್ದರೂ ಪೇಟೆಯಲ್ಲಿ ಮಾವನ್ನು ೪೦ ರೂ ಕೇಜಿಯಂತೆ ಕೊಂಡು ಯಾವುದೋ ಕಾಲವಾಗಿತ್ತು. ಗಾಡಿಯಲ್ಲಿ ಕೂತು ಕೂತು ಎಷ್ಟೋ ಕಾಲವಾಯ್ತು ಅಂತ ಕಾಲು ನೋವು ಬಂದಿದ್ದೋರೆಲ್ಲಾ ಕೆಳಗಿಳಿದು ರಸ್ತೆ ಬದಿಯಲ್ಲಿದ್ದ ಮಾವಿನ ದರ ಕೇಳಿದ್ರೆ ಯಾವುದೂ ೪೦-೫೦ರಲ್ಲಿಲ್ಲ. ನಮ್ಮೂರಲ್ಲಿ ಹೊಳೆದಡದಲ್ಲಿ ಸಿಗೋ ಹುಳಿ ಮಾವಿನಕಾಯಿಯಂತಹ ಸಣ್ಣ ಹಣ್ಣುಗಳಿಗೆ ೫೦-೬೦ ಇದ್ದಿದ್ದು ಬಿಟ್ರೆ ಉಳಿದಿದ್ದೆಲ್ಲಾ ೧೦೦ ರ ಮೇಲೇ. ಈ ರೀತಿಯ ಹೈಪ್ ಬೇಕಿತ್ತಾ ಇದಕ್ಕೆ ಅಂತೆನಿಸಿ ಮತ್ತೆ ಗಾಡಿ ಹತ್ತಿದ್ವಿ. ಅಂತೂ ಇಂತೂ ಗೂಗಲ್ ಮ್ಯಾಪಲ್ಲಿ ಹುಡುಕುತ್ತಾ, ಕೊನೆಗೆ ಕನಫ್ಯೂಸಾದಲ್ಲಿ ಸಿಕ್ಕ ಊರವರನ್ನ ಕೇಳುತ್ತಾ ಪಳನಿ ತಲುಪೋ ಹೊತ್ತಿಗೆ ಬೆಳಗು ಹರಿದು ೭:೩೦ ಆಗಿತ್ತು. ನಮ್ಮ ಜಾಗದಿಂದ ೪೦೦ ಕಿ.ಮೀ ಇದ್ದ ಪಳನಿ ತಲುಪೋ ಹೊತ್ತಿಗೆ ೭:೩೦ ಆಗಿತ್ತು ಅಂದ್ರೆ ೪೯೦ ಆಗುತ್ತಿದ್ದ ಟಾಪ್ ಸ್ಟೇಷನ್ ತಲುಪೋ ಹೊತ್ತಿಗೆ ನಮ್ಮ ಕತೆ ಏನಾಗಬಹುದಿತ್ತು ಲೆಕ್ಕ ಹಾಕಿ !

ತೀರ್ಥ ಸ್ಥಳದಲ್ಲೊಂದು ರೂಮು ಹುಡುಕಿ:
ಪಳನಿ ಸಖತ್ ಫೇಮಸ್ಸಾದ ಸ್ಥಳವಾಗಿದ್ದರಿಂದ ಲಾಡ್ಜುಗಳಿಗೇನೂ ಕಮ್ಮಿಯಿರಲಿಲ್ಲ. ಆದ್ರೆ ಕೇರಳದ ವಯನಾಡ ಪ್ರವಾಸದಲ್ಲಿ ಸಿಕ್ಕಂತೆ ಇಲ್ಲಿ ಬರೀ ಒಂದೆರಡು ಘಂಟೆಗೆ ಅಥವಾ ಫ್ರೆಷ್ ಅಪ್ ಆಗಲು ರೂಮು ಸಿಗುತ್ತಿರಲಿಲ್ಲ. ಯಾರು ಕೇಳಿದ್ರೂ ರೂಮಿಗೆ ೬೦೦,ಇಬ್ಬರೇ ರೂಮಿಗೆ ಅನ್ನೋರು. ಅಂತೂ ಇಂತೂ ಭಗವತೀ ಲಾಡ್ಜ್ ಅಂತನ್ನೋ ಬಸ್ಟಾಂಡ ಪಕ್ಕದಲ್ಲಿದ್ದ, ಸರವಣ ಭವನದ ಮಗ್ಗುಲಲ್ಲಿದ್ದ ಲಾಡ್ಜಲ್ಲಿ ೯೦೦ ಕ್ಕೆ ರೂಮೊಂದು ಸಿಕ್ಕಿತು. ರೂಮು ತೀರಾ ಚಿಕ್ಕದಾಗಿದ್ದರೂ ರೂಮು ಹುಡುಕೋದ್ರಲ್ಲೇ ಹೆಚ್ಚು ಸಮಯ ಕಳೆಯುವಂತಿರಲಿಲ್ಲ. ಇದ್ದೊಂದು ಬಾತ್ರೂಮಲ್ಲೇ ೭ ಜನ ನಿತ್ಯ ಕರ್ಮಗಳನ್ನ ಮುಗಿಸಿ , ತಿಂಡಿ ಪೂರೈಸುವಷ್ಟರಲ್ಲಿ ಘಂಟೆ ಹತ್ತಾಗುತ್ತಾ ಬಂದಿತ್ತು.ಹಿಂದಿನ ದಿನದೆಲ್ಲಾ ಗೋಳು, ಪಳನಿಯ ಸೆಖೆಯ ಮಧ್ಯೆಯೂ ಸರವಣ ಭವನ ಸಿಕ್ಕಿದ್ದು ಬರಗಾಲದಲ್ಲಿ ಓಯಸಿಸ್ ಸಿಕ್ಕಂತಾಗಿತ್ತು ನಮಗೆ. ಮಸ್ತಾದ ತಿಂಡಿಯ ಜೊತೆಗೆ ಮಧ್ಯಾಹ್ನದ ಭೂರೀ ಭೋಜನ ಪಳನಿಯ ಮಧುರ ನೆನಪಗಳಲ್ಲೊಂದು

ಪಳನಿ ರೈಲ ಕ್ಯೂನಲ್ಲಿ:
ಪಳನಿಯಲ್ಲಿ ಪ್ರಸಿದ್ದವಾಗಿರೋದು ಪಳನಿ ಮುರುಗನ್ ದೇವಸ್ಥಾನ. ಬೆಟ್ಟದ ಮೇಲಿರೋ ಆ ದೇವಸ್ಥಾನಕ್ಕೆ ರೈಲ ಮೂಲಕ ಮತ್ತು ರೋಪ್ ವೇ ಮೂಲಕ ಹೋಗಬಹುದು ಅಂತ ಕೇಳಿದ್ವಿ. ಟರ್ಬೈನುಗಳ ಮೂಲಕ ಬೆಟ್ಟದ ಕೆಳಗಿಂದ ಮೇಲೆಳೆಯುವ ರೈಲಲ್ಲಿ ಹೋಗೋದೇ ಒಂದು ಮಜಾ. ಮಿಸ್ ಮಾಡ್ಬೇಡಿ ಅಂತ ಅಲ್ಲಿಗೆ ಹೋಗಿ ಬಂದವರ ಹತ್ರವೆಲ್ಲಾ ಕೇಳಿದ್ದ ನಾವು ಅದ್ರಲ್ಲೇ ದೇವಸ್ಥಾನಕ್ಕೆ ಹೋಗೋಕೆ ನಿರ್ಧರಿಸಿದ್ವಿ. ಸರಿ ಅಂತ ಹೋಗಿ ಟಿಕೇಟ್ ಕೌಂಟರತ್ರ ಹೋದ್ವಿ. ಅಲ್ಲಿ ೧೦ರೂನ, ೫೦ರೂ ನ ಎರಡು ಸಾಲುಗಳಿದ್ವು. ೧೦ ರೂನ ಸಾಲಲ್ಲಿ ೨೦ ನಿಮಿಷ ನಿಂತಿದ್ರೂ ಒಂಚೂರೂ ಮುಂದೆ ಹೋಗ್ತಿರಲಿಲ್ಲ. ಪಕ್ಕದ ೫೦ ರೂನ ಕ್ಯೂ ಮುಂದೆ ಹೋಗ್ತಿತ್ತು. ಪಕ್ಕದಲ್ಲಿದ್ದ ಅಂಕಲ್ ಒಬ್ಬರು ೫೦ ರೂ ಕ್ಯೂಗೆ ಹೋಗಿ. ಬೇಗ ಹೋಗುತ್ತೆ ಅಂದ್ರು. ಸರಿ ಅಂತ ಪಕ್ಕದ ಕ್ಯೂಗೆ ಹೋದ್ರೆ ಹತ್ತು ರೂ ಕ್ಯೂ ಮುಂದೆ ಹೋಗ್ಬೇಕಾ ? ! ಹತ್ತು ಹದಿನೈದು ನಿಮಿಷಕ್ಕೆ ಒಂಚೂರು ಮುಂದೋಗ್ತಿದ್ದ ಕ್ಯೂನಲ್ಲಿ ಹತ್ತತ್ರ ಒಂದೂವರೆ ಘಂಟೆ ವೇಸ್ತಾಯ್ತು. ಅದ್ರ ಮಧ್ಯೆ ತಮಿಳುನಾಡಿನಲ್ಲಿ ನಮ್ಮಲ್ಲಿನ ಪೂರ್ಣ ಕುಂಭ ಸ್ವಾಗತದಂತೆ ತಲೆಯ ಮೇಲೆ ಸಿಂಗರಿಸಿದ ಪೂರ್ಣ ಕುಂಭ ಹೊತ್ತು ಬೀದಿಯಲ್ಲಿ ನಡೆಯುತ್ತಿದ್ದ ಹೆಂಗಳೆಯರು ಸಿಕ್ಕಿದ್ರು. ಅವರೆದುರು ತಮಟೆ ಬಡಿಯುತ್ತಿದ್ದ ಒಂದಿಷ್ಟು ಜನ. ಆ ತಮಟೆ ಬೀಟಿಗೆ ಕುಣಿಯುತ್ತಿದ್ದ ಮುದುಕರು, ಹುಡುಗರು. ಮೊದಲ ಬಾರಿಗೆ ಹುಡುಗಿಯರೂ ತಮಟೆ ಬೀಟಿಗೆ ಕುಣಿಯೋದ ನೋಡಿದೆ. ಅವರಲ್ಲಿ ಕುಣಿಯುತ್ತಿದ್ರೆ ಸರಳುಗಳ ಈಚೆಗಿದ್ದ ನಮಗೆ ಹುಚ್ಚೆದ್ದು ಕುಣಿಯುವಂತಾಗುತ್ತಿತ್ತು. ಆದ್ರೇನು ಮಾಡೋದು? ಸರಳುಗಳ ಆಚೆಯಿಂದ ಅವರ ಸಂಭ್ರಮ ರೆಕಾರ್ಡ್ ಮಾಡೋದು ಬಿಟ್ಟು ಬೇರೇನೂ ಮಾಡೋಕಾಗುತ್ತಿರಲಿಲ್ಲ. ಅಂತೂ ಇಂತೂ ಟಿಕೇಟ್ ತಗೊಂಡು ಒಳಗೋದ್ವಿ ಅಂತಾಯ್ತು. ಅಲ್ಲಿ ಮತ್ತೆ ರೈಲಿಗಾಗಿ ಕ್ಯೂ. ಮೊದಲು ಬಂದ  ನಮ್ಮನ್ನು ಕೋಣೆಯೊಂದರ ಮುಂದೆ ಕಳಿಸಿದ. ರೈಲಿಗೆ ಜನರನ್ನು ಬಿಡುತ್ತಿದ್ದ ಗೇಟು ಮತ್ತೊಂದು ತುದಿಯಲ್ಲಿತ್ತು. ಹಾಗಾಗಿ ರೈಲು ಬಂದ್ರೂ ಕೊನೆಗೆ ಬಂದ ಜನರೇ ಅದರಲ್ಲಿ ಹತ್ತಿ ಮೊದಲೇ ಬಂದಿದ್ದ ನಮಗೆ ಹತ್ತಲಾಗಲಿಲ್ಲ ! ಪಕ್ಕದಲ್ಲಿ ಮತ್ತೊಂದು ರೈಲು ಬಂದು ನಿಂತ್ರೂ ಮೊದಲು ಬಂದ ನಮಗೆ ಜಾಗ ಮಾಡಿಕೊಡೋ ಬದಲು ಇನ್ನೊಂದಿಷ್ಟು ಹೊಸಬರಿಗೆ ಆ ರೈಲಿಗೆ ಹತ್ತಿಸಿದ್ರು ! ಏಳು ಜನ ಒಂದೇ ಸಲ ರೈಲಿಗೆ ಹೋಗಬೇಕು ಅನ್ನೋ ಆಸೆ ಈಡೇರದೇ ಜಾಗ ಸಿಕ್ಕ ಇಬ್ಬರು ಮಾತ್ರ ಈ ರೈಲಲ್ಲಿ ಹೋಗ್ಬೇಕಾಯ್ತು. ಒಳ್ಳೇ ಕತೆಯಾಯ್ತಲ್ಲ ಇದು ಅಂದ್ಕೊಂಡು ಪಕ್ಕದಲ್ಲಿದ್ದ ಮತ್ತೊಂದು ರೈಲಿನತ್ರ ಹೋದ್ವಿ. ಅಲ್ಲಿದ್ದೋರೆಲ್ಲ ನಾವು ಮೊದಲು ನಾವು ಮೊದಲು ಅಂತಿದ್ರು ಹಿಂದಿ, ಇಂಗ್ಲೀಷಲ್ಲಿ . ತಡೀ ಗುರೂ, ನಾವು ಹತ್ತೂವರೆಯಿಂದ ಕಾಯ್ತಿದೀವಿ ಅಂದೆ ನಾನು ಇಂಗ್ಲೀಷಲ್ಲಿ. i think you have not paid anything ಅಂದ್ರು ಅಲ್ಲಿದ್ದ ಹಿರಿಯರೊಬ್ರು. ಅವರು ಅವರ ಕುಟುಂಬಾನಾ ಬೇಗ ಒಳಬಿಡೋಕೆ ೪೦೦  ಕೊಟ್ಟಿದ್ರಂತೆ ! ಇಲ್ಲಿ ತಳ್ಳಾಡದಿದ್ರೆ ಉಳಿಗಾಲವಿಲ್ಲ ಅಂತ ರೈಲು ಬಂದ ತಕ್ಷಣಾನೇ ತಳ್ಳಾಡುತ್ತಾ ರೈಲೊಳಗೆ ನುಗ್ಗಿದ್ವಿ. ಅಂತೂ ಉಳಿದ ಐವರಾದ ನಾನು, ಸಂದೇಶ್, ಪ್ರಮೋದ್, ವರುಣನಿಗೆ ಒಂದು ಕಡೆಯೂ, ಬಾಲನಿಗೆ ಇನ್ನೊಂದು ಕಡೆಯೂ ಜಾಗ ಸಿಕ್ತು.

ಟರ್ಬೈನೆಂಬ ಅದ್ಭುತ:
ಉರಿ ಉರಿ ಬಿಸಿಲು. ಕಾದ ಹಂಚ ಕೆಳಗೆ ಕೂತ ಅನುಭವ. ನಿಧಾನವಾಗಿ ರೈಲು ಮೇಲೆ ಸಾಗ್ತಾ ಇದ್ರೆ ಅದು ಹೇಗೆ ಮೇಲೆ ಸಾಗುತ್ತೆ ಅನ್ನೋ ಕುತೂಹಲ. ಟ್ರೈನಿಗೆ ಕಬ್ಬಿಣದ ಹಗ್ಗಗಳನ್ನು ಕಟ್ಟಿ, ಅದರ ಮೇಲೆ ರೈಲು ಜಾರದಂತೆ, ಗ್ರಿಪ್ಪಿಗೆ ಸನ್ನಿಗಳನ್ನು ಹಾಕಿ ಮೇಲೆ ಎಳೆಯುತ್ತಿದ್ರು. ಆ ತರ ಅಲ್ಲಿದ್ದ ಮೂರು ರೈಲಗಳನ್ನು ಮೇಲಕ್ಕೆ ಎಳೆಯುತ್ತಿದ್ದುದು ಅಲ್ಲಿದ್ದ ಮೂರು ಟರ್ಬೈನುಗಳು. ಅದೇ ತರ ಕೆಳಗಿಳಿಸೋಕೂ ಆ ಟರ್ಬೈನುಗಳೇ ಆಧಾರ. ಅಲ್ಲಿ ಪೋಟೋ ತೆಗೆಯಬೇಡಿ ಅಂತ ರೈಲಿನವ್ರು ವಿನಂತಿಸುತ್ತಿದ್ದರಿಂದ ಅಲ್ಲಿನ ಫೋಟೋಗಳನ್ನಾಗಲೀ, ವಿಡಿಯೋಗಳನ್ನಾಗಲೀ ಇಲ್ಲಿ ಹಾಕುತ್ತಿಲ್ಲ. ಸುಮಾರು ೪೫ ಡಿಗ್ರಿ ಇರುವ ಆ ಬೆಟ್ಟದ ಮೇಲೆ ನಿಧಾನವಾಗಿ ರೈಲಲ್ಲಿ ಸಾಗುವಾಗ ಬದಲಾಗೋ ಸುತ್ತಲ ಪ್ರಕೃತಿಯನ್ನೋ ಆನಂದಿಸೋದೇ ಒಂದು ಮಜ. ಆರೂವರೆ ನಿಮಿಷದ ಆ ಪಯಣದಲ್ಲಿ ಬೆವರ ಹೊಳೆಯೇ ಹರಿದು ಹೋದ್ರೂ ಅದೊಂದು ನೆನಪಲ್ಲುಳಿಯೋ ಪಯಣವಾಗಿತ್ತು.

ಮುರುಗನ್ ದೇಗುಲ:
ಅಂತೂ ಮುರುಗನ್ ದೇಗುಲ ತಲುಪೋ ಹೊತ್ತಿಗೆ ಮಧ್ಯಾಹ್ನ ಹನ್ನೆರಡೂ ಮುಕ್ಕಾಲಾಗ್ತಾ ಬಂದಿತ್ತು. ಅಲ್ಲಿ ದರ್ಶನಕ್ಕೆ ಮತ್ತೆ ಕ್ಯೂ. ಉಚಿತ ದರ್ಶನಕ್ಕೆ ಕೂತ್ರೆ ಇವತ್ತಿಗೆ ದರ್ಶನವಾಗೋಲ್ಲ ಅಂತ ೧೦ ರೂ ದರ್ಶನಕ್ಕೆ ಹೋದ್ವಿ. ಅಲ್ಲಿ ಜನ ಕಾದು ಕಾದು ಸುಸ್ತಾಗಿ ಕೂತೇ ಬಿಟ್ಟಿದ್ರು. ಹತ್ತು ರೂ ದರ್ಶನಕ್ಕೆ ಟಿಕೇಟ್ ತಗೊಳ್ಳೋಕೂ ಮತ್ತೆ ಕಾದ್ವಿ.ಅಂತೂ ಇಂತೂ ದೇವಸ್ಥಾನದ ಆವರಣಕ್ಕೆ ಬಂದ್ವಿ ಅನ್ನೋ ಹೊತ್ತಿಗೆ ದೇವರ ಸನ್ನಿಧಿಗೇ ಬಂದು ನಿಂತಿದ್ವಿ. ದೇವರೆದುರು ನಾಲ್ಕೈದು ಸೆಕೆಂಡೂ ನಿಲ್ಲೋಕೆ ಬಿಡಲಿಲ್ಲ ಅಲ್ಲಿದ್ದ ಪೋಲೀಸರು . ಇಡೀ ದಿನ ಒದ್ದಾಡಿಕೊಂಡು ಬಂದಿದ್ರೂ ದೇವರೆದುರು ಒಂದ್ನಿಮಿಷ ನಿಲ್ಲಲಾಗಲಿಲ್ಲವಲ್ಲಾ ಅಂತ ಬೇಜಾರಾದ್ರೂ ಎಲ್ಲಾ ದೊಡ್ಡ ದೇಗುಲದಲ್ಲೂ ಹೀಗೇ ಬಿಡು ಅಂತ ಸಮಾಧಾನ ಮಾಡಿಕೊಳ್ಳಬೇಕಾಯ್ತು. ಅಲ್ಲಿನ ಪ್ರಸಾದ ತಗೊಂಡು ಹೊರಬರೋ ಹೊತ್ತಿಗೆ ಎರಡಾಗ್ತಾ ಬಂದಿತ್ತು .ರೈಲಲ್ಲಿ ಬರೋಣ ಅಂದ್ರೆ ಸಖತ್ ರಷ್ಯು. ಮೆಟ್ಟಿಲಲ್ಲಿ ಬರೋಣ ಅಂತ ಬಂದ್ವಪ್ಪ. ಯಾವ ೧೦ಕೆ ಓಟದಲ್ಲೂ ಆ ರೇಂಜಿಗೆ ಓಡಿರಲಿಲ್ವೇನೋ. ಆ ರೇಂಜಿಗೆ ಓಡಬೇಕಾಯ್ತು. ಎಲ್ಲಾ ಸಿಮೆಂಟಿನ ಮೆಟ್ಟಿಲುಗಳು. ಮಧ್ಯಾಹ್ನದ ಉರಿಬಿಸಿಲಿಗೆ ಕಾದು ಕೆಂಡದಂತಾಗಿದ್ವು. ಹೆಜ್ಜೆಯಿಡುತ್ತಿದ್ದಂಗೇ ಚುರುಕ್ಕೆನ್ನುತ್ತಿದ್ದವು. ಅಂತಹ ೧೫-೨೦ ಮೆಟ್ಟಿಲು ಇಳಿದ್ರೆ ಸ್ವಲ್ಪ ನೆರಳಿನ ಜಾಗ ಸಿಗ್ತಿತ್ತು. ಮತ್ತೆ ಇದೇ ಓಟ. ಹಿಂಗೇ ಓಡಿ ಓಡಿ ಕೆಳಗೆ ತಲುಪಿದ್ರೆ ಚಪ್ಪಲಿ ಇಡೋ ಜಾಗಕ್ಕೆ ಮತ್ತೆ ಸುಮಾರು ಒಂದು ಐನೂರು ಮೀಟರ್ ದೂರ. ಫುಲ್ ಸಿಮೆಂಟ್ ಅಥವಾ ಟಾರ್ ರೋಡ್. ಎದ್ನೋ ಬಿದ್ನೋ ಅಂತ ಓಡುತ್ತಿದ್ವಿ. ಎಲ್ಲಾದ್ರೂ ಅಂಗಡಿ ನೆರಳು ಸಿಕ್ಕಲ್ಲಿ, ಕಾರು ಪಾರ್ಕಿಂಗ್ ನೆರಳು ಸಿಕ್ಕಲ್ಲಿ ನಿಂತ್ವಿ. ಹಿಂಗೆ ಆದ್ರೆ ಆಗಲ್ಲ ಅಂದ್ಕೊಂಡು ಒಂದೇ ಉಸಿರಿಗೆ ಓಡಿ ಬಿಟ್ಟೆ ಚಪ್ಪಲಿ ಇಡುವಲ್ಲಿಗೆ. ಅಂತೂ ಚಪ್ಪಲಿ ಸಿಕ್ಕು ಹಾಕ್ಕಂಡಾಗ ಸ್ವರ್ಗ ಸಿಕ್ಕ ಭಾವ. ಬಾಲ ಸುಟ್ಟ ಬೆಕ್ಕಂತೆ ಆಡೋದು ಅನ್ನೋದ್ರ ಬದ್ಲು ಕಾದ ಡಾಂಬರ್ ರಸ್ತೆಯ ಮೇಲೆ ಬರಿಗಾಲಲ್ಲಿ ಓಡೋನು ಅಂತ್ಲೂ ಹೇಳಬಹುದಾಗಿತ್ತೇನೋ ಅನಿಸ್ತು. ಅಂತೂ ಇಂತೂ ವಾಪಾಸ್ ಬಂದು ಸರವಣ ಭವನದಲ್ಲಿ ಗಡದ್ದಾಗೊಂದು ಊಟ ಹೊಡೆದು ಭಗವತಿಯ ತಣ್ಣೀರಲ್ಲಿ ಮಿಂದೆದ್ದು ಕೊಡೈಕೆನಾಲಿನ ಹಾದಿ ಹಿಡಿದ್ವಿ

ಮುಂದಿನ ಭಾಗದಲ್ಲಿ: ಕೊಡೈ ಕಹಾನಿ

1 comment:

  1. ಇದೆಂತಾ ಕರ್ಮಕಾಂಡ ಗುರು. ಈ ಸೆಕೆಲ್ಲಿ ಆ ತಮಿಳುನಾಡಲ್ಲಿ ಅದೂ ದೇವರ ಸ್ಥಳಗಳಿಗೆ ಪ್ರವಾಸ!! ಜೊತೆಗೆ ಇಂತಾ ಡ್ರೈವರ್ ಬೇರೆ. ಗಡಿದಾಟುವಾಗ ೧೫೦೦ ಪೀಕಿದ್ದು ನಾಟಕ. ಪರ್ಮಿಟ್ಟಿಗೆ ಅಷ್ಟಿಲ್ಲ. ಹೆಚ್ಚಂದರೆ ಆರುನೂರು ಇರಬಹುದು. ಇಂತಾ ಅವ್ಯವಸ್ಥೆ ಇರೋದ್ರಿದಂಲೇ ನಮ್ ದೇಶದಲ್ಲಿ ಪ್ರವಾಸ ಹೋಗಕ್ಕೇ ಬೇಜಾರು.

    ReplyDelete